ನಾಳೆ ಕನ್ನಡದ ಜಾಗೃತಿ ಮಾಲಿಕೆ
ಗುರುಮಠಕಲ್: ಸಗರನಾಡು ಸೇವಾ ಪ್ರತಿಷ್ಠಾನದ ವತಿಯಿಂದ ಡಿ- 27ರ ಬೆಳಿಗ್ಗೆ 10.30ಕ್ಕೆ ಇಲ್ಲಿನ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಹಿತಿ ಮಾಹಿತಿ ಕನ್ನಡದ ಜಾಗೃತಿ ಸಾಪ್ತಾಹಿಕ ಸರಣಿ ಮಾಲಿಕೆ-5 ಹಾಗೂ ಎಂ. ಗೋಪಾಲಕೃಷ್ಣ ಅಡಿಗ ಕುರಿತು ಉಪನ್ಯಾಸ ಆಯೋಜಿಸಲಾಗಿದೆಂದು ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ತಿಳಿಸಿದ್ದಾರೆ. ಕಾರ್ಯಕ್ರಮದ ಸಾನಿದ್ಯ ಖಾಸಾ ಮಠದ ಶ್ರೀ ವಹಿಸಲಿದ್ದು, ನುಡಿಸಿರಿ ಜಿಲ್ಲಾ ಘಟಕದ ಉಪಾಧ್ಯಕ್ಷ ವಿಶ್ವನಾಥ ಶಿರವಾರ ಉದ್ಘಾಟಿಸುವರು. ಅಶೋಕ ಚೌದ್ರಿ ಉಪನ್ಯಾಸ, ಪಪಂ ಸದಸ್ಯ ನಿಂಗಪ್ಪ ತಾಂಡೂರಕರ್ ಹಾಗೂ ದೇವರಾಜ ವರ್ಕನಳ್ಳಿ ಭಾಗವಹಿಸಲಿದ್ದು, ಬೂತಾಳ ಅಧ್ಯಕ್ಷತೆ ವಹಿಸುವರು.
ಬೆಳೆಗೆ ಉತ್ತಮ ಮಣ್ಣು ಮುಖ್ಯ: ಜೀವಣಗಿ
ಗುಲ್ಬರ್ಗ: ರೈತ ಉತ್ತಮ ಬೆಳೆ ಬೆಳೆಯಬೇಕಾದರೆ ಮಣ್ಣು ಉತ್ತಮವಾಗಿರಬೇಕು. ಕಬ್ಬು ಹೆಚ್ಚು ಇಳುವಳಿಯಾಗಬೇಕಾದರೆ ಮಣ್ಣಿನಲ್ಲಿ 16 ಪೋಷಕಾಂಶಗಳಿರಬೇಕು, ಅದಕ್ಕಾಗಿ ಮಣ್ಣಿನ ಪರೀಕ್ಷೆ ಮಾಡಿ, ಮಣ್ಣಿಗೆ ತಿಪ್ಪೆಗೊಬ್ಬರ ಮತ್ತು ಒಳ್ಳೆಯ ನಿರ್ವಹಣೆ ಮಾಡಬೇಕು ಎಂದು ಕೃಷಿ ವಿಜ್ಞಾನಿಗಳಾದ ಡಾ. ರಾಜು ತೆಗ್ಗಳ್ಳಿ, ಚಂದ್ರಕಾಂತ ಜೀವಣಗಿ ಅಭಿಪ್ರಾಯಪಟ್ಟರು.
ಮಹಾಗಾಂವದ ಕಳ್ಳಿಮಠ ಸಂಸ್ಥಾನದಲ್ಲಿ ನಡೆದ ಕಬ್ಬು ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಕಬ್ಬು ಹೆಚ್ಚಿನ ಇಳುವರಿ ಪಡೆಯಲು ರೈತರು ಅನುಸರಿಸಬೇಕಾದ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಗುರುಲಿಂಗ ಶ್ರೀ, ಗುರುಪಾದಲಿಂಗ ಶ್ರೀ, ಸಿದ್ಧರಾಮ ಶ್ರೀ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕೃಷಿ ವಿಜ್ಞಾನಿಗಳಾದ ಪ್ರಶಾಂತ ಕುಲಕರ್ಣಿ, ಬಸಯ್ಯ ಹಿರೇಮಠ, ರೈತರು ಭಾಗವಹಿಸಿದ್ದರು. ರೇವಣಸಿದ್ದಪ್ಪ ನಿಂಬಾಜಿ ನಿರೂಪಿಸಿದರು. ಅನೀಲಕುಮಾರ್ ಸ್ವಾಗತಿಸಿದರು.
