ಔಷಧಿ ಸೇವನೆಯಿಂದ ಕುಷ್ಠರೋಗ ನಿವಾರಣೆ
ಗುಲ್ಬರ್ಗ: ಕುಷ್ಠರೋಗ ನಿವಾರಣೆಯ ಔಷಧಿಗಳು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತಿದ್ದು, ವೈದ್ಯರ ಸಲಹೆಯಂತೆ ನಿರಂತರವಾಗಿ ಔಷಧಿಯನ್ನು ಸೇವಿಸಿದಲ್ಲಿ ಕುಷ್ಠರೋಗ ನಿವಾರಣೆ ಸಾಧ್ಯ ಎಂದು ವೈದ್ಯಾಧಿಕಾರಿ ಡಾ. ಮಲ್ಹಾರರಾವ ಮಲ್ಲೆ ತಿಳಿಸಿದರು.
ಈಚೆಗೆ ಗುಲ್ಬರ್ಗ ನಗರದ ಸೆಂಟ್ ಜಾನ್ಸ್ ಅಂಬುಲೆನ್ಸ್ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಕುಷ್ಠರೋಗ ಅರಿವು ಮತ್ತು ಸಮೀಕ್ಷಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾರಂಭಿಕ ಹಂತದ ಕುಷ್ಠರೋಗವನ್ನು ಕ್ರಮಬದ್ಧವಾಗಿ ಬಹುವಿಧ ಔಷಧಿ ಚಿಕಿತ್ಸೆ ಪಡೆಯುವುದರಿಂದ ಸಂಪೂರ್ಣ ರೋಗ ನಿವಾರಣೆ ಮಾಡಬಹುದು ಹಾಗೂ ಅಂಗವಿಕಲತೆಯನ್ನು ತಡೆಗಟ್ಟಬಹುದು ಎಂದರು.
ಒಂದು ವಾರ ಕಾಲ ಹಮ್ಮಿಕೊಂಡಿರುವ ಕುಷ್ಠರೋಗ ಅರಿವು ಮತ್ತು ಸಮೀಕ್ಷಾ ಕಾರ್ಯಕ್ರಮದಂಗವಾಗಿ ನಗರದ ಕೊಳಚೆ ಪ್ರದೇಶಗಳಲ್ಲಿ ಸಮೀಕ್ಷೆಗೆ ಆಗಮಿಸುವ ಕಿರಿಯ ಆರೋಗ್ಯ ಸಹಾಯಕಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಹಕರಿಸಿ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ಎಂ.ಎಸ್. ವರ್ಮಾ ತಿಳಿಸಿದರು.
--