ರಾಜ್ಯ ಮಟ್ಟದಲ್ಲಿ ದ್ವಿತೀಯ
ಗುಲ್ಬರ್ಗ: ನಗರದ ಅಮೋಘ ಸಿರನೂರಕರ್ ರಾಜ್ಯಮಟ್ಟದ ಯುವ ಜನೋತ್ಸವದ ಆಶು ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಮಂಡ್ಯ ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಮಂಡ್ಯ ಸಮೀಪದ ಕೀಲಾರ ಗ್ರಾಮದಲ್ಲಿ ನಡೆದ ರಾಜ್ಯ ಯುವಜನೋತ್ಸವ 2013-14ರ ಆಶುಭಾಷಣ ಸ್ಪರ್ಧೆಯಲ್ಲಿ ಅಮೋಘ ಮಾಡಿದ ಆಂಗ್ಲ ಭಾಷಣಕ್ಕೆ ದ್ವಿತೀಯ ಸ್ಥಾನ ಬಂದಿದೆ. ಹೊಸ ರಾಜ್ಯಗಳ ನಿರ್ಮಾಣ ಎಂಬುದು ಅವರಿಗೆ ಬಂದ ವಿಷಯವಾಗಿತ್ತು. ಎರಡನೇ ಬಹುಮಾನವು 3000 ನಗದು, ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ಒಳಗೊಂಡಿದೆ. ಯುವಜನೋತ್ಸವದ ಮುಕ್ತಾಯ ಸಮಾರಂಭದಲ್ಲಿ ವಿಧಾನ ಪರಿಷತ್ತಿನ ಮಾಜಿ ವಿರೋಧ ಪಕ್ಷದ ನಾಯಕಿ ಮೋಟಮ್ಮ ಅವರು ಬಹುಮಾನ ವಿತರಣೆ ಮಾಡಿದರು. ರಾಜ್ಯದ ವಸತಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯುವ ಜನೋತ್ಸವದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದ್ದ ಅಮೋಘನನ್ನು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಕಳುಹಿಸಿಕೊಡಲಾಗಿತ್ತು. ಎಲ್ಲ ಜಿಲ್ಲೆಗಳಿಂದ ಸುಮಾರು 1,500 ಸ್ಪರ್ಧಾಳುಗಳು ಯುವಜನೋತ್ಸವದಲ್ಲಿ ಭಾಗವಹಿಸಿದ್ದರು.