ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಐಟಿಐಗಳಿಗೆ ಸೌಲಭ್ಯ ಯಾವಾಗ?

Lingaraj Badiger
Updated On : 21 Dec 2013, 11:48 am

ಕನ್ನಡಪ್ರಭ ವಾರ್ತೆ   ಗುಲ್ಬರ್ಗ    ಡಿ.20
ರಾಜ್ಯದಲ್ಲಿರುವ 158 ಸರ್ಕಾರಿ ಐಟಿಐಗಳಲ್ಲಿ ಲಭ್ಯವಿರುವ ವಿವಿಧ ಟ್ರೇಡ್ಗಳ 30 ಸಾವಿರ ಸೀಟುಗಳಲ್ಲಿ 21 ಸಾವಿರ ಮಾತ್ರ ಭರ್ತಿಯಾಗಿದ್ದು, ಇನ್ನೂ 9 ಸಾವಿರ ಸೀಟುಗಳು ಖಾಲಿ ಬಿದ್ದಿವೆ. ಯಾಕೆ ಸೀಟುಗಳು ಖಾಲಿ ಬಿದ್ದವು, ವಿದ್ಯಾರ್ಥಿಗಳು ಯಾಕೆ ಸರ್ಕಾರಿ ಐಟಿಐಗಳತ್ತ ಹೆಜ್ಜೆ ಹಾಕುತ್ತಿಲ್ಲ ಎಂಬ ಪ್ರಶ್ನೆಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಇಂತಹ ನೀರಸ ವಾತಾವರಣ ರಾಜ್ಯದ ಸರ್ಕಾರಿ ಐಟಿಐಗಳ ಪ್ರವೇಶಾತಿ ಸುತ್ತಮುತ್ತ ಕಂಡಿರುವಾಗಲೇ ಮತ್ತೆ ಹಿಂದುಳಿದ ತಾಲೂಕುಗಳಲ್ಲಿ 100 ಐಟಿಐ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿರುವುದು ಶಿಕ್ಷಣ ಪ್ರೇಮಿಗಳ ಹುಬ್ಬು ಮೇಲೇರುವಂತೆ ಮಾಡಿದೆ.
9 ಸಾವಿರ ಸೀಟು ಖಾಲಿ: ಕಳೆದೆರಡು ವರ್ಷಗಳಿಂದ ರಾಜ್ಯದ ಐಟಿಐ ಪ್ರವೇಶ ಸಂಪೂರ್ಣ ಗಣಕೀಕರಣಗೊಂಡಿದೆ. ಆನ್ಲೈನ್ ಪ್ರವೇಶ ನಡೆಯುವುದರಿಂದ ಯಾವ ಕಾಲೇಜಲ್ಲಿ ಎಷ್ಟು ಸೀಟುಗಳು ಖಾಲಿ ಬಿದ್ದಿವೆ ಎಂಬುದು ತಕ್ಷಣ ಲೆಕ್ಕಕ್ಕೆ ದೊರಕುತ್ತದೆ. “OÚ«Ú­sÚ®ÚúڒOæQ ಲಭ್ಯ ಖಚಿತ ಮಾಹಿತಿಗಳ ಪ್ರಕಾರ- ರಾಜ್ಯದಲ್ಲಿರುವ ಸರ್ಕಾರಿ ಐಟಿಐಗಳ 30 ಸಾವಿರ ಪ್ರವೇಶಾವಕಾಶದಲ್ಲಿ ವಿದ್ಯಾರ್ಥಿಗಳು ಕೇವಲ 21 ಸಾವಿರ ಮಾತ್ರ ಬಳಸಿಕೊಂಡಿದ್ದು ಇನ್ನೂ 9 ಸಾವಿರ ಸೀಟುಗಳು ಖಾಲಿ ಬಿದ್ದಿವೆ.
ಅದರಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದ ಅವಧಿ(2007- 08)ಯಲ್ಲಿ 47 ಹೊಸ ಐಟಿಐಗಳನ್ನು ಸ್ಥಾಪಿಸಲಾಗಿತ್ತು. ಈ ಐಟಿಐಗಳಲ್ಲಿಯೂ ಸೀಟುಗಳು ಖಾಲಿ ಬಿದ್ದಿವೆ. ಹೀಗಿರುವಾಗ ಸರ್ಕಾರ ಮತ್ಯಾಕೆ 100 ಹೊಸ ಐಟಿಐ ಸ್ಥಾಪನೆಗೆ ಮುಂದಾಗಿದೆ ಎಂಬುದೇ ಯಕ್ಷಪ್ರಶ್ನೆ.
