ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತಾಯಿ- ತಂದೆ ಗೌರವಿಸಿ: ಶಿವಕುಮಾರ ಶ್ರೀಗಳು

Vishwanath S
Updated On : 25 Dec 2013, 12:23 pm

ಕನ್ನಡಪ್ರಭ ವಾರ್ತೆ ,  ಆಳಂದ ,  ಡಿ.24
ಸಮಾಜದ ಒತ್ತಡದ ಬದುಕಿನಲ್ಲಿ ತಾಯಿ ತಂದೆಯನ್ನು ಕಡೆಗಣಿಸಲಾಗುತ್ತಿದೆ. ಇಂದಿನ ಮಕ್ಕಳು ಅವರನ್ನು ಗೌರವಿಸುವಂಥ ಪರಂಪರೆ ಬೆಳೆಸಬೇಕಾಗಿದೆ ಎಂದು ಬೀದರ್‌ನ ಚಿದಂಬರಾಶ್ರಮದ ಶಿವಕುಮಾರ ಶ್ರೀ ಹೇಳಿದರು.
ತಾಲೂಕಿನ ತಡಕಲ್ ಗ್ರಾಮದಲ್ಲಿ ಏರ್ಪಡಿಸಿದ್ದ ಕಾಯಕ ಯೋಗಿ ದಿ.ರುಕ್ಮಯ್ಯ ಗುತ್ತೇದಾರ ಪ್ರಥಮ ಪುಣ್ಯ ಸ್ಮರಣೆ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಂಸ್ಕಾರ ನೀಡಿ: ಸಭ್ಯ ಇದ್ದರೇ ಸಾಲದು, ಸಂಸ್ಕಾರವೂ ಬೇಕು. ಸಂಸ್ಕೃತಿ ಹೊಂದಿದ ವ್ಯಕ್ತಿ ಸಮಾಜದಲ್ಲಿ ಸುಖಿಯಾಗಿ ಇರಬಲ್ಲ. ಮಕ್ಕಳಿಗೆ ಸಂಪತ್ತು, ಆಸ್ತಿ ಸಂಪಾದಿಸಿ ಕೊಡುವವನು ತಂದೆಯಾಗಲಾರ. ನ್ಯಾಯ, ನೀತಿ, ಧರ್ಮಗಳ ಸಂಸ್ಕಾರ ನೀಡುವ ವ್ಯಕ್ತಿ ಆದರ್ಶ ತಂದೆಯಾಗಲು ಸಾದ್ಯ ಎಂದರು. ರಾಜಶೇಖರ ಶ್ರೀ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಜೀವನದಲ್ಲಿ ಗುರಿ ಹೊಂದಬೇಕು. ಆಗ ಜೀವನ ಸಾರ್ಥಕವಾಗಿ ನೆರೆ ಹೊರೆಯವರ ಪ್ರೀತಿಗೆ ಅರ್ಹನಾಗಿ ಬದುಕಲು ಸಾದ್ಯ ಎಂದು ಹೇಳಿದರು. ಶಾಸಕ ಮಾಲಿಕಯ್ಯ ಗುತ್ತೇದಾರ ಮಾತನಾಡಿ, ಅಧಿಕಾರ, ಅಂತಸ್ತು ಶಾಶ್ವತವಲ್ಲ. ಸೇವಾ ಕಾರ್ಯಗಳೇ ಶಾಶ್ವತವಾಗಿ ಉಳಿಯಬಲ್ಲವು ಎಂದು ತಿಳಿಸಿದರು.
ನಾಟಕ ಕೃತಿ ಬಿಡುಗಡೆ: ಮಾಜಿ ಶಾಸಕ ಸುಭಾಷ ಗುತ್ತೇದಾರ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಲೇಖಕ ಅಪ್ಪಾಸಾಬ್ ಗುಂಡೇ ಬರೆದ 'ಶಾಲೆ ಕಲಿಯಲೇಬೇಕು' ಎಂಬ ನಾಟಕ ಕೃತಿಯನ್ನು ಶಿವಕುಮಾರ್ ಸ್ವಾಮಿ ಬಿಡುಗಡೆ ಮಾಡಿದರು. ಜಡೀ ಬಸವಲಿಂಗ ಶ್ರೀ, ಹಿರೇಮಠದ ಸಿದ್ದಮಲ್ಲ ಶ್ರೀ, ಉದ್ಯಮಿದಾರ ದತ್ತರಾಜ ಗುತ್ತೇದಾರ, ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ, ತಾಪಂ ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ, ಗಣ್ಯರಾದ ಸಂತೋಷ ಗುತ್ತೇದಾರ, ಸತೀಶ ಗುತ್ತೇದಾರ, ಚಂದ್ರಕಾಂತ ಗುತ್ತೇದಾರ, ಅಶೋಕ ಸಾವಳೇಶ್ವರ, ಮಲ್ಲಣ್ಣ ನಾಗೂರೆ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಗುತ್ತೇದಾರ ಪರಿವಾರದವರು ಪಾಲ್ಗೊಂಡಿದ್ದರು.
ಬೆಳಗ್ಗೆ ರುಕ್ಮಯ್ಯ ಗುತ್ತೇದಾರರ ಸಮಾಧಿ ಸ್ಥಳದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಶಿವರುದ್ರಯ್ಯ ಸ್ವಾಮಿ ಗೌಡಗಾಂವ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಅಪ್ಪಾಸಾಬ್ ಗುಂಡೆ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement