ಕುಡಿವ ನೀರು ಕಾಮಗಾರಿಗೆ ಶಾಸಕ ಜಾಧವ ಅಡಿಗಲ್ಲು
ಕ.ಪ್ರ. ವಾರ್ತೆ ಚಿಂಚೋಳಿ ಡಿ.19
ತಾಲೂಕಿನ ಕುಂಚಾವರಂ ಗ್ರಾಪಂ ವ್ಯಾಪ್ತಿಯ ಶಿವರಾಮಪುರದಲ್ಲಿ 2013- 14ನೇ ಸಾಲಿನ ರಾಷ್ಟ್ರಿಯ ಕುಡಿವ ನೀರು ಸರಬರಾಜು ಯೋಜನೆ ನಿರ್ಮಾಣದ 20 ಲಕ್ಷ ವೆಚ್ಚದ ಕಾಮಗಾರಿಯ ಅಡಿಗಲ್ಲು ಸಮಾರಂಭವನ್ನು ಶಾಸಕ ಡಾ. ಉಮೇಶ ಜಾಧವ ಉದ್ಘಾಟಿಸಿದರು.
ಗ್ರಾಮದ ಮುಖಂಡ ಶ್ರೀನಿವಾಸ ಮಾತನಾಡಿ, ಶಿವರಾಮಪುರ ಗ್ರಾಮವು ಆಂಧ್ರ ಗಡಿಯಲ್ಲಿದೆ ಸರ್ಕಾರದ ಯೋಜನೆಗಳು ನಮ್ಮ ಗ್ರಾಮಕ್ಕೆ ಸಿಗುತ್ತಿಲ್ಲ. ಚರಂಡಿ, ಬೀದಿ ದೀಪಗಳಿಲ್ಲ, ವಿದ್ಯುತ್ ಸಮಸ್ಯೆಯಿಂದಾಗಿ ನಮ್ಮ ಗ್ರಾಮದಲ್ಲಿ ತೊಂದರೆಯಾಗಿದೆ. ರಾತ್ರಿ ಕಳ್ಳರು ಬಂದರು ಸಹ ಗೊತ್ತಾಗುವುದಿಲ್ಲ ಎಂದರು.
ಕೊರತೆಗಳ ಸಾಲು: ಅನೇಕ ಬಡವರಿಗೆ ಮನೆಗಳಿಲ್ಲ, ಗುಡಿಸಲು ಮನೆಗಳೇ ಇವೆ. ಶೌಚಾಲಯವಿಲ್ಲ, ಕನ್ನಡ ಮತ್ತು ತೆಲುಗು ಮಾಧ್ಯಮ ಶಾಲೆ 1ರಿಂದ 5ನೇ ತರಗತಿಯವರೆಗೆ ಶಾಲೆಯಿದೆ. ಅಲ್ಲೂ ಶಿಕ್ಷಕರ ಕೊರತೆಯಿದೆ. ನಮ್ಮ ಗ್ರಾಮವು ಅತ್ಯಂತ ನಿರ್ಲಕ್ಷ್ಯತನಕ್ಕೆ ಒಳಗಾಗಿದೆ, ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ಒತ್ತಾಯಿಸಿದರು.
ಸಮಸ್ಯೆ ಪರಿಹರಿಸುವ ಭರವಸೆ: ಶಾಸಕ ಡಾ. ಉಮೇಶ ಜಾಧವ ಸಾರ್ವಜನಿಕರ ಸಮಸ್ಯೆ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ತಾಲೂಕಿನ ಆಂಧ್ರ ಗಡಿಯಲ್ಲಿರುವ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ. ಸದ್ಯ ಕುಡಿವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಲಾಲಪ್ಪ, ಎಇಇ ರೇವಣಸಿದ್ದಪ್ಪ ಹಾಗರಗಿ, ಲಕ್ಷ್ಮಣ ಆವಂಟಿ, ಅಬ್ದುಲ್ ಬಾಸಿತ, ಚಿರಂಜೀವಿ, ಎಲ್.ವೆಂಕಟರೆಡ್ಡಿ, ಪ್ರಭು, ತಾಪಂ ಸದಸ್ಯ ನರಸಿಂಹಲು ಕುಂಬಾರ, ಕಾಂಗ್ರೆಸ್ ಮುಖಂಡ ನರಸಿಂಹ ಸವಾರಿ, ಪುರುಷೋತ್ತಮ ಇತರರು ಇದ್ದರು. ಕುಂಚಾವರಂ ಪಿಡಿಒ ಸಂಜೀವಕುಮಾರ್ ಸ್ವಾಗತಿಸಿದರು. ಜೆಇ ಕಲಿಮೋದ್ದೀನ್ ಕಾರ್ಯಕ್ರಮ ನಿರೂಪಿಸಿದರು.