ಅಭಿವೃದ್ಧಿ ಕೆಲಸದ ಅಡ್ಡಿಗೆ ಪ್ರತ್ಯುತ್ತರ ಕೊಡಿ
ಕ.ಪ್ರ. ವಾರ್ತೆ ಗುಲ್ಬರ್ಗ ಡಿ.22
ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರು ನಗರ ಹಾಗೂ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಪ್ರಗತಿ ಕಾರ್ಯಗಳಿಗೆ ಚಾಲನೆ ನೀಡಿ ಯುದ್ಧೋಪಾದಿಯಲ್ಲಿ ಕೆಲಸಗಳನ್ನು ಕೈಗೆತ್ತಿಕೊಂಡಿದ್ದಾರೆ. ಸಭೆ- ಸಮಾರಂಭಗಳಲ್ಲಿ ವಿರೋಧ ಪಕ್ಷದವರು ಈ ಕಾರ್ಯಗಳಿಗೆ ಅಡೆತಡೆ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭ ಎದುರಾದಲ್ಲಿ ಎಲ್ಲರೂ ಸೇರಿ ಪಕ್ಷ ಹಾಗೂ ಉಸ್ತುವಾರಿ ಸಚಿವರ ಬೆಂಬಲಕ್ಕೆ ನಿಲ್ಲಬೇಕು, ಪ್ರಗತಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗಣಗೌಡ ಸಂಕನೂರ್ ಕರೆ ನೀಡಿದ್ದಾರೆ. ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ನೇತೃತ್ವದಲ್ಲಿ ಭಾನುವಾರ ನಡೆದ ಪಾಲಿಕೆ ಗೆದ್ದ- ಸೋತ ಅಭ್ಯರ್ಥಿಗಳು, ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. 2009, 2010, 2011 ಸಾಲಿನ ಕಾಮಗಾರಿಗಳು ಕಾರ್ಯರೂಪಕ್ಕೆ ಬರದೆ ನೆನೆಗುದಿಗೆ ಬಿದ್ದಿದ್ದವು. ಇದೀಗ ಅವುಗಳಿಗೆ ಚಾಲನೆ ನೀಡಲಾಗಿದೆ. ಎಲ್ಲರೂ ಸೇರಿ ನಗರಾಭಿವೃದ್ಧಿಗೆ ಚಾಲನೆ ನೀಡೋಣ ಎಂದರು. ತಮ್ಮ ಸಮ್ಮುಖದಲ್ಲೇ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿ ಯುದ್ಧೋಪಾದಿಯಲ್ಲಿ ಕೆಲಸ ಮಾಡುವಂತೆ ಹೇಳಿರುವುದು ತಮಗೆ ವೈಯಕ್ತಿಕವಾಗಿ ಸಂತಸ ಉಂಟು ಮಾಡಿದೆ ಎಂದು ಭಾಗಣಗೌಡರು ಹೇಳಿದರು. ಭೀಮರೆಡ್ಡಿ ಪಾಟೀಲ್ ಕುರಕುಂದಾ, ಅಸಗರ ಚುಲಬುಲ್, ಬಾಬು ವಂಟಿ, ನೀಲಕಂಠ ಮೂಲಗೆ, ಜಾವೇದ್, ಸಲೀಂ, ಪಟೇಲ್ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.