'ಆರೋಪ ಬಿಟ್ಟು, ಅಭಿವೃದ್ಧಿಗೆ ಕೈ ಜೋಡಿಸಿ'
ಚಿತ್ತಾಪುರ: ಮಾಜಿ ಸಚಿವ ರೇವುನಾಯಕ ಹಾಗೂ ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರು ಕೆಸರಿನಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಅದನ್ನು ಬಿಟ್ಟು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಕ್ಷ ಬೇಧ ಮರೆತು ಶಾಸಕ ಪ್ರಿಯಾಂಕ್ ಖರ್ಗೆಗೆ ಸಹಕಾರ ನೀಡುವುದನ್ನು ಕಲಿತುಕೊಳ್ಳಲು ಜಿಪಂ ಸದಸ್ಯ ಶಂಭುಲಿಂಗ ಗುಂಡಗುರ್ತಿ ಕಿವಿಮಾತು ಹೇಳಿದ್ದಾರೆ.
6 ತಿಂಗಳಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲವೆಂದು ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶು ಸಚಿವರಾಗಿದ್ದಾಗ ರೇವುನಾಯಕ ಅವರು ತಾಲೂಕಿನ ಭೀಮನಳ್ಳಿ ಗ್ರಾಮಕ್ಕೆ ಒಂದು ಪಶು ಆಸ್ಪತ್ರೆ ಮಾಡಲಾಗಿಲ್ಲ. ಸರ್ಕಾರದಿಂದ ಅಭಿವೃದ್ಧಿಗೆಂದು ಬಂದ ಅನುದಾನ ಬಿಜೆಪಿ ಸರ್ಕಾರದಲ್ಲಿ ಕೆಲಸ ಮಾಡದೇ ಖರ್ಚು ಮಾಡಲಾಗಿಲ್ಲ. ಅಧಿಕಾರಿಗಳು ಹಿಡಿತದಲ್ಲಿರದೇ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದವು. ಸರ್ಕಾರದ ಅನುದಾನ ಸದ್ಭಳಕೆ ಆಗದೇ ಅಭಿವೃದ್ಧಿ ಕಾಣಲಿಲ್ಲ. ಈಗ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿ ಇಲಾಖೆಯಲ್ಲಿ ಶೋಧನೆ ಮಾಡಿ ಕುಂಠಿತಗೊಂಡ ಕಾಮಗಾರಿಗಳ ಉಳಿದ ಅನುದಾನ ಶೇಖರಣೆ ಮಾಡಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ ಎಂದರು.
ಈಗಿನ ಸರ್ಕಾರಲ್ಲಿನ ಅನುದಾನ ಪಡೆದು ಹೆಚ್ಚಿನ ಕಾಮಗಾರಿ ಮಾಡಲಾಗುತ್ತಿದೆ. 6 ತಿಂಗಳಲ್ಲಿ ನೂರಾರು ಕೋಟಿ ರು. ಅನುದಾನ ತಂದು ಸಮಗ್ರ ಅಭಿವೃದ್ಧಿಯತ್ತ ಕಾಮಗಾರಿಗಳು ನಡೆದಿವೆ ಎಂದು ತಿಳಿಸಿದರು.
ಕ್ಷೇತ್ರದ ಕೆಲ ರಸ್ತೆಗಳಿಗೆ ಹಾಗೂ ನಾಗಾವಿ ಅಭಿವೃದ್ಧಿಗೆ ಬಂದ ಅನುದಾನ 4 ವರ್ಷದಿಂದ ಕಾಮಗಾರಿಗಳು ಸ್ಥಗೀತಗೊಂಡಿವೆ. ಮಾಜಿ ಸಚಿವರು ಹಾಗೂ ಮಾಜಿ ಶಾಸಕರು 4 ವರ್ಷದಿಂದ ಏನು ಮಾಡಿದರೂ ಎಂದು ಪ್ರಶ್ನಿಸಿದ ಅವರು ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆಂದು ಹೇಳಿದರು.
ಸುಳ್ಳು ಹೇಳಿಕೆ ನೀಡಿ ಜನತೆ ದಾರಿ ತಪ್ಪಿಸುವುದನ್ನು ಬಿಟ್ಟು ಸಾರ್ವಜನಿಕರ ಹಿತದೃಷ್ಟಿಯಿಂದ ಅಭಿವೃದ್ಧಿಗೆ ಶಾಸಕರೊಂದಿಗೆ ಸಹಕಾರ ನೀಡಬೇಕೆಂದು ಹೇಳಿದ್ದಾರೆ.