ಜೆಪಿಎಲ್ ಕ್ರಿಕೆಟ್ಗೆ ಅರ್ಜಿ ಆಹ್ವಾನ
ಜೇವರ್ಗಿ: ಸ್ಥಳೀಯ ಜೇವರ್ಗಿ ಪ್ರೀಮಿಯರ್ ಲೀಗ್ (ಜೆಪಿಎಲ್) ವತಿಯಿಂದ ತಾಲೂಕು ಮಟ್ಟದ ಕ್ರೀಡಾ ಪಟುಗಳಿಗಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು, ಆಸಕ್ತ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಟಗಾರರು ಡಿ.30 ರಿಂದ ಜನವರಿ 2ರವರೆಗೆ ಅರ್ಜಿ ಫಾರಂಗಳು ತುಂಬಿ ಜತೆಗೆ ಮೂರು ಇತ್ತೀಚಿನ ಭಾವಚಿತ್ರಗಳನ್ನು ಲಗತ್ತಿಸಿ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಜೇವರ್ಗಿಯ ವಿಶ್ವೇಶ್ವರಯ್ಯ ಐಟಿಐ ಕಾಲೇಜಿನಲ್ಲಿ ಸಲ್ಲಿಸಬಹುದು. ಆಟಗಾರರು 16 ವರ್ಷ ಮೆಲ್ಪಟ್ಟಿರಬೇಕು.
ಜೇವರ್ಗಿ ತಾಲೂಕಿನ ಆಟಗಾರರಿಗೆ ಮಾತ್ರ ಅವಕಾಶವಿದ್ದು, ಗುರುತಿನ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ಜೇವರ್ಗಿ ಮೇಘಾ ಫೋಟೋ ಸ್ಟುಡಿಯೋ 9448576526ಗೆ ಸಂಪರ್ಕಿಸಿ ಅರ್ಜಿ ಪಡೆಯಬಹುದು. ಭಾಗವಹಿಸಿದ ಪ್ರತಿಯೊಬ್ಬ ಆಟಗಾರರಿಗೂ ನೆನಪಿನ ಕಾಣಿಕೆ. ಫೈನಲ್ ಪಂದ್ಯದಲ್ಲಿ ಭಾಗವಹಿಸಿದ ಪ್ರತಿ ಆಟಗಾರರಿಗೆ ನಗದು ಬಹುಮಾನ ನೀಡಲಾಗುವುದು. ಉತ್ತಮ ಬ್ಯಾಟ್ಸಮನ್, ಉತ್ತಮ ಬೌಲರ್, ವಿಕೇಟ್ ಕೀಪರ್, ಉತ್ತಮ ಫಿಲ್ಡರ್ ಹಾಗೂ ಉತ್ತಮ ಆಲರೌಂಡರ್ ಜತೆಗೆ ಇನ್ನಿತರೆ ಬಹುಮಾನ ನೀಡಲಾಗುವುದು. ಒಟ್ಟು 12 ತಂಡಗಳಿಗಾಗಿ 168 ಆಟಗಾರರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಜೆಪಿಎಲ್ ಆಡಳಿತ ಮಂಡಳಿ ತಿಳಿಸಿದೆ.
ಪದಾಧಿಕಾರಿಗಳ ಆಯ್ಕೆ ಸಭೆ ನಾಳೆ
ಚಿತ್ತಾಪುರ: ಚಿತ್ತಾಪುರ ತಾಲೂಕು ಕೋಲಿ ಸಮಾಜದ ಪದಾಧಿಕಾರಿಗಳ ಆಯ್ಕೆಗಾಗಿ ಡಿ.27ರಂದು 10 ಗಂಟೆಗೆ ಪಟ್ಟಣದ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಸಭೆ ಕರೆಯಲಾಗಿದೆ ಎಂದು ತಾಲೂಕು ಕೋಲಿ ಸಮಾಜದ ಗೌರವಾಧ್ಯಕ್ಷ ಬಸವರಾಜ ಚಿಣಮಳ್ಳಿ ತಿಳಿಸಿದ್ದಾರೆ.ತಾಲೂಕು ಅಧ್ಯಕ್ಷ ಅವಧಿ ಮುಗಿದ ಕಾರಣ ಹೊಸ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕಾಗಿದ್ದು, ಕೋಲಿ ಸಮಾಜದ ಮುಖಂಡರು, ಬುದ್ಧಿಜೀವಿಗಳು, ಚಿಂತಕರು, ಸಮಾಜದ ಎಲ್ಲ ಚುನಾಯಿತ ಪ್ರತಿನಿಧಿಗಳು, ಹಿರಿಯರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ತಿಳಿಸುವ ಮೂಲಕ ಆಯ್ಕೆಯನ್ನು ಯಶಸ್ವಿಗೊಳಿಸಬೇಕೆಂದು ಚಿನಮಳ್ಳಿ ಕೋರಿದ್ದಾರೆ.
28ರಂದು ವಿಜಯೋತ್ಸವ
ಆಳಂದ: 1ನೇ ಜನವರಿ 1818ರ ಭೀಮಾ ಕೋರೆಗಾಂವ ವಿಜಯೋತ್ಸವ ಅಂಗವಾಗಿ 5ನೇ ಬಾರಿಯ ಕರ್ನಾಟಕ ಡಾ. ಅಂಬೇಡ್ಕರ್ ರತ್ನ ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಡಿ.28 ರಂದು ಮಧ್ಯಾಹ್ನ 3ಕ್ಕೆ ಗುಲ್ಬರ್ಗದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜರುಗಲಿದೆ ಎಂದು ದಲಿತ ಲಿಬ್ರೇಷನ್ ಆರ್ಮಿ ಸಂಘಟಕ ನ್ಯಾಯವಾದಿ ದಿಲೀಪ ಕ್ಷಿರಸಾಗರ ತಿಳಿಸಿದ್ದಾರೆ.ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಅಲ್ಲದೆ, ಪ್ರಸಿದ್ಧ ಗಾಯಕಿ ಲಕ್ನೋದ ಕುಮಾರಿ ಮಾಲ್ತಿ ಅವರಿಂದ ಗಾಯನ ಹಾಗೂ ಗುಲ್ಬರ್ಗದ ಭೀಮದರ್ಶನ ಸಂಗೀತ ಕಲಾ ತಂಡದಿಂದ ನೃತ್ಯ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಕೋರಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಆಳಂದ: ಜಿಲ್ಲಾ ನ್ಯಾಯ ಶೋಧನಾ ಸೇವಾ ಸಮಿತಿಯ ಆಳಂದ ನಗರ ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಬಾಬುರಾವ ಸುಳ್ಳದ, ಬಸವರಾಜ ಎಂ. ವಡೆಯರಾಜ ತಿಳಿಸಿದ್ದಾರೆ.ಇಬ್ರಾಹಿಂ ಅಲ್ಲಾವುದ್ದೀನ್ ಶೇಖ್ (ಅಧ್ಯಕ್ಷ), ಮುಕ್ತೆದಾರ ಇಸೂಫ್ ಅನ್ಸಾರಿ ರಮ್ಮು (ಉಪಾಧ್ಯಕ್ಷ), ದಿಗಂಬರ ಮಾರುತಿ ಮಾನೆ (ಪ್ರಧಾನ ಕಾರ್ಯದರ್ಶಿ), ವಾಹೀದ್ ಇಬ್ರಾಂ ಅನ್ಸಾರಿ (ಸಂಘಟನಾ ಕಾರ್ಯದರ್ಶಿ), ಫಕ್ರೊದ್ದೀನ್ ಅಯ್ಯುಬ್ ಅನ್ಸಾರಿ (ಖಜಾಂಚಿ), ಸಬ್ಬಿರ್ ಸಿಖಂದರ್ ಶೇಖ್, ಸೀರಾಜ್ ರಾವುಫ್ ಅನ್ಸಾರಿ, ತೈಯಬ್ ಬಾಬರ ಅನ್ಸಾರಿ, ಖಮರು ನಾಜೀರ್ ಅನ್ಸಾರಿ, ಸೈಫನ್ ಅಲ್ಲಾಭಕಾಸ್ ಅಮಾನೆ, ಮೂಲುಕ ರಸೀದ್ ಅನ್ಸಾರಿ, ಲಾಡ್ಲೆಸ್ ನಸೀಮ್ ಅನ್ಸಾರಿ, ಜಮೀಲ್ ಗಫೂರ ಅನ್ಸಾರಿ, ಅಲ್ಲಾವುದ್ದೀನ್ ಖಾಜಾಸಾಬ್ ಅನ್ಸಾರಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾಳೆ ಪುಣ್ಯಸ್ಮರಣೆ
ಗುಲ್ಬರ್ಗ: ನಗರದ ಶಹಾಬಜಾರ ಬಡಾವಣೆಯ ಕಬಾಡಗಲ್ಲಿರುವ ಚನ್ನಮಲ್ಲೇಶ್ವರ ಪರುಷ ಮಠದಲ್ಲಿ ಡಿ.27 ರಂದು ಚನ್ನಮಲ್ಲೇಶ್ವರರ ಪುಣ್ಯಸ್ಮರಣೆ ಜರುಗಲಿದೆ.ಅಂದು ಬೆಳಗ್ಗೆ 6ಕ್ಕೆ ಪೂಜ್ಯರ ಕೃರ್ತು ಗದ್ದುಗೆಗೆ ರುದ್ರಾಭಿಷೇಕ ಮಾಡಲಾಗುವುದು. ಸಂಜೆ 6ಕ್ಕೆ ಧರ್ಮಸಭೆ ನಡೆಯುವುದು. ಹಾರಕೂಡದ ಚನ್ನವೀರ ಶ್ರೀ ಸಾನ್ನಿಧ್ಯ ವಹಿಸುವರು. ಗಣ್ಯರು, ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. 2014ರ ದಿನಚರಿ ಬಿಡುಗಡೆ ನಡೆಯಲಿದೆ.
ಉಚಿತ ತರಬೇತಿ
ಗುಲ್ಬರ್ಗ: ಕರ್ನಾಟಕ ಮುಖ್ಯ ವಿಶ್ವವಿದ್ಯಾನಿಲಯದ ಕರಾಮುವಿ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಕರ್ನಾಟಕ ಲೋಕಸೇವಾ ಆಯೋಗದವರು ಬರುವ ಮೇ ಮಾಹೆಯಿಂದ ನಡೆಸಲಿರುವ ಐಎಎಸ್, ಐಪಿಎಸ್ ಪೂರ್ವಭಾವಿ ಪರೀಕ್ಷೆಗೆ ಹಾಗೂ ಕರ್ನಾಟಕ ಲೋಕಸೇವಾ ಆಯೋಗದವರು ಮುಂದೆ ನಡೆಸಲಿರುವ ಕೆಎಎಸ್ ಮತ್ತು ಇತರ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ತರಬೇತಿಯನ್ನು ನೀಡಲಿದೆ. ಆಸಕ್ತರು ಡಿ.26ರೊಳಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯಲ್ಲಿ ಬೆಳಗ್ಗೆ 10 ರಿಂದ 5 ಗಂಟೆವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಪ್ರಾದೇಶಿಕ ನಿರ್ದೇಶಕ ಡಾ. ಸಂಗಮೇಶ ಹಿರೇಮಠ ತಿಳಿಸಿದ್ದಾರೆ. ಹೆಚ್ಚಿನ ವಿವರಕ್ಕೆ ದೂರವಾಣಿ ಸಂಖ್ಯೆ 0821- 2515944ನ್ನು ಸಂಪರ್ಕಿಸಿ ಪಡೆಯುವಂತೆ ಕೋರಿದ್ದಾರೆ.