ಸಮಾನತೆಗೆ ಶಿಕ್ಷಣ ಅಗತ್ಯ: ರಾಧಾಕೃಷ್ಣರಾವ
ಕ.ಪ್ರ. ವಾರ್ತೆ, ಸೇಡಂ, ಡಿ.16
ದೇಶದಲ್ಲಿ ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕಾದರೆ ಸಮಾಜದ ಕಟ್ಟಕಡೆಯ ಸಮುದಾಯಕ್ಕೂ ಶಿಕ್ಷಣ ಒದಗಿಸಬೇಕು ಎಂದು ಗುಲ್ಬರ್ಗ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ರಾಧಾಕೃಷ್ಣರಾವ ಹೇಳಿದರು.
ಸೇಡಂನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ತಾಲೂಕು ಘಟಕ ವತಿಯಿಂದ ಆಯೋಜಿಸಿದ್ದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಗುಣಮಟ್ಟದ ಶಿಕ್ಷಣದಿಂದ ಸದೃಢ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಶಿಕ್ಷಕರೂ ಆತ್ಮ ಸಾಕ್ಷಿಯಾಗಿ ಕೆಲಸ ಮಾಡಬೇಕು. ಮಕ್ಕಳ ಶಿಕ್ಷಣ ಗುಣಮಟ್ಟ ಮೇಲೆತ್ತರಕ್ಕೆ ಒಯ್ಯುವ ನಿಟ್ಟಿನಲ್ಲಿ ಅನುಸರಿಸಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಮೌಲ್ಯ ಕಣ್ಮರೆ: ಮಳಖೇಡ ದರ್ಗಾದ ಹಜರತ್ ಸೈಯದ್ ಶಹಾ ಮುಸ್ತಫಾ ಖಾದ್ರಿ ಪರಿಷತ್‌ನ ದಿನಚರಿ ಬಿಡುಗಡೆ ಮಾಡಿ ಮಾತನಾಡುತ್ತ, ಕೆಲ ವರ್ಷಗಳಿಂದ ಶಿಕ್ಷಣದಲ್ಲಿನ ಮೌಲ್ಯ ಕಣ್ಮರೆಯಾಗುತ್ತಿದೆ ಎಂದು ವಿಷಾದಿಸಿದರು.
ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಅದಕ್ಕೆ ಧಕ್ಕೆ ತರುವ ಕೆಲಸ ನಡೆದಿದೆ. ಶಿಕ್ಷಕರು ವೈಯಕ್ತಿಕ ಹಿತಾಸಕ್ತಿ ಬಯಸದೆ ಸಮಾಜವನ್ನು ಮುನ್ನಡೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಆಗ ದೇಶದಲ್ಲಿ ಅನಕ್ಷರತೆ ಹೋಗಲಾಡಿಸಲು ಸಾಧ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಶಿಖರ ಏರಲು ಸಾಧ್ಯ ಎಂದರು.
ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡುತ್ತ, ಶಿಕ್ಷಕ ಮತ್ತು ಸೈನಿಕನ ಕಾರ್ಯದಲ್ಲಿ ಭ್ರಷ್ಟತೆ ಇಲ್ಲ. ಮಾನವನ ಸರ್ವಾಂಗೀಣ ಅಭಿವೃದ್ಧಿಯ ಸಂಕೇತವೇ ಶಿಕ್ಷಣ. ಜ್ಞಾನ ಮತ್ತು ಕ್ರಿಯೆ ಏಕಕಾಲಕ್ಕೆ ಪ್ರದರ್ಶನವಾದಾಗ ಹೊಸ ಆವಿಷ್ಕಾರ ಸಾಧ್ಯ ಎಂದರು.
ದಿನದರ್ಶಿಕೆ ಬಿಡುಗಡೆ: ನಿಡಗುಂದಾ ಕಂಚಾಳಕುಂಟಿ ನಂದೀಶ್ವರ ಮಠದ ಕರುಣೇಶ್ವರ ಸ್ವಾಮೀಜಿ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದರು. ಶಿಕ್ಷಕರ ಪ್ರತಿಭಾ ಪರಿಷತ್ ಅಧ್ಯಕ್ಷ ಅಶೋಕರೆಡ್ಡಿ ಚಿಲುಮೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತರೆಡ್ಡಿ, ಪರಿಷತ್ ಜಿಲ್ಲಾಧ್ಯಕ್ಷ ಗುರುಪಾದ ಕೊಗನೂರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಲಯನ್ಸ್ ಕ್ಲಬ್ ಅಧ್ಯಕ್ಷ ಅಂಬಾರಾವ ಪಾಟೀಲ್, ಖಜಾನೆ ನಿವೃತ್ತ ಅಧಿಕಾರಿ ಶ್ರೀನಿವಾಸ ಕುಲಕರ್ಣಿ, ಉದ್ಯಮಿ ಬಸವರಾಜ ಚಂದನಕೇರಿ, ಶಿವಪುತ್ರ ದಿಗ್ಗಾಂವ ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಪ್ರಾಥಮಿಕ ವಿಭಾಗದಿಂದ ಮಹ್ಮದ್ ಜಲೀಲ್ ಸೇಡಂ, ಬ್ರಿಜ್‌ಮಾಲಾ ಕುರಕುಂಟಾ, ಗೌರಮ್ಮ ಅಳ್ಳೊಳ್ಳಿ, ಕಲ್ಯಾಣಕುಮಾರ್ ಬೀರನಹಳ್ಳಿ, ರುದ್ರಗೌಡ ವೆಂಕಟಾಪುರ ತಾಂಡಾ, ನೀಲಪ್ಪ ಇಟ್ಕಾಲ್, ಪ್ರೌಢ ವಿಭಾಗದಿಂದ ಶಿವಪ್ರಸಾದ್ ಬಟಗೇರಾ, ಸರವರ್ ಜಾಹನ್ ಮಳಖೇಡ, ರಾಜೇಂದ್ರ ಮದನಾ, ಬಾಬುರಾವ ಕುರಕುಂಟಾ, ಮಲ್ಲಿಕಾರ್ಜುನ ಪೂಜಾರಿ ಸೇಡಂ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ವಿಶ್ವಗಂಗಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಬಿರಾದಾರ ಅವರಿಗೆ ಯುವ ಶಿಕ್ಷಣ ಶಿಲ್ಪಿ ಪ್ರಶಸ್ತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ರಾಧಾಕೃಷ್ಣರಾವ ಪ್ರದಾನ ಮಾಡಿದರು.
ಶಿವಪುತ್ರ ದಿಗ್ಗಾಂವ ಸ್ವಾಗತಿಸಿದರು. ಅನ್ನಪೂರ್ಣ ಭಂಡಾರಕರ್ ನಿರೂಪಿಸಿದರು. ನೀಲಕಂಠ ವಂದಿಸಿದರು.