ಕಟ್ಟಡವಿಲ್ಲ, ಬೋಧಕರಿಲ್ಲ: ರಾಜ್ಯದ ಸರ್ಕಾರಿ ಐಟಿಗಳ ಪೈಕಿ ಶೇ.75ಕ್ಕೆ ಕಟ್ಟಡಗಳೇ ಇಲ್ಲ, ಇನ್ನು ಶೇ.50ಕ್ಕೂ ಅಧಿಕ ಐಟಿಐಗಳಲ್ಲಿ ಕಿರಿಯ ತರಬೇತಿ ಅಧಿಕಾರಿ (ಜೆಟಿಒ)ಗಳ ಹುದ್ದೆಗಳು ಭಣಗುಡುತ್ತಿವೆ. ಹೀಗಿರುವಾಗ ಮಕ್ಕಳು ಇಂತಹ ಐಟಿಐಗಳಲ್ಲಿ ಪ್ರವೇಶ ಪಡೆದರೂ ಗುಣಮಟ್ಟದ ಬೋಧನೆ ಅಲ್ಲಿ ಮರೀಚಿಕೆಯಾಗುತ್ತಿದೆ. ಇದರಿಂದಲೇ ಸರ್ಕಾರಿ ಐಟಿಐಗಳತ್ತ ಮುಖ ಮಾಡಲು ವಿದ್ಯಾರ್ಥಿಗಳು ಹಿಂಜರಿಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟು 158 ಐಟಿಐಗಳ ಪೈಕಿ 85ಕ್ಕೆ ಕಟ್ಟಡಗಳೇ ಇಲ್ಲ. ಇವೆಲ್ಲ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. 2007- 08ರಲ್ಲಿ ಸ್ಥಾಪನೆಯಾಗಿರುವ 47 ಐಟಿಐಗಳ ಪೈಕಿ ಹೊಸಕೋಟೆ, ಉದಯಪುರ ಹಾಗೂ ಜೋಗೂರ್ ಹೊರತುಪಡಿಸಿದರೆ ಯಾವ ಕಾಲೇಜುಗಳಿಗೂ (43 ಐಟಿಐಗಳು) ಸ್ವಂತ ಕಟ್ಟಡವಿಲ್ಲ. ಇನ್ನೂ ಗಮನಾರ್ಹ ವಿಚಾರವೆಂದರೆ- ಹೊಸ 43 ಐಟಿಐಗಳ ಪೈಕಿ 26 ಐಟಿಐಗಳಲ್ಲಿರುವ ವಿವಿಧ ಟ್ರೇಡ್ಗಳಿಗೆ ಎನ್ಸಿವಿಟಿ ರಾಷ್ಟ್ರೀಯ ಪರಿಷತ್ತಿನ ಮಾನ್ಯತೆಯೇ ಇಲ್ಲ. ಕೇವಲ ರಾಜ್ಯ ವೃತ್ತಿ ಶಿಕ್ಷಣ ಪರಿಷತ್ತಿನ (ಎಸ್ಸಿವಿಟಿ) ಮಾನ್ಯತೆಯೊಂದಿಗೆ ಈ ಐಟಿಐ ಟ್ರೇಡ್ಗಳು ನಡೆಯುತ್ತಿವೆ. ರಾಜ್ಯ ವೃತ್ತಿ ಶಿಕ್ಷಣ ಮಾನ್ಯತೆ ಎಂದರೆ ಕೇವಲ ರಾಜ್ಯಕ್ಕೆ ಮಾತ್ರ ಸೀಮಿತ. ರಾಷ್ಟ್ರೀಯ ಮಾನ್ಯತೆ ದೊರಕಿದರೆ ಮಾತ್ರ ದೇಶ- ವಿದೇಶಗಳಲ್ಲಿ ಐಟಿಐ ಶಿಶುಕ್ಷುಗಳಿಗೆ ಬೇಡಿಕೆ. ಇಲ್ಲದೆ ಹೋದರೆ ವ್ಯರ್ಥ.
ನೂರಾರು ಕೋಟಿ ವೆಚ್ಚಕ್ಕೆ ಸಿದ್ಧತೆ: ಹೊಸ 100 ಐಟಿಐಗಳ ಸ್ಥಾಪನೆಗೆ ಸರ್ಕಾರ ತಲಾ 10 ಕೋಟಿಯಂತೆ ನೂರಾರು ಕೋಟಿ ವೆಚ್ಚ ಮಾಡಲು ಮುಂದಾಗಿದೆ.
