ಗ್ರಾಪಂನಲ್ಲಿ ಭ್ರಷ್ಟಾಚಾರ: ಧರಣಿ
ಯಾದಗಿರಿ: ತಾಲೂಕಿನ ದೋರನಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಸಮತಾ ಸೈನಿಕ ದಳ ಹಾಗೂ ಆರ್‌ಪಿಐ ಜಂಟಿಯಾಗಿ ಗ್ರಾಪಂ ಮುಂದೆ ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.
ಪರಿಶಿಷ್ಟ ಜನಾಂಗಕ್ಕೆ ನೀಡಬೇಕಾದ ಇಂದಿರಾ ಆವಾಸ್ ಹಾಗೂ ಬಸವ ವಸತಿ ಯೋಜನೆ ಮನೆಗಳನ್ನು ಗ್ರಾಮ ಸಭೆ ನಡೆಸದೇ ಹಂಚಲಾಗಿದೆ. ಅಲ್ಲದೇ ಮನೆ ಇದ್ದವರಿಗೆ 2-3 ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೂಡಲೇ ಅಕ್ರಮವಾಗಿ ಮನೆ ಹಂಚಿಕೆ ಮಾಡಿರುವುದನ್ನು ರದ್ದು ಪಡಿಸಿ ಹೊಸದಾಗಿ ಗ್ರಾಮಸಭೆ ನಡೆಸಿ ಮನೆಗಳನ್ನು ಹಂಚಿಕೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದಲ್ಲದೇ 13ನೇ ಹಣಕಾಸು ಯೋಜನೆಯಡಿ ಶೌಚಾಲಯ ನಿರ್ಮಾಣದಲ್ಲೂ ಭಾರಿ ಅವ್ಯವಹಾರ ನಡೆದಿದ್ದು, ಎಲ್ಲ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಸಮತಾ ಸೈನಿಕ ದಳ ಅಧ್ಯಕ್ಷ ಮಹಾದೇವಪ್ಪ ದಿಗ್ಗಿ, ಮಾನಪ್ಪ ಟೋಕಾಪುರ, ಶಹಾಪುರ ತಾಲೂಕು ಅಧ್ಯಕ್ಷ ನಿಂಗಪ್ಪ ಕಸನ್, ಉಪಾಧ್ಯಕ್ಷ ತಿಪ್ಪಣ್ಣ ಸಾಹು, ಕಾರ್ಯದರ್ಶಿ ಪುರುಷೋತ್ತಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.