ಎಂಪಿ ಚುನಾವಣೆ: ಖರ್ಗೆ, ಧರಂ ಕಣಕ್ಕೆ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಡಿ.25
ಲೋಕಸಭಾ ಚುನಾವಣೆಯಲ್ಲಿ ಗುಲ್ಬರ್ಗ ಮೀಸಲು ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ಮತ್ತು ಬೀದರ್ ಕ್ಷೇತ್ರದಿಂದ ಎನ್.ಧರಂಸಿಂಗ್ ಅವರನ್ನು ಅಭ್ಯರ್ಥಿಗಳನ್ನಾಗಿಸಲು ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಒಮ್ಮತದ ನಿರ್ಣಯವನ್ನು ಕೆಪಿಸಿಸಿ ಮುಖಾಂತರ ಎಐಸಿಸಿಗೆ ಕಳುಹಿಸಲು ತೀರ್ಮಾನ ಕೈಗೊಳ್ಳಲಾಯಿತು.
ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದ ನೋಂದಣಿ ಅತ್ಯಂತ ತ್ವರಿತಗತಿಯಲ್ಲಿ ಮುಗಿಸಲು ಎಲ್ಲ ಮುಖಂಡರು ಮುಂದಾಗಬೇಕು. ಈಗಾಗಲೇ ಸದಸ್ಯತ್ವ ನೋಂದಣಿಯ ಪುಸ್ತಕಗಳನ್ನು ಆಯಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ನೀಡಲಾಗಿದ್ದು, ಬರುವ ಜ.26ರೊಳಗಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ತಲುಪಿಸಲು ನಿರ್ಧರಿಸಲಾಯಿತು.
ಕೈಪಿಡಿ ಹೊರತರಲು ಸಮಿತಿ ರಚನೆ: ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆಗಳು ಮತ್ತು ಅನುಷ್ಠಾನ ವಿಶೇಷವಾಗಿ ಕೇಂದ್ರದಲ್ಲಿ ಸಚಿವರಾಗಿರುವ ಮಲ್ಲಿಕಾರ್ಜುನ ಖರ್ಗೆ ಈ ಭಾಗಕ್ಕೆ ತಂದಿರುವ ಸಮಗ್ರ ಯೋಜನೆಗಳ ಕೈಪಿಡಿಯನ್ನು ಹೊರತರಲು ಸಮಿತಿಯೊಂದನ್ನು ರಚಿಸಿಲು ಜಿಲ್ಲಾಧ್ಯಕ್ಷರಿಗೆ ಸಭೆಯಲ್ಲಿ ಸಂಪೂರ್ಣ ಅಧಿಕಾರವನ್ನು ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಮಾತನಾಡಿ, ಕಾರ್ಯಕರ್ತರೇ ಪಕ್ಷದ ಜೀವಾಳಾಗಿದ್ದು, ಜಿಲ್ಲಾಧ್ಯಕ್ಷರು, ಕ್ಷೇತ್ರದ ಶಾಸಕರು, ಸಂಸದರು, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರೊಂದಿಗೆ ಸಮಾಲೋಚಿಸಿ ನಿಜವಾದ ಕಾರ್ಯಕರ್ತರ ಪಟ್ಟಿಯನ್ನು ನೀಡಿ ವಿವಿಧ ನಿಗಮ ಮಂಡಳಿಗಳಲ್ಲಿ ಅವರಿಗೆ ಅವಕಾಶ ಕಲ್ಪಿಸಲು ಕ್ರಮ ಕೈಗೊಂಡು ಪಟ್ಟಿ ನೀಡಿದಲ್ಲಿ ಮುಖ್ಯಮಂತ್ರಿಗಳಿಂದ ಅನುಮೋದಿಸಿಕೊಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭಾಗಣಗೌಡ ಸಂಕನೂರ, ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಮುಖಂಡರಾದ ಇಕ್ಬಾಲ್ ಅಹ್ಮದ್ ಸರಡಗಿ, ಜಿ.ರಾಮಕೃಷ್ಣ, ಜಿಲ್ಲಾ ಸಮಿತಿ ಪದಾಧಿಕಾರಿಗಳು ಇತರರು ಪಾಲ್ಗೊಂಡಿದ್ದರು.