ರೇಲ್ವೆ ವಿಭಾಗೀಯ ಕಚೇರಿ ಕಾರ್ಯಾರಂಭಕ್ಕೆ ಅಸ್ತು
ಗುಲ್ಬರ್ಗ: ಇಲ್ಲಿಯ ರೇಲ್ವೆ ವಿಭಾಗೀಯ ಕಚೇರಿ ಕಾರ್ಯಾರಂಭಕ್ಕೆ ಪೂರಕ ಬಜೆಟ್‌ನಲ್ಲಿ ಅನುಮೋದನೆ ಸಿಕ್ಕಿದೆ ಎಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಗೆ ಹಾಗೂ ಹೊಸ ಕಟ್ಟಡ ಕಾಮಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರೇಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ತಾಂತ್ರಿಕವಾಗಿ ಎಷ್ಟೇ ಅಡಚಣೆ ಬಂದರೂ ಸಹ ಅದನ್ನು ನಿವಾರಿಸಿ ವಿಭಾಗೀಯ ಕಚೇರಿ ಕಟ್ಟಡ ಕಾಮಗಾರಿಗೆ ಅನುಮೋದನೆ ಪಡೆಯಲಾಗಿದೆ. ಸಚಿವ ಸಂಪುಟ ಸಮಿತಿ ಹಾಗೂ ಸಂಸತ್ತಿನಲ್ಲಿಯೂ ಸಹ ಈ ಕುರಿತು ಅನುಮೋದನೆ ದೊರಕಿದೆ ಎಂದರು.
ಜಿಲ್ಲೆಯು ಮೂರು ವಿಭಾಗೀಯ ಕಚೇರಿಗಳಲ್ಲಿ ಹರಿದು ಹಂಚಿ ಹೋಗಿತ್ತು. ಇದರಿಂದಾಗಿ ಆಡಳಿತಾತ್ಮಕವಾಗಿ ಹಾಗೂ ಕೆಲಸ ಕಾರ್ಯಗಳಿಗಾಗಿ ತೀವ್ರ ತೊಂದರೆಯಾಗಿತ್ತು. ದಕ್ಷಿಣ ಮಧ್ಯೆ ರೇಲ್ವೆ, ನೈಋತ್ಯ ರೇಲ್ವೆ ಹಾಗೂ ಸಿಕಂದ್ರಾಬಾದ್ ರೇಲ್ವೆ ವಿಭಾಗೀಯ ಕಚೇರಿಗಳಿಗೆ ಜಿಲ್ಲೆಯೂ ಮೂರು ವಿಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದರಿಂದ ಒಂದೊಂದು ಪ್ರದೇಶದವರು ತಮಗೆ ಸಂಬಂಧಪಟ್ಟ ವಿಭಾಗೀಯ ಕಚೇರಿಗೆ ಸಂಪರ್ಕಿಸಬೇಕಾಗುತ್ತಿತ್ತು. ಅದನ್ನು ನಿವಾರಿಸಲು ಪೂರಕ ಬಜೆಟ್‌ನಲ್ಲಿ ವಿಭಾಗೀಯ ಕಚೇರಿ ಸ್ಥಾಪನೆಗೆ ಪ್ರಸ್ತಾವನೆ ಸೇರಿಸಿ ಅನುಮೋದನೆ ಪಡೆಯಲಾಗಿದೆ ಎಂದು ಸಚಿವ ಖರ್ಗೆ ತಿಳಿಸಿದರು.