ರಾಜ್ಯ ಹೆದ್ದಾರಿ 61 ಕಾಮಗಾರಿಗೆ ನಿಶಾನೆ
ಹುಣಸಗಿ: ಈ ಭಾಗದ ಜನರ ತಲೆನೋವಾಗಿ ಪರಿಣಮಿಸಿದ್ದ ದೇವಾಪುರ-ಮನಗೂಳಿ ರಾಜ್ಯ ಹೆದ್ದಾರಿಗೆ ಅಂತೂ ರು. 250 ಕೋಟಿ ಹಣಕಾಸು ಇಲಾಖೆ ಅನುಮೋದನೆ ನೀಡಿದೆ.
ದೇವಾಪುರದಿಂದ ಮನಗೂಳಿಯವರೆಗೆ 109 ಕಿ.ಮೀ ಇದ್ದು, ರು. 250 ಕೋಟಿ ಟೆಂಡರ್ ಕರೆಯಲು ಕೆ-ಶಿಪ್ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ ತಯಾರಾಗಿದೆ ಎಂದು ತಿಳಿದು ಬಂದಿದೆ.
ಈ ಹೆದ್ದಾರಿಯಲ್ಲಿ ಹುಣಸಗಿ, ದೇವತ್ಕಲ್, ಹೆಬ್ಬಾಳ, ಹುಣಸಗಿ, ಮಾಳನೂರು, ತಾಳಿಕೋಟೆ, ಹೂವಿನ ಹಿಪ್ಪರಗಿ, ಬಸವನ ಬಾಗೇವಾಡಿ, ಮನಗೂಳಿ ಸೇರಿದಂತೆ ಅನೇಕ ಪಟ್ಟಣಗಳು ಬರುವವು. ಈಗಾಗಲೇ ಈ ರಸ್ತೆಯ ಬದಿಯ ವಿದ್ಯುತ್ ಕಂಬಗಳು, ತಂಗುದಾಣ, ಬೋರವೆಲ್, ಜಲ ಸಂಗ್ರಹ ತೊಟ್ಟಿ, ಶಾಲಾ ಕಾಂಪೌಂಡ್ಗಳನ್ನು ನಿರ್ಮಾಣ ಮಾಡಲಾಗಿದೆ. ರೈತರ ಹೊಲಗಳ ಖಾಲಿ ಜಾಗೆಗೆ ಪರಿಹಾರ ನೀಡುವ ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ. ಟೆಂಡರ್ ಪ್ರಕ್ರಿಯೆ ನಿರ್ಮಾಣ ಮಾತ್ರ ಬಾಕಿ ಇದೆ.
ಮರು ಟೆಂಡರ್: ಈ ಮೊದಲು ರಸ್ತೆ ನಿರ್ಮಾಣಕ್ಕೆ ರು. 248 ಕೋಟಿ ಟೆಂಡರ್ ಕರೆದಿತ್ತು. ಆಗ ಗುತ್ತಿಗೆದಾರರು ನಿಗದಿತ ಮೊತ್ತಕ್ಕೆ ಶೇ. 49ರಷ್ಟು ಹೆಚ್ಚಿಗೆ ಮೊತ್ತವನ್ನು ನಮೂದಿಸಿದ್ದರು. ಆದ್ದರಿಂದ ಮರು ಟೆಂಡರ್ ಕರೆಯಲು ಸರ್ಕಾರ ಆದೇಶಿಸಿದೆ ಎಂದು ಕೆ-ಶಿಪ್ ಕಾರ್ಯಪಾಲಕ ಅಭಿಯಂತರ ಬಿ.ಡಿ. ಬೆಳವ ಲ್ ಬೆಳಗಾಂವ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಒಂದು ಕಣ್ಣಿಗೆ ಬಣ್ಣೆ, ಮತ್ತೊಂದಕ್ಕೆ ಸುಣ್ಣ: ಕೆ-ಶಿಪ್ ಅಡಿಯಲ್ಲಿ ಬರುವ ಮುಧೋಳ-ನಿಪ್ಪಾಣಿ ರಸ್ತೆಯು 109 ಕಿ.ಮಿ ಇದೆ. ಇತ್ತ ದೇವಾಪುರ-ಮನಗೂಳಿ ರಸ್ತೆಯು 109 ಕಿ.ಮಿ ಇದೆ. ಮುಧೋಳ-ನಿಪ್ಪಾಣಿಗೆ ರು. 317 ಕೋಟಿ ಮೀಸಲಿಡಲಾಗಿದೆ. ಆದರೆ ದೇವಾಪುರ ಮನಗೂಳಿ ರಸ್ತೆಗೆ ರು. 250 ಕೋಟಿ ನೀಡಲಾಗಿದೆ. ಏಕೀ ತಾರತಮ್ಯ ಎಂಬುದು ಪ್ರಶ್ನೆಯಾಗಿದೆ. ಇನ್ನೊಂದು ಕುತೂಹಲವೆಂದರೆ ಈ ಎರಡು ರಸ್ತೆಗಳನ್ನು ಬೆಳಗಾಂವನ ಕೆ-ಶಿಪ್ ಸಹಭಾಗಿಯ ಕಚೇರಿಯೇ ನಿರ್ಮಿಸುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ ಎನ್ನುವಂತೆ ಮಾಡಿದೆ.
ಕೆ ಶಿಪ್ ಕಾಮಗಾರಿ ಅನುಮೋದನೆ ನೀಡಿದೆ ಎಂದು ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯವಹಿಸಿದರೆ, ಈ ಭಾಗದ ರೈತರಿಂದ ತೀವ್ರ ಪ್ರತಿಭಟನೆ ಎದುರಿಸಬೇಕಾಗುವುದು. ಒಂದು ವರ್ಷದವರೆಗೆ ಸುಮ್ಮನೆ ಕುಳಿತರೆ ಹುಣಸಗಿ-ದೇವಾಪುರ ಭಾಗದ ಐವತ್ತಕ್ಕೂ ಹೆಚ್ಚು ಹಳ್ಳಿಗಳ ರೈತರು, ಕೃಷಿ, ವ್ಯಾಪಾರ, ಕೃಷಿ ಚಟುವಟಿಕೆಗೆ ತೀವ್ರ ಹಿನ್ನೆಡೆ ಆಗುವುದು.