ಕಾಮಗಾರಿಗಳಿಗೆ ಶಾಸಕ ಅಜಯಸಿಂಗ್ ಚಾಲನೆ
ಕನ್ನಡಪ್ರಭ ವಾರ್ತೆ , ಜೇವರ್ಗಿ , ಡಿ.24
ತಾಲೂಕಿನ ಇಜೇರಿ ಗ್ರಾಮದಲ್ಲಿ ಶಾಸಕ ಡಾ. ಅಜಯಸಿಂಗ್ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಅವರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಡಾ. ಅಜಯಸಿಂಗ್, ತಾಲೂಕಿನ ಮಲ್ಲಾಬಾದ್ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಬಳಬಟ್ಟಿ ಮೊದಲನೇ ಹಂತದಲ್ಲಿ ಕಾಮಗಾರಿ ಸ್ಥಳಕ್ಕೆ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಕಳೆದ ತಿಂಗಳು ಭೇಟಿ ನೀಡಿದ್ದಾರೆ. ಯೋಜನೆಗೆ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆ ಎಂದರು.
ಲೋಕೋಪಯೋಗಿ ಇಲಾಖೆಯಿಂದ ವಿವಿಧ ಗ್ರಾಮಗಳಿಗೆ ರಸ್ತೆಗಳನ್ನು ನಿರ್ಮಿಸಲು 14 ಕೋಟಿ ಅನುದಾನ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ. ತಾಲೂಕಿನ ಅಭಿವೃದ್ಧಿಗೆ ತಾವು ಬದ್ಧರಾಗಿದ್ದು, ಮುಂಬರುವ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದರು.
ನಂತರ 2011-12ನೇ ಸಾಲಿನ ಎಂಎಸ್ಡಿಪಿ ಯೋಜನೆಯಡಿಯಲ್ಲಿ 74 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಿಸಿದ ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯ, 2013-14ನೇ ಸಾಲಿನ ಯೋಜನೆಯೊಂದರಲ್ಲಿ ತೆರೆದ ಬಾವಿ ನಿರ್ಮಾಣ ಕಾಮಗಾರಿ, ನಬಾರ್ಡ್ ಯೋಜನೆಯಡಿಯಲ್ಲಿ ಉರ್ದು ಪ್ರೌಢಶಾಲೆ ಕಟ್ಟಡ, ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್, ಇಜೇರಿ ಗ್ರಾಪಂ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ, ತಾಪಂ ಅಧ್ಯಕ್ಷ ಮಲ್ಲಣ್ಣಗೌಡ ನೇದಲಗಿ, ಜಿಪಂ ಸದಸ್ಯರಾದ ಕಸ್ತೂರಿಬಾಯಿ ಗುಂಡಗುರ್ತಿ, ಗುರುಲಿಂಗಪ್ಪಗೌಡ ಪಾಟೀಲ್ ಆಂದೋಲಾ, ತಾಪಂ ಸದಸ್ಯರಾದ ಅಮೀರ್ ಹಮಜಾ, ರಮೀದಾಬೇಗಂ ಬಿಳವಾರ, ಮಲ್ಲಿಕಾರ್ಜುನ ಕೆಲ್ಲೂರ, ಗ್ರಾಮದ ಮುಖಂಡರಾದ ರುಕುಂ ಪಟೇಲ್, ಲಾಲಯ್ಯ ಗುತ್ತೇದಾರ, ತಿಪ್ಪಣ್ಣ ಗುಂಡಗುರ್ತಿ, ಚಂದ್ರಕಾಂತ ಯಂಕಂಚಿ, ಬಸವಣ್ಣೆಪ್ಪ ಗೌನಳ್ಳಿ, ಚಂದ್ರಶೇಖರ ಹರನಾಳ, ಶಾಂತಪ್ಪ ಕುಡಲಗಿ, ಶೌಕತ್ ಅಲಿ ಆಲೂರ ಸೇರಿದಂತೆ ಇಜೇರಿ ಗ್ರಾಮಸ್ಥರು ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
'ಕಾಮಗಾರಿ ಗುಣಮಟ್ಟಕ್ಕೆ ಒತ್ತು ನೀಡಿ'
ಜೇವರ್ಗಿ: ಸ್ಥಳೀಯ ಲೋಕೋಪಯೋಗಿ ಇಲಾಖೆಯಿಂದ ನಡೆಸಲಾಗುತ್ತಿರುವ ತಾಲೂಕಿನ ಆಂದೋಲಾದಿಂದ ಹೊಸೂರ ರಸ್ತೆ ಕಾಮಗಾರಿಯನ್ನು ಶಾಸಕ ಡಾ. ಅಜಯಸಿಂಗ್ ವೀಕ್ಷಿಸಿದರು.
ಆಂದೋಲಾದಿಂದ ಮಲ್ಲಾ, ಬಿರಾಳ ಮಾರ್ಗವಾಗಿ ಹೊಸೂರ ಸೇರುವ ಈ ರಸ್ತೆ ಪ್ರಮುಖ ಮಾರ್ಗವಾಗಿದ್ದು, ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಈ ಕಾಮಗಾರಿ ಅಂದಾಜು 3 ಕೋಟಿ 8 ಕಿ.ಮೀ. ರಸ್ತೆ ಕಾಮಗಾರಿಯನ್ನು ಗುಣಮಟ್ಟದಿಂದ ಕೂಡಿರಬೇಕು ಹಾಗೂ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸದಸ್ಯ ಗುರುಲಿಂಗಪ್ಪಗೌಡ ಪಾಟೀಲ್ ಆಂದೋಲಾ, ಸಿದ್ದಲಿಂಗರಡ್ಡಿ ಇಟಗಿ, ಮರೇಪ್ಪ ಸರಡಗಿ ಸೇರಿದಂತೆ ತಹಸೀಲ್ದಾರ್ ಮಲ್ಲಿಕಾರ್ಜುನರೆಡ್ಡಿ ಪಾಟೀಲ್, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇದ್ದರು.