ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತಂಬಾಕು ಸೇವನೆ ವಿರುದ್ಧ ಜಾಗೃತಿ ಮೂಡಿಸಿ

Lingaraj Badiger
Updated On : 21 Dec 2013, 11:49 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಡಿ.20
ಯುವ ಜನಾಂಗ ತಂಬಾಕು ಮತ್ತು ಸಿಗರೇಟ್ ಸೇವನೆ ಮಾಡುತ್ತಿದ್ದು, ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಅವರು ದುಶ್ಚಟದಿಂದ ದೂರವಿರುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಪರಿಣಾಮಕಾರಿ ಅನುಷ್ಠಾನ, ಸಾಮರ್ಥ್ಯ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಕುರಿತ ಪ್ರಾಧಿಕೃತ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಧೂಮಪಾನ ಫ್ಯಾಶನ್ ಆಗಿದೆ: ತಂಬಾಕು ನಿಯಂತ್ರಣ ಮಹಾತ್ವಾಕಾಂಕ್ಷೆಯ ಕಾಯ್ದೆಯಾಗಿದೆ. ಇದರ ಸಮರ್ಪಕ ಅನುಷ್ಠಾನ ಎಲ್ಲರ ಜವಾಬ್ದಾರಿಯಾಗಿದೆ. ಯುವಕರು ತಂಬಾಕು ಸೇವನೆಯಂಥಹ ದುಶ್ಚಟಕ್ಕೆ ಬಲಿಯಾಗಿ ಆರೋಗ್ಯ ಮತ್ತು ಆರ್ಥಿಕವಾಗಿ ದುರ್ಬಲರಾಗುತ್ತಿದ್ದಾರೆ. ಯುವಕರು ಸಿಗರೇಟ್ ಸೇದುವುದನ್ನು ಫ್ಯಾಶನ್ ಎಂದು ಭಾವಿಸಿ ಬೇರೊಬ್ಬರನ್ನು ನೋಡಿ ಕಲಿಯುತ್ತಿದ್ದಾರೆ.
ಈ ದುಶ್ಚಟಗಳಿಂದ ಯುವಕರನ್ನು ಹೊರತಂದು ಆರೋಗ್ಯಕರ ಭಾರತ ಆರೋಗ್ಯಕರ ಮಕ್ಕಳು ಎಂಬ ಭಾವನೆಯನ್ನು ಬೆಳೆಸಲು ಎಲ್ಲರೂ ಪಣ ತೊಡಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ, ಶಾಲಾ ಕಾಲೇಜು, ವಿದ್ಯಾಸಂಸ್ಥೆಗಳ ಆವರಣದಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವುದು ಹಾಗೂ ಪ್ರದರ್ಶಿಸುವುದನ್ನು ಎಲ್ಲರೂ ಒಟ್ಟಾಗಿ ನಿಷೇಧಿಸಬೇಕೆಂದರು.
ಶೇ.28 ಜನರು ತಂಬಾಕು ಸೇವನೆಗೆ ಬಲಿ: ರಾಜ್ಯ ತಂಬಾಕು ನಿಯಂತ್ರಣ ಘಟಕದ ರಾಜ್ಯ ಯೋಜನಾ ಸಂಯೋಜಕ ಪ್ರಭಾಕರ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ 2003ರಿಂದ ತಂಬಾಕು ನಿಯಂತ್ರಣ ಕಾಯ್ದೆಯು ಜಾರಿಯಲ್ಲಿದೆ. ಇಲ್ಲಿಯವರೆಗೆ ಗಮನಾರ್ಹವಾಗಿ ಕಾಯ್ದೆ ಜಾರಿಗೊಳಿಸಲಾಗಿಲ್ಲ. ದೇಶದಲ್ಲಿ ಪ್ರತಿದಿನ 5,500 ಜನರು ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಶೇ.28 ಜನರು ತಂಬಾಕು ಸೇವನೆಗೆ ಬಲಿಯಾಗುತ್ತಿದ್ದು, ಈ ಪೈಕಿ ಯುವಕರು ಹೆಚ್ಚಾಗಿದ್ದಾರೆ. ತಂಬಾಕು ಸೇವನೆಯಿಂದ ಯುವಕರು ಕ್ಯಾನ್ಸ್ರ್, ಹೃದಯಾಘಾತಗಳಂತಹ ಭಯಾನಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದರು.
