ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾಗಿಣಾ; ಮರಳು ದಂಧೆ

Mainashree
Updated On : 20 Dec 2013, 11:07 am

ಕ.ಪ್ರ. ವಾರ್ತೆ  ಚಿತ್ತಾಪುರ  ಡಿ.19
ಜಿಲ್ಲಾಡಳಿತದ ನಿಷೇಧದ ನಡುವೆಯೂ ತಾಲೂಕಿನ ಕಾಗಿಣಾ ನದಿಯ ಒಡಲಲ್ಲಿ ಅಕ್ರಮವಾಗಿ ಮರಳು ದಂಧೆ ನಿರಂತಕವಾಗಿ ನಡೆಯುತ್ತಿದ್ದು, ಸರ್ಕಾರಿ ಆದೇಶವನ್ನು ಬಹಿರಂಗವಾಗಿ ಗಾಳಿಗೆ ತೂರಲಾಗುತ್ತಿದೆ.
ಅಕ್ರಮವಾಗಿ ಮರಳುಗಾರಿಕೆಯಿಂದ ಕಾಗಿಣಾ ನದಿ ಬತ್ತುತ್ತಿದ್ದು, ನದಿ ಪಾತ್ರದಲ್ಲಿ ಮಣ್ಣು ತೇಲಿ ಜೇಕು, ಹುಲ್ಲು, ಗಿಡಗಂಟಿ ಬೆಳೆದು ಅಂತರ್ಜಲ ಮಟ್ಟ ಕುಸಿದಿರುವುದರಿಂದ ಕುಡಿಯುವ ನೀರಿನ ಜೀವನದಿಯಾಗಿದ್ದ ದಡ ತೀರದ ಹಲವು ಗ್ರಾಮಗಳಿಗೆ ನೀರಿನ ಸಮಸ್ಯೆ ಎದುರಾಗಿದೆ.
ತಾಲೂಕಿನ ಚಿತ್ತಾಪುರ, ದಂಡೋತಿ, ಕದ್ದರಗಿ, ಮುಡಬೂಳ, ಭಾಗೋಡಿ, ಸೇರಿ ಅನೇಕ ಗ್ರಾಮಗಳಲ್ಲಿ ಈ ನದಿಯ ನೀರೇ ಕುಡಿಯುವ ನೀರಿಗೆ ಆಧಾರ. ಇಂತಹ ನದಿಯಲ್ಲಿ ಮರಳು ಖಾಲಿಯಾಗಿ ಅಲ್ಲಿ ಜೇಕು, ಗಿಡಗಳು ಬೆಳೆದು ಅಲ್ಲಿ ನದಿಯಲ್ಲಿ ನೀರಿನ ಹರಿವು ಇಲ್ಲದಂತೆ ಆಗುತ್ತಿದೆ.
ಇಲ್ಲಿ ಹತ್ತಾರು ವರ್ಷಗಳಿಂದ ಅಕ್ರಮ ಮರಳು ಸಾಗಣೆ ನಡೆಯುತ್ತಲೇ ಇತ್ತು. ಈಗ ಜಿಲ್ಲಾಡಳಿತ ಮರಳು ಸಾಗಣೆಯನ್ನು ನಿಷೇಧಿಸಿರುವುದು ನೋಡಿದರೆ, 'ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ' ಆಗಿದೆ.
ಬಿಜೆಪಿ, ಕಾಂಗ್ರೆಸ್ ನಾಯಕರ ಕೆಸರೆರಚಾಟ: ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರು ಇತ್ತೀಚೆಗೆ ಚಿತ್ತಾಪುರದಲ್ಲಿ ಕೆಲ ಪತ್ರಿಕೆಗಳಿಗೆ ಹೇಳಿಕೆ ನೀಡಿ, ತಾಲೂಕಿನಲ್ಲಿ ಕಾಂಗ್ರೆಸ್‌ನವರು ಅಕ್ರಮ ಮರಳು ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ನಾಗರೆಡ್ಡಿ ಪಾಟೀಲ್ ಕರದಾಳ ತಮ್ಮ ಅಧಿಕಾರವಧಿಯಲ್ಲಿ ನಡೆದ ಮರಳು ಸಾಗಣೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ಈಗ ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಇದರಲ್ಲಿ ಭಾಗಿಯಾಗಿಲ್ಲ. ತಮ್ಮ ಬಿಜೆಪಿ ಪಕ್ಷದವರು ಭಾಗಿಯಾಗಿದ್ದಾರೆಂದು ಪ್ರತಿ ಹೇಳಿಕೆ ನೀಡಿರುವುದು ನೋಡಿದರೆ ಎರಡೂ ಪಕ್ಷಗಳ ನಾಯಕರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡರು ಎಂಬತ್ತೆ ವರ್ತಿಸುತ್ತಿದ್ದಾರೆ ಎಂದು ಜನರು ಆಡಿಕೊಳ್ಳುವಂತಾಗಿದೆ.
ಎಲ್ಲ ಪಕ್ಷಗಳ ಪ್ರಭಾವಿ ವ್ಯಕ್ತಿಗಳು ತಮ್ಮ ಅಧಿಕಾರ, ಹಣಬಲ ಬಳಸಿಕೊಂಡು ಅಕ್ರಮ ಮರಳು ಸಾಗಣೆ ದಂಧೆ ನಡೆಸುತ್ತಿರುವುದರಿಂದ ಅಕ್ರಮ ಮರಳು ಸಾಗಣೆಯಲ್ಲಿ ಎಲ್ಲ ಪಕ್ಷಗಳ ಪಾಲು ಇರಬಹುದೆಂದು ಸಂಶಯ ಜನರಲ್ಲಿ ಮೂಡುತ್ತಿದೆ.
ನೈಸರ್ಗಿಕ ಸಂಪತ್ತನ್ನು ಅಕ್ರಮವಾಗಿ ಲೂಟಿ ಮಾಡಲು ಯಾರಿಗೂ ಅವಕಾಶವಿಲ್ಲ. ಕಾರಣ ಪರಿಸರಕ್ಕೆ ಧಕ್ಕೆ. ಹೀಗಿರುವಾಗ ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಜಿಲ್ಲಾಡಳಿತ, ಕಂದಾಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೌನವಾಗಿರುವುದು ಸರಿಯಲ್ಲ. ಇದೇ ರೀತಿ ಮುಂದುವರೆದಲ್ಲಿ ಜನರು ಇದರ ಬಗ್ಗೆ ದಂಗೆ ಏಳಬೇಕಾಗುತ್ತದೆ ಎಂದು ಪ್ರಗತಿಪರರು ಹಾಗೂ ಸಂಘ-ಸಂಸ್ಥೆಗಳ ಮುಖಂಡರಿಂದ ಎಚ್ಚರಿಕೆ ಮಾತಗಳು ಕೇಳಿಬರುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement