ಭಾಷೆ ಬಳಸಿದಂತೆ ಬೆಳೆಯುತ್ತದೆ: ಶಾಂತವೀರ ಶ್ರೀ
ಗುರುಮಠಕಲ್: ಭಾಷೆಯನ್ನು ಬೆಳೆಸುವುದಕ್ಕಿಂತ ಬಳಸುವುದು ಅವಶ್ಯಕವಾಗಿದೆ. ಭಾಷೆ ಬಳಸಿದಂತೆ ಅದು ಬೆಳೆಯುತ್ತದೆ ಎಂದು ಗುರುಮಠಕಲ್ ಖಾಸಾ ಮಠದ ಶಾಂತವೀರ ಮಹಾಸ್ವಾಮಿ ನುಡಿದರು.
ಅವರು ಕಂದಕೂರನ ಸರ್ಕಾರಿ ಪ್ರೌಢಶಾಲೆಯಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ಏರ್ಪಡಿಸಿದ್ದ ಸಾಹಿತಿ ಮಾಹಿತಿ ಕನ್ನಡದ ಜಾಗೃತಿ ಸಾಪ್ತಾಹಿಕ ಸರಣಿ ಮಾಲಿಕೆ- 4 ತಿ.ನಂ.ಶ್ರೀಕಂಠಯ್ಯ ಕುರಿತ ವಿಶೇಷ ಉಪನ್ಯಾಸದ ಸಾನ್ನಿಧ್ಯ ವಹಿಸಿ, ಗಡಿಭಾಗದಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗಿದೆ. ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ. ಹಾಗಾಗಿ ನಾವೆಲ್ಲ ಭಾಷೆಯನ್ನು ಬಳಸಿದರೆ ಕನ್ನಡ ಭಾಷೆ ಬೆಳೆಯುತ್ತದೆ ಎಂದರು.
ತಿ.ನಂ.ಶ್ರೀ.ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕನ್ನಡ ದಿಗ್ಗಜರಲ್ಲಿ ಮೂವರು ಶ್ರೀ.ಗಳು ಪ್ರಸಿದ್ಧರು. ಬಿ.ಎಂ.ಶ್ರೀ, ಎಂ.ಆರ್.ಶ್ರೀ, ಹಾಗೂ ತೀ.ನಂ.ಶ್ರೀ. ಅವರು ಕನ್ನಡದ ಕಳಸವನ್ನು ಬೆಳಗಿದ ಕೀರ್ತಿ ಪಡೆದವರು ಎಂದು ನುಡಿದರು.
ಕಾರ್ಯಕ್ರಮವನ್ನು ಯಾದಗಿರಿ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರಾಯ ಕಂದಕೂರು ಉದ್ಘಾಟಿಸಿದರು. ಸಾಹಿತಿ ಸಾಹೇಬ ಬಿರಾದರ ತಿ.ನಂ.ಶ್ರೀ ಕುರಿತು ಉಪನ್ಯಾಸ ನೀಡಿದದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸೇವಾ ಸಂಘ ಜಿಲ್ಲಾಧ್ಯಕ್ಷ ಸಿದಲಿಂಗರೆಡ್ಡಿ ಕಂದಕೂರು, ಎಸ್ಡಿಎಂಸಿ ಅಧ್ಯಕ್ಷ ಶರಣಪ್ಪ ಹಳ್ಳದ ವೇದಿಕೆ ಮೇಲಿದ್ದರು. ಶಾಲೆಯ ಮುಖ್ಯ ಗುರು ಮಲ್ಲಪ್ಪ. ಡಿ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿದ್ದರು. ನೇತೃತ್ವ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗಂಗಾಧರ ಬಡಿಗೇರ ನಿರೂಪಿಸಿದರು. ವೀರಭದ್ರಪ್ಪ ಸ್ವಾಗತಿಸಿ, ನಾಗಪ್ಪ ವಂದಿಸಿದರು.