ಹತ್ತಿ ಬಿಡಿಸೋಕೆ ಕೂಲಿ ಕಾರ್ಮಿಕರಿಲ್ಲದೆ ಆತಂಕ
ವಿಶೇಷ ವರದಿ
ಗುರುಮಠಕಲ್: ಗುರುಮಠಕಲ್ ಮತಕ್ಷೇತ್ರದಲ್ಲಿ ಕೃಷಿ ಕೂಲಿಕಾರರ ಕೊರತೆ ವಿಪರೀತವಾಗಿರುವ ಹಿನ್ನಲೆಯಲ್ಲಿ ರೈತರು ಬೆಳೆದ ಹತ್ತಿ ಬಿಡಿಸಲಾಗದ ಪರಿಸ್ಥಿತಿ ಒದಗಿ ಬಂದಿರುವ ಪರಿಣಾಮ ರೈತರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.
ವಿವಿಧ ವಾಣಿಜ್ಯ ಬೆಳೆಗಳಿಂದ ನಷ್ಟವನ್ನು ಅನುಭವಿಸುತ್ತಿದಂತಹ ಈ ಭಾಗದ ರೈತರು ಈ ಬಾರಿ ರೈತರು ತಮ್ಮ ಜಮೀನಿನಲ್ಲಿ ಇತರೆ ಯಾವುದೇ ಬೆಳೆಯನ್ನು ಬೆಳಯಲು ಅಸಕ್ತಿ ತೋರಿಲ್ಲ. ತಮ್ಮ ಹೊಲದಲ್ಲಿ ಹತ್ತಿಯನ್ನೇ ಹೆಚ್ಚು ಬಿತ್ತನೆ ಮಾಡಿರುವುದು, ಅದರ ಜೊತೆಯಲ್ಲಿ ಈ ಸಲ ಹತ್ತಿ ಬೆಳೆ, ಉತ್ತಮವಾಗಿ ಬಂದಿರುವ ಪರಿಣಾಮ ಎಲ್ಲೆಡೆ ಬಿಡಿಸುವ ಕಾರ್ಯ ನಡೆದಿದೆ. ಇದಕ್ಕಾಗಿ ಕೂಲಿಕಾರರು ಸಿಗದೆ ಬೆಳೆದ ಹತ್ತಿ ಬಿಡಿಸಲು ಚಿಂತೆ ಆಗಿದೆ.
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಕಂಗಾಲಾಗಿದ್ದ ರೈತರಿಗೆ ಈ ಬೆಳೆಯಿಂದಾಗಿ ಸ್ವಲ್ಪ ಅವರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಹೀಗಾಗಿಯೇ ಅವರು ಹತ್ತಿಯನ್ನು ಬೇಗನೇ ಬಿಡಿಸಬೇಕು ಎಂಬುದು ರೈತರ ಉದ್ದೇಶವಾಗಿದೆ.
ಕಾರ್ಮಿಕರಿಗೆ ಸೌಲಭ್ಯ: ಅದರೆ ಕಾರ್ಮಿಕರ ಸಮಸ್ಯೆ ಹೆಚ್ಚಾಗಿರುವ ಪರಿಣಾಮ ಅವರಿಗೆ ಇದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದಲ್ಲದೆ ಕೂಲಿ ಕೆಲಸಗಳಿಗಾಗಿ ಕಾಮಿಕರನ್ನು ತಮ್ಮ ಸ್ವಂತ ಖರ್ಚಿನಲ್ಲಿ ಅವರಿಗಾಗಿ ಟಂಟಂ ಅಥವಾ ಆಟೋ ಬಾಡಿಗೆ ಪಡೆದುಕೊಂಡು ಅವರನ್ನು ಜಮೀನಿಗೆ ಬಿಟ್ಟು ಮತ್ತು ಸಂಜೆ ವೇಳೆ ತಮ್ಮ ಮನೆಗಳಿಗೆ ಸುರಕ್ಷಿತವಾಗಿ ತಲುಪಿಸುವವರೆಗೆ ಎಲ್ಲಾ ಕೆಲಸಗಳನ್ನು ಜಮೀನಿನ ಮಾಲಿಕರೇ ಮಾಡುವಂತೆ ಅಗಿದೆ.
ಆತಂಕ: ಒಂದು ವೇಳೆ ಅವರಿಗೆ ಆಟೋ ವ್ಯವಸ್ಥೆ ಇಲ್ಲದಿದ್ದಾರೆ ಅವರು ಹತ್ತಿ ಬಿಡಿಸಲು ಮಾತ್ರ ಬರಲು ಒಪ್ಪುವುದಿಲ್ಲ. ಹೀಗಾಗಿ ರೈತರು ಅನಿವಾರ್ಯವಾಗಿ ಸಾವಿರಾರು ರುಪಾಯಿ ಖರ್ಚು ಮಾಡುವ ಮೂಲಕವಾಗಿ ಬೇರೆ ಬೇರೆ ಗ್ರಾಮದಿಂದ ತಮ್ಮ ಜಮೀನುಗಳಿಗೆ ಹತ್ತಿ ಬಿಡಿಸಲು ಕರೆದುಕೊಂಡು ಬರುವ ಪರಿಸ್ಥಿತಿ ಉದ್ಬವವಾಗಿದೆ. ಹತ್ತಿ ಬೆಳೆದ ರೈತರು ಕೂಲಿಕಾರರ ಕೊರತೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲ್ಲಿಲ್ಲ ಎನ್ನುವ ಅತಂಕದಲ್ಲಿ ರೈತಾಪಿ ಜನತೆ ಇದ್ದಾರೆ.