ನಾಗಾವಿ ಅಧ್ಯಯನ ಪೀಠ ಪುನರುಜ್ಜೀವನಗೊಳಿಸಿ
ಕನ್ನಡಪ್ರಭ ವಾರ್ತೆ ಚಿತ್ತಾಪುರ ಡಿ.25
ರಾಷ್ಟ್ರಕೂಟರ ಕುಲದೇವತೆ ನಾಗಾವಿ ದೇವಸ್ಥಾನ ಹಾಗೂ ಅಲ್ಲಿನ ಪ್ರದೇಶದಲ್ಲಿನ ಕೋಟೆ, ಶಿಲಾಶಾಸನಗಳ ಕುರಿತು ಸಂಶೋಧನೆ ನಡೆಸಿ ಅವುಗಳನ್ನು ಪುನರುಜ್ಜೀವನಗೊಳಿಸಿ ಅಲ್ಲಿ ಪ್ರವಾಸಿ ತಾಣವನ್ನಾಗಿ ಮಾಡುವುದು ಅಲ್ಲದೇ ನಾಗಾವಿ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಬೇಕೆಂದು ಉತ್ತರ ಕರ್ನಾಟಕ ಕರವೇ ಅಧ್ಯಕ್ಷ ಶರಣು ಗದ್ದುಗೆ ಸರ್ಕಾರಕ್ಕೆ ಆಗ್ರಹಿಸಿದರು.
ಪಟ್ಟಣದ ಭುವನೇಶ್ವರ ಚೌಕದಲ್ಲಿ ಮಂಗಳವಾರ ರಾತ್ರಿ ಹಮ್ಮಿಕೊಂಡ 2ನೇ ನಾಗಾವಿ ನಾಡು ಉತ್ಸವ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿ, ನಾಗಾವಿ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಸೇರಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಂತಾಗಬೇಕು. ಇಲ್ಲಿನ ಇತಿಹಾಸ ಮರೆಯಾಗುತ್ತಿದೆ. ಸ್ವಾಭಿಮಾನಿ ಕನ್ನಡಿಗರಾದ ನಾವು ಇತಿಹಾಸ ಸಂರಕ್ಷಣೆ ಕಾರ್ಯ ಮಾಡಬೇಕಾಗಿದೆ ಎಂದರು.
ಎಬಿಸಿಡಿ ಸಂಸ್ಕೃತಿ ಬಿಡಿ: ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಬಂದಿರುವುದು ನಮ್ಮ ರಾಜ್ಯದ ಹೆಮ್ಮೆಯ ಸಂಗತಿ. ಇಂಥ ನಾಡಿನಲ್ಲಿ ಸರ್ಕಾರದ ಆಡಳಿತದಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತಿರುವುದು ವಿಷಾದಕರ ಸಂಗತಿ. ಸರ್ಕಾರದವರು ಕನ್ನಡ ಉಳಿಸಿ ಬೆಳೆಸಲು ಎಬಿಸಿಡಿ ಸಂಸ್ಕೃತಿ ಬಿಟ್ಟು ಅಆಇಈ ಸಂಸ್ಕೃತಿಗೆ ಮರಳಬೇಕು. ಇಲ್ಲದಿದ್ದಲ್ಲಿ ಕನ್ನಡ ನಾಡು, ನುಡು, ಜಲ ಭಾಷೆ ಉಳಿಸಿ ಬೆಳೆಸಲು ಪಕ್ಷಾತೀತ ಸಂಘಟನೆಯಾದ ಕರ್ನಾಟಕ ರಕ್ಷಣ ವೇದಿಕೆಯು ಇಂಥಹ ಪ್ರಕರಣಗಳ ಬಗ್ಗೆ ಹೋರಾಟಕ್ಕೆ ಸದಾಸಿದ್ದ ಎಂದು ಹೇಳಿದರು.
ಹ. ಸೈಯ್ಯದ್ ಶಾಹ ಮುಸ್ತಫಾ ಖಾದ್ರಿ ಮಾತನಾಡಿ, ನಾಗಾವಿ ಕ್ಷೇತ್ರದಲ್ಲಿ ಅವಸಾನದ ಅಂಚಿನಲ್ಲಿರುವ ಪುರಾತನ ಶಿಲಾಶಾಸನಗಳ ಮತ್ತು ದೇಗುಲಗಳ ಬಗ್ಗೆ ಸಂಶೋಧನೆ ನಡೆಸಿ ಅವುಗಳ ಉಳಿವಿಗೆ ಹೋರಾಡುತ್ತಿರುವ ಕರವೇ ಕಾರ್ಯವು ಮೆಚ್ಚುವಂಥದ್ದು. ಸರ್ಕಾರಗಳು ಇವುಗಳ ರಕ್ಷಣಿಗೆ ಮುಂದಾಗಿ ಮುಂದಿನ ಪೀಳಿಗೆಗೆ ಇತಿಹಾಸ ಮಾಹಿತಿಗೆ ಅವುಗಳ ಪುನರ್ ಜೀವನಗೊಳಿಸಬೇಕೆಂದು ಹೇಳಿದರು.
ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ: ಸಿದ್ದವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಸರ್ಕಾರದ ವತಿಯಿಂದ ಮಾಡಬೇಕಾದ ನಾಗಾವಿ ಉತ್ಸವ ಕಾರ್ಯಕ್ರಮವನ್ನು ಮಾಡಲು ವಿಳಂಬ ಮಾಡುತ್ತಿರುವುದು ಸರಿಯಲ್ಲ. ಇಲ್ಲಿನ ಇತಿಹಾಸ ಉಳಿಸಿ ಬೆಳೆಸಲು, ಸರ್ಕಾರ ಮುಂದಾಗಿ ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಹೇಳಿದರು. ಸೋಮಶೇಖರ ಶಿವಾಚಾರ್ಯರು ಮಾಡನಾಡಿ, ಕಳೆದ ವರ್ಷ ನಾಗಾವಿ ಉತ್ಸವ ಕಾರ್ಯಕ್ರಮದಲ್ಲಿ ಆಗಿನ ಅಧಿಕಾರಿಗಳು ನಾಗಾವಿ ಉತ್ಸವಕ್ಕೆ 15 ಲಕ್ಷ ಮಂಜುರಾಗಿದೆ. ಶೀಘ್ರದಲ್ಲಿಯೇ ಸರ್ಕಾರದ ವತಿಯಿಂದ ನಾಗಾವಿ ಉತ್ಸವ ಕಾರ್ಯಕ್ರಮ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಉತ್ಸವ ಮಾಡದೇ ಹಣ ವಾಪಸ್ಸು ಹೋಗಿರುವುದು ವಿಷಾದದ ಸಂಗತಿ ಎಂದು ಹೇಳಿದರು.
ತಾಲೂಕು ಕರವೇ ಅಧ್ಯಕ್ಷ ನರಹರಿ ಕುಲ್ಕರ್ಣಿ, ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್, ಉಪಾಧ್ಯಕ್ಷ ನಾಗರಾಜ ಕಡಬೂರ, ಸದಸ್ಯ ವಿನೋದ ಗುತ್ತೇದಾರ, ಕರವೇ ಹೈ.ಕ ಅಧ್ಯಕ್ಷ ಗುರುರಾಜ ಶಕ್ತಿ, ಮಂಜುನಾಥ ಮಠಪತಿ, ಸರ್ವೆಶ್ವರ ಹೂಗಾರ, ಜಿಲ್ಲೆಯ ತಾಲೂಕುಗಳ ಕರವೇ ಅಧ್ಯಕ್ಷರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ವೈಭವ: ಚಿತ್ರನಟಿ ಶ್ರೀಪ್ರಿಯಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಹಾಸ್ಯ ಕಲಾವಿದ ರಾಚಯ್ಯಸ್ವಾಮಿ ಅವರ ರಸಮಂಜರಿ ಜನಮನ ಸೆಳೆಯಿತು.