ಖಾಸಗಿ ವಾಹನಗಳ ಕಿರಿಕಿರಿ; ಹೋರಾಟ ಸಮಿತಿ ಆರೋಪ
ಗುಲ್ಬರ್ಗ: ನಗರದಲ್ಲಿನ ಜನನಿಬಿಡ ಸ್ಥಳದಲ್ಲಿ ಮ್ಯಾಕ್ಸಿಕ್ಯಾಬ್, ಕ್ರೂಸರ್, ಜೀಪು ವಾಹನಗಳು ತೆರವುಗೊಳಿಸಬೇಕೆಂದು ಬಹುಜನ ಹೋರಾಟ ಸಮಿತಿ ನಗರ ಘಟಕ ಆಗ್ರಹಿಸಿದೆ. ಗುಲ್ಬರ್ಗ ನಗರದಲ್ಲಿನ ಕೇಂದ್ರ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಜೇವರ್ಗಿ ಕ್ರಾಸ್, ಶಹಾಬಜಾರ್ ನಾಕಾ, ತಿರಂದಾಸ್ ಟಾಕೀಸ್, ಜಗತ್, ನೆಹರು ಗಂಜ್ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಅಕ್ರಮವಾಗಿ ಸಂಚರಿಸುತ್ತಿರುವ ವಾಹನಗಳು ರಾಜಾರೋಷವಾಗಿ ಸಂಚರಿಸುತ್ತಿವೆ ಎಂದು ಬಹುಜನ ಹೋರಾಟ ಸಮಿತಿ ಸಾರಿಗೆ ಇಲಾಖೆಯ ಆಯುಕ್ತರಿಗೆ ದೂರಿದೆ.
ನಗರದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮತ್ತು ಸರ್ಕಾರಿ ಬಸ್ಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಕೇಂದ್ರ ಬಸ್ ನಿಲ್ದಾಣ ಮತ್ತು ಸಿಟಿ ಬಸ್ ನಿಲ್ದಾಣ ಬಿಟ್ಟು 500 ಮೀಟರ್ ಅಂತರದಲ್ಲಿ ವಾಹನಗಳನ್ನು ನಿಲ್ಲಿಸುವ ಕಾನೂನಿನ ನಿಯಮವಿದೆ. ಆದರೆ ವಾಹನಗಳ ಮಾಲೀಕರು ಕಾನೂನಿನ ನಿಯಮ ಪಾಲಿಸದೆ ನಗರದಲ್ಲಿ ವಾಹನಗಳ ಸಂಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದೆ. ಅಕ್ರಮವಾಗಿ ಸಂಚರಿಸುತ್ತಿರುವ ವಾಹನಗಳ ಪರವಾನಗಿ ರದ್ದುಪಡಿಸಿ ವಾಹನಗಳ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳಲು ವಿಳಂಬ ನೀತಿ ಅನುಸರಿಸಿದರೆ ತಮ್ಮ ನಿರ್ಲಕ್ಷ್ಯತನ ಖಂಡಿಸಿ ಬಹುಜನ ಹೋರಾಟ ಸಮಿತಿಯ ಸಂಘಟನೆಯು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಉಗ್ರ ಹೋರಾಟ ಮಾಡಲು ಅನಿವಾರ್ಯವಾಗುತ್ತದೆ ಎಂದು ಅಧ್ಯಕ್ಷ ಸತೀಶ ಡಿ. ಮಾಲೆ, ಜಿಲ್ಲಾ ಉಪಾಧ್ಯಕ್ಷ ರಾಜು ಎಂ. ಕಾಂಬಳೆ, ಹಾಗೂ ರಾಹುಲ್ ತೋಂಟೆ ಎಚ್ಚರಿಸಿದ್ದಾರೆ.
ನಾಳೆ ವಿಶ್ವಕರ್ಮ ಪ್ರತಿಭಟನೆ
ಗುಲ್ಬರ್ಗ: ಸುದ್ದಿ ವಾಹಿನಿಯೊಂದರದಲ್ಲಿ ಕೆಲ ಸಂಶೋಧಕರು ಅಮರಶಿಲ್ಪ ಜಕಣಾಚಾರ್ಯರ ಅಸ್ತಿತ್ವವೇ ಇಲ್ಲ, ಅವರೊಬ್ಬ ಕಾಲ್ಪನಿಕ ವ್ಯಕ್ತಿಯೆಂದು ಹೇಳಿರುವ ಕ್ರಮವನ್ನು ಖಂಡಿಸಿ ಡಿ.26ರಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಗುಲ್ಬರ್ಗದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಕೂಡಲೇ ಸಂಶೋಧಕರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಅಮರಶಿಲ್ಪ ಜಕಣಾಚಾರ್ಯರ ಕುರಿತು ಕೂಲಂಕುಷವಾಗಿ ಅಧ್ಯಯನ ನಡೆಸಿ ಅವರ ಅಸ್ತಿತ್ವ ಇತ್ತು ಎಂದು ಹೇಳಿಕೆ ನೀಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಮಹಾಸಭಾ ಉತ್ತರ ಕರ್ನಾಟಕ ಸಂಚಾಲಕ ವೀರೇಂದ್ರ ಇನಾಂದಾರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದೇವಿಂದ್ರಪ್ಪ ಸುತಾರ, ಸುಭಾಷ ಪಂಚಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.