ಮಾಲಕರಡ್ಡಿಗೆ ಸನ್ಮಾನ
ಯಾದಗಿರಿ: ರಾಜಕೀಯದಲ್ಲಿ ಶುದ್ಧ ಹಸ್ತರಾಗಿ ಸದಾ ಮುಂದಾಲೋಚನೆಯ ಮೂಲಕ ಯುವಕರಿಗೆ ಶಾಸಕ ಡಾ.ಎ.ಬಿ ಮಾಲಕರಡ್ಡಿ ಮಾದರಿಯಾಗಿದ್ದಾರೆಂದು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಸಂತೋಷ ನಿರ್ಮಲಕರ ಹೇಳಿದರು. ಹೈ-ಕ ಶಿಕ್ಷಣ ಸಂಸ್ಥೆಯ ಹೋಮಿಯೋಪಥಿಕ್ ಕಾಲೇಜು ಮತ್ತು ಆಸ್ಪತ್ರೆಗೆ ಡಾ. ಮಾಲಕರಡ್ಡಿ ಹೆಸರಿಟ್ಟಿರುವ ಹಿನ್ನೆಲೆಯಲ್ಲಿ ಅವರನ್ನು ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನಿಸಿ ಮಾತನಾಡಿ, ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿರುವ ಶಾಸಕ ಮಾಲಕರಡ್ಡಿಯವರು ಶಿಸ್ತುಬದ್ಧ ರಾಜಕಾರಣಿಯಾಗಿದ್ದಾರೆ. ಅಲ್ಲದೆ ಹೈ-ಕ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಹಲವು ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಿದ್ದಾರೆ ಎಂದರು. ಡಾ. ಮಾಲಕರಡ್ಡಿ ಸೇವೆಯನ್ನು ಗುರುತಿಸಿ ಕಾಲೇಜಿಗೆ ಅವರ ಹೆಸರನ್ನು ನಾಮಕರಣ ಮಾಡಿದ ಆಡಳಿತ ಮಂಡಳಿಗೆ ಅಭಿನಂದನೆ ತಿಳಿಸಿದರು.
ಬೆರಳಚ್ಚು ನೀಡದ ಪಡಿತರ ಗಮನಕ್ಕೆ
ಯಾದಗಿರಿ: 2010ರ ಪೂರ್ವದಲ್ಲಿ ವಿತರಿಸಿದ ಪಡಿತರ ಚೀಟಿಗಳಿಗೆ ಸಂಬಂಧಪಟ್ಟಂತೆ ಫೋಟೋ ಹಾಗೂ ಬೆರಳಚ್ಚು ನೀಡದೆ ಇರುವ ಜಿಲ್ಲೆಯ 8867 ಪಡಿತರ ಚೀಟಿದಾರರು 2014ರ ಜನವರಿ 15ರೊಳಗೆ ಫೋಟೋ ಮತ್ತು ಬೆರಳಚ್ಚನ್ನು ಸಂಬಂಧಪಟ್ಟ ಸೇವಾ ಕೇಂದ್ರದಲ್ಲಿ (ಗ್ರಾಮ ಪಂಚಾಯ್ತಿ ಮತ್ತು ಫ್ರಾಂಚೈಸಿಗಳಲ್ಲಿ) ನೀಡಬೇಕೆಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.