ಚಳಿ ಅಬ್ಬರಕ್ಕೆ ಜನತೆ ತತ್ತರ
ಗುರುಮಠಕಲ್: ಬೆಳಗಾದರೆ ಸಾಕು ಏನ್ ಚಳಿ ರೀ, ಈ ಸಲ ಜಾಸ್ತಿ ಇದ್ದಂಗದ ನೋಡ್ರೀ ಎಂದು ಹೇಳುತ್ತಲೇ ಜನರ ಕುಶಲೋಪರಿಯನ್ನು ಶುರು ಮಾಡುವುದು ಪ್ರಾರಂಭವಾಗುತ್ತಲ್ಲಿರುವುದು ಇದೀಗ ಗುರುಮಠಕಲ್ನಲ್ಲಿ ಸರ್ವೇ ಸಾಮಾನ್ಯವಾಗಿ ಕೇಳಿ ಬರುತ್ತಿರುವ ಸಂಗತಿಯಾಗಿದೆ.
ಬಿಸಿಲಿನ ನಾಡು ಎಂದೆ ಹೆಸರು ಪಡೆದ ಗುರುಮಠಕಲ್ನಲ್ಲಿ ಇದೀಗ ಚಳಿಯ ಆರ್ಭಟ ಹೆಚ್ಚಾಗಿದ್ದು, ಜನತೆ ಬೆಳ್ಳೆಗೆ ಮನೆಯಿಂದ ಹೊರ ಬರಬೇಕಾದರೆ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಶೇ.40-45 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡ ಗುರುಮಠಕಲ್ ಜನತೆ ಅದಕ್ಕೆ ಭಿನ್ನವಾಗಿ ಇದೀಗ ಸುಮಾರು 8.5 ಡಿಗ್ರಿಯಷ್ಟು ತಾಪಮಾನದ ಅನುಭವವನ್ನು ಪಡೆಯುವುದು ಇದೇ ಪ್ರಥಮ.
ಈ ಹಿಂದೆ ಸುಮಾರು 1976ರಲ್ಲಿ ಸುಮಾರು 9.5ರಷ್ಟು ತಾಪಮಾನದ ಅನುಭವವನ್ನು ಪಡೆದ ಜನ, ಇದೀಗ ಮತ್ತೊಮ್ಮೆ 1976ರ ಅನುಭವ ಪಡೆಯುವಂತೆ ಆಗಿದೆ ಎನ್ನುತ್ತಾರೆ ಹಿರಿಯರಾದ ಶ್ಯಾಮಸುಂದರ್.
ವಾಯುಭಾರ ಕುಸಿತ: ಈ ಬಾರಿ ಮಳೆ, ಮುಂಗಾರು ಹಂಗಾಮು ಮುಂಚಿತವಾಗಿ ಬಂದಿರುವುದು ಮತ್ತು ಮೇಲಿಂದ ಮೇಲೆ ಉಂಟಾದ ವಾಯುಭಾರ ಕುಸಿತದಿಂದಾಗಿ ಉಂಟಾದ ಚಂಡಮಾರುತಗಳ ಪ್ರಭಾವವು ಈ ಈ ಭಾಗಕ್ಕೆ ಹೆಚ್ಚಿನ ಪ್ರಭಾವ ಬೀರಿರುವ ಹಿನ್ನಲೆಯಲ್ಲಿ ಈ ಬಾರಿ ಅತ್ಯಂತ ಹೆಚ್ಚಿನ ಪ್ರಮಾಣದ ಚಳಿ ಅನುಭವವು ಇಲ್ಲಿನ ಜನತೆಗೆ ಆಗುತ್ತಿದೆ.
ತಿಂಗಳ ಪ್ರಾರಂಭದಲ್ಲಿ ಅಷ್ಟೊಂದು ಚಳಿ ಇಲ್ಲದಿದ್ದರೂ, ದಿನ ಕಳೆದಂತೆ ಕ್ರಮೇಣವಾಗಿ ಚಳಿಯ ಪ್ರಮಾಣ ಹೆಚ್ಚಾಗಿ ಇದಿಗಾ ಚಳಿಯ ಎಫೆಕ್ಟ್ ಸುಮಾರು 8.5 ಡಿಗ್ರಿಗೆ ಇಳಿದಿದೆ.
ಇದರ ಪರಿಣಾಮದಿಂದಾಗಿ ಜನರು, ಸ್ವೆಟರ್, ಶಾಲು ಮತ್ತು ಬೆಚ್ಚಗಿರುವ ವಸ್ತ್ರಗಳತ್ತ ಗಮನ ಹರಿಸಿದ್ದಾರೆ. ಬಿಸಿ ಬಿಸಿ ತಿಂಡಿಗಳ ಬಳಕೆಯೂ ಹೆಚ್ಚಾಗಿದೆ.
ವ್ಯಾಪಾರದಲ್ಲಿ ವ್ಯತ್ಯಯ: ಒಂದು ತಿಂಗಳಿನಿಂದ ಉಂಟಾಗಿರುವ ಚಳಿಯ ಪರಿಣಾಮದಿಂದ ಇಲ್ಲಿನ ವ್ಯಾಪಾರ ವಹಿವಾಟುಗಳಲ್ಲಿ ವ್ಯತ್ಯಾಯ ಉಂಟಾಗಿದೆ. ಬೆಳಗ್ಗೆ ಅಂಗಡಿ ಮುಂಗಟ್ಟುಗಳು 9 ಗಂಟೆಯ ನಂತರ ಪ್ರಾರಂಭ ಮಾಡಿ, ಸಂಜೆ 7 ಗಂಟೆಗೆಲ್ಲಾ ಬಂದ್ ಆಗುತ್ತಿವೆ.