ಮಹಿಳೆಯರ ಹಕ್ಕು ಕುರಿತು ಜಾಗೃತಿ ಅಗತ್ಯ
ಯಾದಗಿರಿ: ಮಹಿಳೆಯರ ಹಕ್ಕುಗಳ ರಕ್ಷಣೆ ಕುರಿತು ಎಲ್ಲರಲ್ಲಿ ಜಾಗೃತಿ ಮೂಡಿಸುವ ಅಗತ್ಯವಾಗಿದೆ ಎಂದು ರಾಮಸಮುದ್ರ ಗ್ರಾಪಂ ಅಧ್ಯಕ್ಷ ವಿಶ್ವನಾಥ ಬಸವರಾಜಪ್ಪ ಬಾಗಲಿ ಹೇಳಿದರು.
ಕೊಡುಗೆ: ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಹೋಬಳಿ ಮಟ್ಟದ ಮಹಿಳೆಯರಿಗಾಗಿ ಒಂದು ದಿವಸದ ಜಾಗೃತಿ ಶಿಬಿರ ಉದ್ಘಾಟಿಸಿ, ಮಹಿಳೆಯರು ದೇಶದ ಪ್ರಗತಿಗೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಅವರಿಗೆ ಸರಿಯಾದ ಸಾಮಾಜಿಕ ನ್ಯಾಯ ದೊರಕಬೇಕಿದೆ. ಇದಕ್ಕಾಗಿ ಸಾಮಾಜಿಕ ಬದಲಾವಣೆ ಅಗತ್ಯವಿದೆ. ಮಹಿಳೆಯರು ಸರ್ಕಾರ ಒದಗಿಸುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಶಿಕ್ಷಣ ಕೇತ್ರದಲ್ಲಿ ಇನ್ನಷ್ಟು ಮುಂದೆ ಬರಬೇಕಿದೆ ಎಂದು ಹೇಳಿದರು.
ದೌರ್ಜನ್ಯ: ಜಿಪಂ ವಿರೋಧ ಪಕ್ಷ ನಾಯಕ ಬಸವರಾಜ ಖಂಡ್ರೆ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿದೆ. ಅತ್ಯಾಚಾರ ಎಸಗಿಸುವವರಿಗೆ ಕಠಿಣ ಶಿಕ್ಷೆ ನೀಡಬೇಕಾದ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಬಿಳಿಚಕ್ರ ಆರೋಗ್ಯಾಧಿಕಾರಿ ಡಾ. ಸಾಜೀದ ಮಾತನಾಡಿ, ಮಹಿಳೆಯರು ತಮ್ಮ ಹಕ್ಕುಗಳನ್ನು ಅರಿತು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕು. ಆರೋಗ್ಯಕರ ಸಮಾಜ ನಿರ್ಮಾಣದಿಂದ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ ಎಂದು ಹೇಳಿದರು.
ಮಹಿಳಾ ಹಕ್ಕುಗಳ ಮತ್ತು ಕಾನೂನು ಮಾಹಿತಿ ಕುರಿತು ವಕೀಲರಾದ ಸಾವಿತ್ರಿ ಪಾಟೀಲ್ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಿಡಿಪಿಓ ಎಂ.ಎಸ್. ನಿಷ್ಠಿ, ವಕೀಲರಾದ ವಿಶ್ವನಾಥ ರೆಡ್ಡಿ ಅಬ್ಬೆತುಮಕೂರ, ಆರೋಗ್ಯ ಸಹಾಯಕ ವೆಂಕಟೇಶ ಕುಲಕರ್ಣಿ, ಕೇಶವ ಗ್ರಾಮದ ಬಾಬುಗೌಡ, ಹಣಮಂತ ಕಲಾಲ, ಮಲ್ಲಿಕಾರ್ಜುನ, ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ವಿಜಯ ಲಕ್ಷ್ಮೀ ಇದ್ದರು. ಪ್ರಾರ್ಥನೆಯನ್ನು ಲಲಿತಮ್ಮ ಸಂಗಡಿಗರು ಹಾಡಿದರು. ವಿಜಯಲಕ್ಷ್ಮೀ ಸ್ವಾಗತಿಸಿ, ವಂದಿಸಿದರು.