ಗುಲ್ಬರ್ಗ ಇಎಸ್ಐ ವೈದ್ಯಕೀಯ ಆಸ್ಪತ್ರೆಯ ಮನೋರೋಗದ ಸಹಾಯಕ ಪ್ರಾಧ್ಯಾಪಕ ಡಾ. ನಾಮದೇವ ಚವ್ಹಾಣ ಉಪನ್ಯಾಸ ನೀಡಿ, ಜಾಗತಿಕ ಸಮೀಕ್ಷೆ ಪ್ರಕಾರ 13- 15 ವಯಸ್ಸಿನ ಶೇ.15ರಷ್ಟು ಹುಡುಗರು ಹಾಗೂ ಶೇ.2.4ರಷ್ಟು ಮಹಿಳೆಯರು ನೇರವಾಗಿ ತಂಬಾಕು ಸೇವನೆ ಮಾಡುತ್ತಿದ್ದರೆ, ಶೇ.21ರಷ್ಟು ಯುವಕರು ತಂಬಾಕಿನ ಹೊಗೆಯನ್ನು ಪರೋಕ್ಷವಾಗಿ ಸೇವನೆ ಮಾಡುತ್ತಿದ್ದಾರೆ. ಶೇ.26.4ರಷ್ಟು ಪಾಲಕರು ಮನೆಗಳಲ್ಲಿ ಸಿಗರೇಟ್ ಸೇದುತ್ತಾರೆ.
ದುಷ್ಪರಿಣಾಮಗಳು: ತಂಬಾಕಿನ ಪದಾರ್ಥಗಳಾದ ಸಿಗರೇಟ್ನಲ್ಲಿ 4000 ಅಪಾಯಕಾರಿ ರಾಸಾಯನಿಕಗಳಿರುತ್ತವೆ. ಈ ಪೈಕಿ 200 ವಿಷ ಹಾಗೂ 61 ಕ್ಯಾನ್ಸರ್ ಉತ್ಪತ್ತಿಯ ರಾಸಾಯನಗಳಿವೆ. ತಿನ್ನುವ ತಂಬಾಕಿನಲ್ಲಿ 2000 ಅಪಾಯಕಾರಿ ರಸಾಯನಗಳಿವೆ. ಪುರುಷರಲ್ಲಿ ತಂಬಾಕು ಸೇವನೆಯಿಂದ ಕ್ಯಾನ್ಸರ್, ಪಾರ್ಶ್ವವಾಯು, ಹೃದಯ ಸಂಬಂಧಿ ರೋಗಗಳು, ಅಸ್ತಮಾ, ಕ್ಷಯರೋಗಗಳು ಕಾಣಿಸಿಕೊಳ್ಳುತ್ತವೆ. ಮಹಿಳೆಯರಲ್ಲಿ ಕ್ಯಾನ್ಸರ್, ಕಡಿಮೆ ತೂಕದ ಮಕ್ಕಳು ಜನಿಸುವುದು, ಗರ್ಭ ಸಂಬಂಧಿ ರೋಗಗಳು, ಅಬಾರ್ಷನ್ಗಳಂಥಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ತಂಬಾಕು ಸೇವನೆಯಿಂದ ಮುಕ್ತರಾಗಲು ಅನೇಕ ವೈದ್ಯಕೀಯ ಚಿಕಿತ್ಸೆ ಲಭ್ಯವಿದ್ದು, ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ, ಜಿಲ್ಲಾ ಅಸ್ಪತ್ರೆ ಜಿಲ್ಲಾ ಶಸ್ತ್ರಜ್ಞೆ ಹಾಗೂ ಅಧೀಕ್ಷಕಿ ಡಾ. ನಳಿನಿ ನಮೋಶಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement