ಕುಸ್ತಿ ಪಂದ್ಯಾವಳಿ ಉಳಿಸಿ, ಬೆಳೆಸಿ: ಗೋಪಾಲ
ಶಹಾಪುರ: ಗ್ರಾಮೀಣ ಸೊಗಡನ್ನು ಉಳಿಸುವ ನಿಟ್ಟಿನಲ್ಲಿ ಕುಸ್ತಿ ಪಂದ್ಯಾವಳಿ ಉತ್ತಮ ಪ್ರಯೋಗವಾಗಿದ್ದು, ಅದನ್ನು ಉಳಿಸಿ ಬೆಳಸುವ ಅಗತ್ಯವಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಗೋಪಾಲ ಸುರಪುರ ಹೇಳಿದರು.
ಪಟ್ಟಣದ ಹಳಿಸಗರದ ಹನುಮಾನ್ ದೇವಾಲಯದ ಕಾರ್ತೀಕ ಮಾಸದ ಅಂಗವಾಗಿ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಕುಸ್ತಿ ಕ್ರೀಡೆ ಇತ್ತೀಚಿನ ದಿನಗಳಲ್ಲಿ ಅವನತಿಯತ್ತ ಸಾಗುತ್ತಿದೆ. ಇದನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಪ್ರಯತ್ನ ನಡೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅರವಿಂದರೆಡ್ಡಿ ಕುಸ್ತಿಪಟುವಿಗೆ ಕಠಿಣ ತರಬೇತಿ ಹಾಗೂ ಶ್ರಮದ ಅಗತ್ಯವಿದೆ. ಒಂದು ಕುಟುಂಬದಲ್ಲಿ ಐದು ಜನ ಮಕ್ಕಳಿದ್ದರೆ, ಆ ಆಹಾರವನ್ನು ಒಬ್ಬ ಕುಸ್ತಿಪಟುವಿಗೆ ಕೊಟ್ಟು ಬೆಳೆಸುವ ವಾತಾವರಣ ನಿರ್ಮಾಣ ಮಾಡಬೇಕು. ಹಾಗಾದಲ್ಲಿ ಮಾತ್ರ ಉತ್ತಮ ಕುಸ್ತಿಪಟುವಾಗುವಲ್ಲಿ ಸಾಧ್ಯ ಎಂದರು.
ಸ್ಥಳೀಯ ಕುಸ್ತಿಪಟುಗಳು ದುದನಿಯ ಮತ್ತು ಮಕ್ತಂಪುರ ಜತೆ ಕಾಳಗ ನಡೆಸಿದರು. ಕುಸ್ತಿಪಂದ್ಯಾವಳಿಯಲ್ಲಿ ಶಿರವಾಳದ ಬಸವರಾಜ, ಮಂಜುನಾಥ ಕಡಗ ಪಡೆದರು. ದೇಸಾಯಪ್ಪ, ಭೀಮಣ್ಣ ಚಂಡು, ನಾಗಪ್ಪ,ಹಣಮಂತ ಆಚಾರ್ಯ ಸೇರಿ ನೂರಾರು ಜನ ಜಮಾಯಿಸಿದ್ದರು.