ಧೂಳ್ನಿಂದ ಎಂದು ಮುಕ್ತಿ?
ಕ.ಪ್ರ. ವಾರ್ತೆ ಚಿತ್ತಾಪುರ ಡಿ.20
ಚಿತ್ತಾಪುರ ಕ್ರಾಸ್ನಿಂದ ರಾವೂರ ಕ್ರಾಸ್ (ಅಬ್ಬಾಸ ಅಲಿ ದರ್ಗಾ)ನ ವರೆಗಿನ ಸುಮಾರು 5 ಕಿ.ಮೀ ರಸ್ತೆ ಕಾಮಗಾರಿ ಹಲವು ತಿಂಗಳು ಕಳೆದರೂ ಮುಗಿಯುವ ಲಕ್ಷಣ ಮಾತ್ರ ಕಾಣುತ್ತಿಲ್ಲ. ಇದಕ್ಕೆಲ್ಲ ಪರಿಹಾರ ಕಂಡು ಹಿಡಿಯಬೇಕಾದವರು ಮಾತ್ರ ಇದರ ಕಡೆ ಗಮನಹರಿಸದಿರುವುದು ಇಲ್ಲಿನ ಜನರ ದುರಾದುಷ್ಟವೇ ಸರಿ.
ಕಾಮಗಾರಿ ಬೇಸಿಗೆಗೂ ಮೊದಲು ಪ್ರಾರಂಭವಾದಾಗ ಮಳೆಗಾಲದವರೆಗೆ ರಸ್ತೆ ಕಾಮಗಾರಿ ಮುಗಿಯುವುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಅಲ್ಲಿ ನಡೆಯುತ್ತಿರುವ ಮಂದಗತಿಯ ಕಾಮಗಾರಿ ನೋಡಿದ ಮೇಲೆ ಇದು ಬೇಸಿಗೆಯಲ್ಲಿ ಮುಗಿಯುವುದಿಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಅಧಿಕಾರಿಗಳ ವಿಳಂಬ ಧೋರಣೆಯಿಂದ ಕಾಮಗಾರಿ ಮುಗಿಯದೇ ಇದ್ದುದರಿಂದ ಮಳೆಗಾಲದಲ್ಲಿ ಅಲ್ಲಿ ಪ್ರಯಾಣಿಸುವ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಈ ರಸ್ತೆಯಲ್ಲಿ ಪ್ರಯಾಣಿಸಬೇಕಾಯಿತು.
ಪ್ರಾರಂಭಿಸುವ ಲಕ್ಷಣವಿಲ್ಲ: ಕಾರಣ ಕೇಳಿದರೇ ಮಳೆಗಾಲದಲ್ಲಿ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂಬ ಸಮಾಜಾಯಿಷಿ ಶಾಸಕರಿಂದ ವ್ಯಕ್ತವಾಗಿತ್ತು. ಈಗ ಮಳೆಗಾಲ ಮುಗಿದು 2 ತಿಂಗಳು ಕಳೆದರೂ ಕಾಮಗಾರಿ ಪ್ರಾರಂಭಿಸುವ ಲಕ್ಷಣವೇ ಕಾಣುತ್ತಿಲ್ಲ.
ರಸ್ತೆಯ ಅರ್ಧಭಾಗ ಕಾಮಗಾರಿ ಪೂರ್ತಿಗೊಳಿಸಿದ ನಂತರ ಇನ್ನೂ ಅರ್ಧ ಕಾಮಗಾರಿ ಪ್ರಾರಂಭಿಸದೇ ಇಲ್ಲಿ ಪೂರ್ತಿ ರಸ್ತೆಯನ್ನು ಅಗೆದು ಕಂಕರ್, ಮುರಮ ಹಾಕಿರುವುದರಿಂದ ಮಳೆಗಾಲದ ಮಳೆಗೆ ಮುರಮು ಕೊಚ್ಚಿ ಹೋಗಿ ತಗ್ಗುಗಳು ಬಿದ್ದು ಅಲ್ಲಿನ ಧೂಳಿನಿಂದ ತೊಂದರೆಯಾಗುತ್ತಿದೆ.
ರಸ್ತೆ ನಿರ್ಮಾಣ ಕಾಲಮಿತಿಯಲ್ಲಿ ಮುಗಿಯದೇ ಇರುವುದಕ್ಕೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆಯನ್ನು ಖುದ್ದಾಗಿ ಗಮನಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂಬುದು ಜನರ ಒತ್ತಾಯ.