ಭವದ ಕ್ಲೇಶ ಕಳೆಯುವ ಕೇಶವ ಸ್ಮರಣೆ
ಕ.ಪ್ರ. ವಾರ್ತೆ, ಗುಲ್ಬರ್ಗ, ಡಿ.17
ಕೇಶವ ನಾಮಸ್ಮರಣೆ ಭವದ ಬೇಗೆಗೆ ಮದ್ದು, ಪರಮಾತ್ಮನ ಕೇಶವಾದಿ ಅನಂತ ರೂಪಗಳ ಸ್ಮರಣೆ ಎಲ್ಲರೂ ನಿತ್ಯ ಮಾಡಬೇಕು. ಇದೇ ಬದುಕಿನ ಕ್ಲೇಶಗಳ ಪರಿಹಾರ ಮದ್ದು ಎಂದು ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದರು ಭಕ್ತ ಜನಕ್ಕೆ ಕರೆ ನೀಡಿದರು.
ಪೂಜಾ ಕಾರ್ಯ: ಅಫಜಲ್ಪುರ ತಾಲೂಕಿನ ಭೀಮಾ ತೀರದಲ್ಲಿರುವ ಸುಕ್ಷೇತ್ರ ಮಣ್ಣೂರಲ್ಲಿ ಉತ್ತಪಾದಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದರು ಸೋಮವಾರ ಪಂಡಿತ ರಾಮಾಚಾರ್ಯ ಅವರ ನಿವಾಸದಲ್ಲಿ ಇತ್ತೀಚೆಗೆ ಮೂಲರಾಮ ದೇವರ ಪೂಜಾ ಕಾರ್ಯಗಳನ್ನು ನೆರವೇರಿಸಿದ ಸಾಯಂಕಾಲ ಶ್ರೀ ವೇದೇಶ- ಶ್ರೀ ಮಾಧವ ತೀರ್ಥರ ವೃಂದಾವನ ಅಂಗಳದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಗುಲ್ಬರ್ಗ ರಘುನಾಥತೀರ್ಥ ಅಧ್ಯಯನಾಶ್ರಮದ ಪಿಡಂತ ರಾಮಾಚಾರ್ಯ ಅವಧಾನಿ ಅವರು ಚೆನ್ನಕೇಶವ ದೇವರ ಜಯಂತಿ ಬೆಳೆದು ಬಂದ ಬಗೆ, ರಥೋತ್ಸವ ವಿಶೇಷಗಳನ್ನೆಲ್ಲ ಮೆಲಕು ಹಾಕಿದರು.
ರಾಘವೇಂದ್ರಾಚಾರ್ಯ ನಾಗರಾಳ, ಗುಲ್ಬರ್ಗದ ಪ್ರಸನ್ನಾಚಾರ್ಯ, ಆದ್ಯ ವರದರಾಜಾಚಾರ್ಯ, ವೇದೇಶತೀರ್ಥ ವಿದ್ಯಾಪೀಠದ ಕುಲಪತಿ ಅನಂತಾಚಾರ್ಯ ಅಕ್ಮಂಚಿ ಉಪನ್ಯಾಸ ನೀಡುವ ಮೂಲಕ ಅನೇಕ ಧಾರ್ಮಿಕ ವಿಷಯಗಳ ಚಿಂತನೆಗೆ ವೇದಿಕೆ ರೂಪಿಸಿದರು. ಜ್ಞಾನಾತ್ಮತೀರ್ಥರು ಉಪಸ್ಥಿತರಿದ್ದರು.
ಮಣ್ಣೂರಲ್ಲಿ ಭಕ್ತರ ಸಂಗಮ: ಭೀಮಾ ನದಿಯಿಂದಾಗಿ ಪವಿತ್ರತೆ ಹೊದಿಕೆ ಹೊದ್ದಿರುವ ಮಣ್ಣುರಲ್ಲಿ ಉತ್ತರಾದಿ ಮಠಾಧೀಶರ ಆಗಮನ ಭಕ್ತರ ಸಂತಸಕ್ಕೆ ಕಾರಣವಾಗಿತ್ತು. ಸೋಮವಾರ ಬೆಳಗ್ಗೆಯೇ ವೃಂದಾವನ ಸಮುಚ್ಛದಯಲ್ಲಿ 2 ಗಂಟೆಗಳ ಸುದೀರ್ಘ ಪಾಠಪ್ರವಚನ ಪೂರೈಸಿದ ಶ್ರೀಗಳು ನಂತರ ಭಕ್ತರೆಲ್ಲರ ಮನೆಗಳಿಗೆ ಪಾದಯಾತ್ರೆ ಬೆಳೆಸಿ ಹರಸಿದರು. ಇದೇ ಸಂದರ್ಭದಲ್ಲಿ ತಪ್ತಮುದ್ರಾಧಾರಣೆಯೂ ನಡೆಯಿತು.
ಬಿಜಾಪುರ, ಸೊಲ್ಲಾಪುರ, ಗುಲ್ಬರ್ಗ, ಅಕ್ಕಲಕೋಟೆ, ಹೈದ್ರಾಬಾದ್, ಇಂಡಿ, ಬಾಗಲಕೋಟೆ ಸೇರಿದಂತೆ ರಾಜ್ಯದ ಹಾಗೂ ಅಕ್ಕಪಕ್ಕದ ರಾಜ್ಯಗಳಿಂದ ಭಕ್ತರು ಮಣ್ಣೂರಿಗೆ ಆಗಮಿಸಿ ಚೆನ್ನಕೇಶವ, ವೇದೇಶ ತೀರ್ಥರು, ಮಾಧವತೀರ್ಥರ ಕೃಪೆಗೆ ಪಾತ್ರರಾದರು. ಸತ್ಯಾತ್ಮತೀರ್ಥ ಶ್ರೀಗಳ ಪಾಜಪೂಜೆ ಮಾಡಿ ಕೃತಾರ್ಥರಾದರು.