ಇಳುವರಿಯಲ್ಲಿ ನಷ್ಟ; ವರದಿ ಶೀಘ್ರ ಸಿದ್ಧ
ಚಿಂಚೋಳಿ: ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ತೊಗರಿ ಒಟ್ಟು 48,555 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಅಲ್ಪಾವಧಿ ತಳಿಗಳಾದ ಟಿಎಸ್‌ಆರ್ 3 ತೊಗರಿಯೂ ಮಾಗುವ ಮತ್ತು ಕಟಾವಿನ ಹಂತದಲ್ಲಿದೆ.
ಆದರೆ, ದೀರ್ಘಾವಧಿ ತಳಿಗಳಾದ ಮಾರುತಿ, ಡಬಲ್ ಮೂಕಿ, ಬಿಎಸ್‌ಆರ್ ಮತ್ತು ಆಶಾ ತಳಿಗಳು ನೆನೆ ಹಾಗೂ ಹೂ ಮತ್ತು ಚಳ್ಳಿ ಹಂತದಲ್ಲಿದ್ದು, ಬೆಳೆಗಳು ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದ ಮುಂಜಾವಿನ ಜಾವದಲ್ಲಿ ಮಂಜು ಬಿದ್ದ ಕಾರಣದಿಂದ ನೆನೆ ಹೂ ಮತ್ತು ಚೆಳ್ಳಿ ಉದುರಿದ್ದು ಕಂಡು ಬಂದಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಜಾನಕಿಬಾಯಿ ಬಳವಾಟ್ ತಿಳಿಸಿದ್ದಾರೆ.
ವಿಜ್ಞಾನಿಗಳ ತಂಡದೊಂದಿಗೆ ಕೃಷಿ ಅಧಿಕಾರಿಗಳು ತೊಗರಿ ಬೆಳೆಯ ಐನೋಳಿ, ದೇಗಲಮಡಿ, ಕೊಳ್ಳುರ, ಫತ್ತೇಪುರ, ನಾಗಾಇದಲಾಯಿ, ತುಮಕುಂಟಾ, ಸಾಲೇಬೀರನಳ್ಳಿ, ಚಿಮ್ಮನಚೋಡ, ಐನಾಪುರ, ಚೇಂಗಟಾ, ಪಸ್ತಪುರ, ರುಮ್ಮನಗೀಡ, ಕರಚಖೇಡ, ಭಕ್ತಂಪಳ್ಳಿ, ಸುಲೇಪೇಟ್, ಗಡಿಕೇಶ್ವರ, ರಾಯಕೋಡ, ಹೋಡೇಬೀರನಳ್ಳಿ ಮತ್ತು ಕೊರವಿ ಮುಂತಾದ ಹೂ ಮತ್ತು ನೆನೆ ಉದುರಿದ ಗ್ರಾಮಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಲಾಗಿದೆ. ಆದರೆ ತಾಲೂಕಿನಲ್ಲಿ ಹಾನಿಗೊಳಗಾದ ಕ್ಷೇತ್ರ ಮತ್ತು ಎಷ್ಟು ಇಳುವರಿಯಲ್ಲಿ ನಷ್ಟದ ಬಗ್ಗೆ ರೈತರಿಗೆ ಮತ್ತು ಸರ್ಕಾರಕ್ಕೆ ವರದಿ ನೀಡಲಾಗುವುದು ತಿಳಿಸಿದ್ದಾರೆ.