ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

23ರವರೆಗೆ ವನ್ಯಜೀವಿಗಳ ಸಮೀಕ್ಷಾ ಕಾರ್ಯ: ದಯಾನಂದಕುಮಾರ್

Lingaraj Badiger
Updated On : 17 Dec 2013, 11:14 am

ಕ.ಪ್ರ. ವಾರ್ತೆ, ಚಿಂಚೋಳಿ, ಡಿ.16
ಡಿ.16ರಿಂದ 23ರವರೆಗೆ ಒಟ್ಟು 8 ದಿನಗಳ ಕಾಲ ವನ್ಯಜೀವಿಗಳ ಸಮೀಕ್ಷಾ ಕಾರ್ಯ ನಡೆಯಲಿದೆ. ಮೊದಲೆರಡು ದಿನಗಳ ಗಣತಿಗೆ ಪೂರಕವಾಗುವ ಸ್ಥಳಗಳನ್ನು ಗುರುತಿಸಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್) ದಯಾನಂದಕುಮಾರ್ ತಿಳಿಸಿದರು.
ಹೈ-ಕ ಪ್ರದೇಶದಲ್ಲಿಯೇ ಏಕೈಕ ಮಲೆನಾಡು ಪ್ರದೇಶವಾಗಿರುವ ಕುಂಚಾವರಂ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಬರುವ ಮಂಡಿ ಬಸವಣ್ಣ ಅರಣ್ಯ ಪ್ರದೇಶದಲ್ಲಿ(ಚಿಕ್ಕನಿಂಗದಳ್ಳಿ ಗಸ್ತು) ವನ್ಯಜೀವಿಗಳ ಗಣತಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಡು ಪ್ರಾಣಿಗಳ ಸಮೀಕ್ಷಾ ಕಾರ್ಯ ಡಿ.16ರಿಂದ ಪ್ರಾರಂಭವಾಗಿದ್ದು, ಮೊದಲೆರಡು ದಿನಗಳು ಸಮೀಕ್ಷೆ ಪೂರಕವಾಗುವ ಕಾಡು ಪ್ರಾಣಿಗಳು ವಾಸಿಸುವ ಸ್ಥಳಗಳನ್ನು ಗುರುತಿಸುವುದು ನಂತರ 18ರಿಂದ 20ರವರೆಗೆ ಹುಲಿ, ಚಿರತೆ ಮತ್ತಿತರ ಮಾಂಸಾಹಾರಿ ಪ್ರಾಣಿಗಳ ಸಮೀಕ್ಷೆ ನಡೆಯಲಿದೆ. ಇನ್ನುಳಿದ 3 ದಿನಗಳಲ್ಲಿ ಸಸ್ಯಾಹಾರಿ ಪ್ರಾಣಿಗಳ ಸಮೀಕ್ಷೆ ನಡೆಯಲಿದೆ. ಕೇವಲ 8 ದಿವಸಗಳಲ್ಲಿ ಕಾಡಿನಲ್ಲಿರುವ ಪ್ರತಿಯೊಂದು ಪ್ರಾಣಿಗಳ ಗಣತಿ ಕಾರ್ಯ ನಡೆಯಲಿದೆ ಎಂದರು.
ತಾಲೂಕು ವಲಯ ಅರಣ್ಯಾಧಿಕಾರಿ ಎಂ.ಎಲ್. ಭಾವಿಕಟ್ಟಿ ಮಾತನಾಡಿ, ತಾಲೂಕಿನಲ್ಲಿ ಐನೋಳಿ, ಕುಸರಂಪಳ್ಳಿ, ಕೊಳ್ಳೂರ, ಚಂದ್ರಂಪಳ್ಳಿ, ಕುಂಚಾವರಂ, ಶಾದೀಪುರ, ಚಿಕ್ಕನಿಂಗದಳ್ಳಿ, ಸೋಮಲಿಂಗದಳ್ಳಿ, ವೆಂಕಟಾಪುರ, ಧರ್ಮಾಸಾಗರ, ಸಂಗಾಪುರ, ಚಿಂಚೋಳಿ, ಕಲಬಾವಿ ಸೇರಿದಂತೆ ಒಟ್ಟು 16 ಗಸ್ತುಗಳಿವೆ ಎಂದರು.
ಪ್ರತಿಯೊಂದು ಗಸ್ತಿನಲ್ಲಿ 3 ಜನ ಸಿಬ್ಬಂದಿಯನ್ನು ನೇಮಿಸಲಾಗಿದೆ. ಒಟ್ಟು 5 ಕಿ.ಮೀ. ನಡೆದಾಗ ಕಾಡು ಪ್ರಾಣಿಗಳ ಹೆಜ್ಜೆ ಗುರುತು, ಹಿಕ್ಕಿ ಸೇರಿದಂತೆ ಔಷಧಿ ಸಸ್ಯ, ಕೂದಲು, ಎಲುಬು, ಹಸಿ ಹುಲ್ಲು, ಒಣ ಹುಲ್ಲು ಮುಂತಾದವುಗಳ ಸಮೀಕ್ಷೆ ನಡೆಸಲಾಗುವುದು. ಒಟ್ಟು 50 ಅರಣ್ಯ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ವಿವರಿಸಿದರು.
ಉಪ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ್ ಚವ್ಹಾಣ, ವೀರೇಂದ್ರ ಸಿ.ವೈ, ಅರಣ್ಯ ರಕ್ಷಕ ಹಣಮಂತರಾಯ ಬಿರಾದಾರ, ಮಹೇಶ, ನಿವೃತ್ತ ವಲಯ ಅರಣ್ಯಧಿಕಾರಿ ಸೈಯದ್ ಯೂನುಸ್ ಅಲಿ, ಕಿಸನ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement