ಹಿಂದೂ ಧರ್ಮ ಬಲಪಡಿಸಿ: ಪೇಜಾವರ ಶ್ರೀ
ಹುಣಸಗಿ: ನಮ್ಮಲ್ಲಿ ಎಷ್ಟೇ ಜಾತಿ- ಮತ- ಪಂಥಗಳಿದ್ದರೂ ನಾವೆಲ್ಲರೂ ಒಂದು ಭಾರತ ಮಾತೆಯ ಮಕ್ಕಳು. ಎಲ್ಲಾ ಮತಿಯರನ್ನು ಪ್ರೀತಿಸಿ ನಮ್ಮ ಧರ್ಮದ ಮೇಲೆ ನಿಷ್ಠೆ ತೋರಿಸಿ. ಹಿಂದೂ ಧರ್ಮವನ್ನು ಬಲಪಡಿಸಿ ರಾಷ್ಟ್ರ ಶಕ್ತಿಯನ್ನು ಬೆಳೆಸುವುದು ಹಿಂದೂಗಳಾದ ನಮ್ಮ ಕರ್ತವ್ಯ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶರ ತೀರ್ಥ ಶ್ರೀ ಕರೆ ನೀಡಿದರು.
ಸ್ಥಳೀಯ ಗುರು ದುರುದುಂಡೇಶ್ವರರ 14ನೇ ವರ್ಷದ ಕಾರ್ತೀಕೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಉಚಿತ ಸಾಮೂಹಿಕ ವಿವಾಹಗಳು ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮದ ಪಾವನ ಸಾನಿಧ್ಯವಹಿಸಿ ಆರ್ಶೀವಚನ ನೀಡಿದ ಪೂಜ್ಯರು, ಹಿಂದೂ ಧರ್ಮವೆಂಬ ಬಲವಾದ ಎತ್ತರದ ಸ್ತಂಭವನ್ನು ಗಟ್ಟಿಯಾಗಿ ಹಿಡಿದುಕೊಂಡು ನಮ್ಮ ಸನಾತನ ಧರ್ಮದ ಸೇವೆ ಮಾಡುವುದು ಅವಶ್ಯಕ ಎಂದು ಹೇಳಿದ ಶ್ರೀಗಳು ಬಸವಣ್ಣನವರು ಲಿಂಗದೀಕ್ಷೆ ನೀಡುವ ಮೂಲಕ ಹಿಂದೂ ಧರ್ಮಕ್ಕೆ ದೊಡ್ಡ ಶಕ್ತಿಯನ್ನು ನೀಡಿದರು.
ಶ್ರೀಗಳ ಕಾರ್ಯ ಶ್ಲಾಘನೀಯ: ಸಾಮೂಹಿಕ ವಿವಾಹಗಳನ್ನು ಏರ್ಪಡಿಸುತ್ತಾ ಪ್ರತಿ ಮನೆಗಳಲ್ಲಿ ಕಾರ್ತೀಕೋತ್ಸವದ ದೀಪವನ್ನು ಬೆಳಗಿಸಿ ಧಾರ್ಮಿಕ ಮತ್ತು ಸಂಸ್ಕೃತಿಯನ್ನು ಬೆಳೆಸುತ್ತಿರುವ ಶಿವಕುಮಾರ ಶ್ರೀಗಳ ಕಾರ್ಯ ಶ್ಲಾಘನೀಯ. ಸ್ತ್ರೀಯರು ಹೇಗೆ ಪತಿವ್ರತೆಯರಾಗಿರುತ್ತಾರೊ ಅದರಂತೆ ಪುರುಷರು ಪತ್ನಿವ್ರತಸ್ಥರಾದಗ ಮಾತ್ರ ಜೀವನ ಸುಖಮಯವಾಗುತ್ತದೆ ಎಂದು ನೂತನ ದಂಪತಿಗಳಿಗೆ ಕಿವಿಮಾತು ಹೇಳಿದರು.
ಕೊಡೇಕಲ್ ದುರದುಂಡೇಶ್ವರ ಮಠದ ಶಿವಕುಮಾರ ಶ್ರೀಗಳು ಮಾತನಾಡಿ, ಪೇಜಾವರ ಶ್ರೀಗಳು ನಿಜವಾದ ಭಾರತೀಯ ಸಂತ ಎಂದು ಹೇಳಿದ ಅವರು ಹಿಂದೂ ಧರ್ಮದ ಸಂಸ್ಕೃತಿಯನ್ನು ಜಗತ್ತಿನ ಉದ್ದಗಲಕ್ಕೂ ಪಸರಿಸುತ್ತಿರುವ ಪೇಜಾವರ ಶ್ರೀಗಳು ಹಿಂದೂ ಧರ್ಮದ ಪ್ರತೀಕ ಅವರ ಮಾರ್ಗದರ್ಶನ ನಮಗೆಲ್ಲ ದಾರಿ ದೀಪ ಎಂದು ತಿಳಿಸಿದರು.
ನೀವೆಲ್ಲರೂ ಭಾಗ್ಯವಂತರೂ: ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ನರಸಿಂಹನಾಯಕ ರಾಜುಗೌಡ, ಪೂಜ್ಯರ ಸಮ್ಮುಖದಲ್ಲಿ ಮದುವೆಯಾಗುತ್ತಿರುವ ನೀವೆಲ್ಲರೂ ಭಾಗ್ಯವಂತರೂ ಎಂದು ಹಿರಿಯರಿಗೆ ಗೌರವ ಭಾವನೆಯಿಂದ ಕಾಣಬೇಕು. ಹೆಣ್ಣಿರಲಿ ಗಂಡಿರಲಿ ಮನೆಗೆ ಮಗು ಒಂದೇ ಇರಲಿ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಎಂದು ತಿಳಿಸಿದರು.
ಮಂಗಳಗೊಂಡ ಪ್ರವಚನ: ಈ ಸಂದರ್ಭದಲ್ಲಿ 21 ಜೋಡಿಯ ಸಾಮೂಹಿಕ ವಿವಾಹ ನೆರವೇರಿದವು ಮತ್ತು ನವೆಂಬರ್ 27ರಿಂದ ಪ್ರಾರಂಭವಾಗಿದ್ದ ಜೀವನ ದರ್ಶನ ಪ್ರವಚನ ಮಂಗಳಗೊಂಡಿತು. ಇದೇ ಸಂದರ್ಭದಲ್ಲಿ ಲಿಂಗಸ್ಗೂರು ಡೀಪೋ ಮ್ಯಾನೇಜರ್ ಬಸವರಾಜ ಪಾಟೀಲರನ್ನು ಗೌರವಿಸಲಾಯಿತು. ಇದಕ್ಕೂ ಪೂರ್ವದಲ್ಲಿ ವಾದ್ಯಮೇಳಗಳೊಂದಿಗೆ ಸುಮಂಗಲೇಯರಿಂದ ಪೂರ್ಣ ಕುಂಭ ಕಳಸಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಸಂಗಯ್ಯ ಮಹಲಿನಮಠ, ತಮದಡ್ಡಿಯ ಶಿವಶಂಕರ ಶ್ರೀ, ಶಿರಸಿ ವಿರಕ್ತ ಮಠದ ಮಲ್ಲಿಕಾರ್ಜುನ ಶ್ರೀ, ಹೊಸಪೇಟೆ ವೀರೂಪಾಕ್ಷ ಶ್ರೀ, ಕೆಂಭಾವಿ ಚೆನ್ನಬಸವ ಶ್ರೀ ಇತರರು ಉಪಸ್ಥಿತರಿದ್ದರು.