ಸಮಾಜಮುಖಿ ಚಿಂತನೆ ಬೆಳೆಯಲಿ
ಕ.ಪ್ರ. ವಾರ್ತೆ, ಸೇಡಂ, ಡಿ.17
ನಾಟಕಕಾರರು ಪ್ರಸಕ್ತ ದಿನಗಳಲ್ಲಿ ಸಮಾಜಮುಖಿ ಚಿಂತನೆಗಳನ್ನು ಆಧರಿಸಿ, ಜನರಿಗೆ ಒಳ್ಳೆಯ ಸಂದೇಶವನ್ನು ಮುಟ್ಟಿಸುವ ಕೆಲಸ ಮಾಡಬೇಕೆಂದು ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಎಲ್.ಬಿ.ಕೆ. ಆಲ್ದಾಳ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಸಮಾನ ಮನಸ್ಕರ ಸಾಹಿತ್ಯ ವೇದಿಕೆ ಹಾಗೂ ಮಯೂರ ಪ್ರಕಾಶನ ಹೇಮನೂರು ಉದ್ಘಾಟನೆ ಹಾಗೂ ಭೀಮರಾಯ ಹೇಮನೂರು ರಚಿತ 'ಯಾರು ಒಳ್ಳೆಯವರು, ಯಾರು ಕೆಟ್ಟವರು' ಎಂಬ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದ ಸಮಸ್ಯೆ ಬಿಂಬಿಸಿ: ನಾಟಕ ಸಾಹಿತ್ಯಕ್ಕೆ ವಿಶೇಷವಾದ ಸಾಮರ್ಥ್ಯ, ನೇರವಾಗಿ ಜನರ ಮನಸ್ಸಿನಲ್ಲಿ ಬೇರೂರುವಂತಹ ಶಕ್ತಿ ಇದೆ. ನಾಟಕಕಾರರು ನಾಟಕಗಳನ್ನು ಬರೆಯುವಾಗ ಪ್ರಾಯೋಗಿಕವಾಗಿ ಆಗುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಕಡೆಯ ಕೊಂಡಿ ಕಳಚದಂತೆ ಬರೆಯಬೇಕು ಎಂದರು.
ಖ್ಯಾತ ನಾಟಕಕಾರ ಶರಣಪ್ಪ ಹಾಲಭಾವಿ ಮಾತನಾಡಿ, ಭೀಮರಾಯ ಹೇಮನೂರು ಅವರು ಬರೆದ ಸಾಮಾಜಿಕ ನಾಟಕ ಜನಮನ ಗೆಲ್ಲುವುದರಲ್ಲಿ ಸಂದೇಹವಿಲ್ಲ. ರಂಗ ಕ್ಷೇತ್ರಕ್ಕೆ ಮತ್ತೊಬ್ಬ ಒಳ್ಳೆಯ ನಾಟಕಕಾರ ಸಿಕ್ಕಂತಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ನಾಗಯ್ಯಸ್ವಾಮಿ ಬೊಮ್ನಳ್ಳಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಹಿರಿಯ ಸಾಹಿತಿ ನರಸಿಂಗರಾವ ಹೇಮನೂರ ಮಾತನಾಡಿದರು. ಡಾ. ಬಿದರಿ ಚಂದ್ರಕಲಾ ಅಧ್ಯಕ್ಷತೆ ವಹಿಸಿದ್ದರು. ಶ್ರೀಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲೇಖಕ ಭೀಮರಾಯ ಹೇಮನೂರ ಪ್ರಾಸ್ತಾವಿಕ ಮಾತನಾಡಿದರು.
ಸ್ವರಸಿಂಧು ಸಂಗೀತ ಶಾಲೆಯ ಮಕ್ಕಳು ವಚನ ಗಾಯನ ಮಾಡಿದರು. ಮುರುಗೆಪ್ಪ ಕುರಕುಂಟಾ ಸ್ವಾಗತ ಗೀತೆ ಹಾಡಿದರು. ಬಿ.ಆರ್. ಅಣ್ಣಾಸಾಗರ ಸ್ವಾಗತಿಸಿದರು. ಅನ್ನಪೂರ್ಣ ಭಂಡಾರಕರ್ ಕಾರ್ಯಕ್ರಮ ನಿರೂಪಿಸಿದರು. ಸುವರ್ಣ ದೊಡ್ಡಮನಿ ವಂದಿಸಿದರು.