'ಖಾತ್ರಿ' ಉಪಯೋಗಿಸಿಕೊಳ್ಳಿ: ಜೋಶಿ
ಕ.ಪ್ರ. ವಾರ್ತೆ ಚಿಂಚೋಳಿ ಡಿ.22
ಗ್ರಾಮೀಣ ಪ್ರದೇಶದ ಕೂಲಿಕಾರರು ಉದ್ಯೋಗಕ್ಕಾಗಿ ನಗರಪ್ರದೇಶಕ್ಕೆ ವಲಸೆ ಹೋಗದಂತೆ ತಡೆಯಲು ಕೇಂದ್ರ ಸರ್ಕಾರ ಖಾತ್ರಿ ಯೋಜನೆ ಜಾರಿಗೆ ತಂದಿದೆ. ಕೂಲಿ ಕಾರ್ಮಿಕರು ಯೋಜನೆಯ ಸದುಪಯೋಗ ಪಡೆಯಲು ತಹಸೀಲ್ದಾರ್ ಮೋಹನ ಜೋಶಿ ತಿಳಿಸಿದರು.
ತಾಲೂಕಿನ ರಟಕಲ್ ಗ್ರಾಮದಲ್ಲಿ ಖಾತ್ರಿ ಯೋಜನೆಯ ಬದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೂಲಿ ಕಾರ್ಮಿಕರು ತಮ್ಮ ಗ್ರಾಮದಲ್ಲಿಯೇ ಇದ್ದುಕೊಂಡು ಕೆಲಸವನ್ನು ಮಾಡಲು ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ನಗರಪ್ರದೇಶಕ್ಕೆ ವಲಸೆ ಹೋಗದೇ ಹಳ್ಳಿಯಲ್ಲಿ ಜೀವನ ನಡೆಸಬೇಕು. ಉದ್ಯೋಗ ಖಾತ್ರಿಯಲ್ಲಿ ಪ್ರತಿದಿನಕ್ಕೆ ಗಂಡು, ಹೆಣ್ಣು ಕೂಲಿ 174 ನೀಡಲಾಗುತ್ತಿದೆ ಎಂದರು.
ತಾಪಂ ಇಒ ಜಗದೇವ ಬೈಗೊಂಡ ಮಾತನಾಡಿ, ತಾಲೂಕಿನ 32 ಗ್ರಾಪಂ.ಯಲ್ಲಿ ಪ್ರಸಕ್ತ ಸಾಲಿನಲ್ಲಿ ಜಿಪಂ, ಜಲಾನಯನ ಅಭಿವೃದ್ಧಿ, ಸಣ್ಣ ನೀರಾವರಿ, ಸಾಮಾಜಿಕ ಅರಣ್ಯ, ಪ್ರಾದೇಶಿಕ ಅರಣ್ಯ, ತೋಟಗಾರಿಕೆ, ಕೃಷಿ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಮುಂತಾದ ಇಲಾಖೆಗಳಲ್ಲಿ ಖಾತ್ರಿ ಯೋಜನೆ ಅಡಿಯಲ್ಲಿ ಒಟ್ಟು 1756 ಕಾಮಗಾರಿಗಳಿದ್ದು, ಒಟ್ಟು 1778.92 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದರು.
ಗ್ರೇಡ್-1 ತಹಸೀಲ್ದಾರ್ ಜಗನ್ನಾಥರೆಡ್ಡಿ, ಸಿಪಿಐ ಮುಖಂಡ ಶರಣಬಸಪ್ಪ ಮಮಶೆಟ್ಟಿ, ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಚೌಕಾ, ಪಿಡಿಒ ಶ್ರೀಶೈಲ್ ಮಂಠಾಳೆ ಹಾಗೂ ಕೂಲಿಕಾರರಿದ್ದರು.