 ಈ ಪೈಕಿ ಶೇ.50ರಷ್ಟು ಹಣವನ್ನು ಈಗಿರೋ ಐಟಿಐಗಳ ಸುಧಾರಣೆಗೆ, ಅಲ್ಲಿ ಪ್ರಯೋಗಾಲಯ ಸೇರಿದಂತೆ ಮೂಲ ಸೌಕರ್ಯ ನೀಡಿ ಎನ್ಸಿವಿಟಿ ಸಂಲಗ್ನತೆ ಹೊಂದುವಂತಹ ವಾತಾವರಣ ನಿರ್ಮಿಸಿದ್ದೇ ಆದಲ್ಲಿ ಮಕ್ಕಳು ಐಟಿಐಗಳತ್ತ ಆಕರ್ಷಿತರಾಗಲು ಸಾಧ್ಯ. ಟಿಐಗಳಲ್ಲಿರುವ 30 ಸಾವಿರ ಸೀಟುಗಳನ್ನು ಆಯಾ ಶಿಕ್ಷಣ ವರ್ಷದಲ್ಲಿ ಪೂರ್ಣ ಪ್ರವೇಶಾತಿ ಹೊಂದುವಂತಹ ವಾತಾವರಣ ನಿರ್ಮಿಸುವ ಅಗತ್ಯವಿದೆ.

ಆತ್ಮಾವಲೋಕನಕ್ಕೆ ಸಕಾಲ...
ಸೆಮಿಸ್ಟರ್ ಶಿಕ್ಷಣ ಪದ್ಧತಿ ಒಪ್ಪಿಕೊಂಡರೂ ಐಟಿಐಗಳಲ್ಲಿ ಹೊಸತನ ಮೂಡುತ್ತಿಲ್ಲ ಎಂಬುದೇ ವಿಷಾದಕರ. ಪ್ರಾಚಾರ್ಯರಿಲ್ಲ, ಬೋಧಕ ಸಿಬ್ಬಂದಿಯಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸರ್ಕಾರಿ ಐಟಿಐಗಳತ್ತ ಇಣುಕಿಯೂ ನೋಡುತ್ತಿಲ್ಲ. ಸರ್ಕಾರ ಮಾಸಿಕ 100 ಪಡೆದು ಕೌಶಲ್ಯ ತರಬೇತಿಗೆ ಮುಂದಾದರೂ ಯಾಕೆ ವಿದ್ಯಾರ್ಥಿಗಳು ಬರುತ್ತಿಲ್ಲ ಎಂಬುದೇ ಸೋಜಿಗ.
ಡೊನೇಷನ್ ನೀಡಿದರೂ ಪರವಾಗಿಲ್ಲ, ಖಾಸಗಿ ಐಟಿಐಗಳತ್ತ ವಿದ್ಯಾರ್ಥಿಗಳು ಯಾಕೆ ದಾಪುಗಾಲು ಹಾಕುತ್ತಿದ್ದಾರೆ ಈ ಸೂಕ್ಷ್ಮ ಸರ್ಕಾರ ಅರಿಯೋದು ಯಾವಾಗ? ಸೌಲಭ್ಯಗಳನ್ನು ಒದಗಿಸಿ, ಬೋಧಕರನ್ನು ನೇಮಿಸಿಕೊಂಡು, ಗುಣಾತ್ಮಕವಾಗಿ ಐಟಿಐಗಳನ್ನು ಬಲಪಡಿಸಿದರೆ ಮಾತ್ರ ವಿದ್ಯಾರ್ಥಿಗಳ ಕೊರತೆ ನೀಗಲು ಸಾಧ್ಯ. ಹೊಸ ಐಟಿಐ ಸ್ಥಾಪಿಸುತ್ತ ಅವ್ಯವಸ್ಥೆಗೆ ಇಂಬು ನೀಡುತ್ತ ಸಾಗಿದರೆ ಈಗಿದ್ದಷ್ಟೂ ಮಕ್ಕಳು ಐಟಿಐಗಳಲ್ಲಿ ಕಾಣೋದಿಲ್ಲ ಎಂಬ ಕಟುವಾಸ್ತವವನ್ನು ಸರ್ಕಾರ ಅರಿಯಬೇಕು.
- ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement