ಪ್ರೊಬೇಷನರಿ ಅವಧಿಯೇ ಕಾಯಂ ಇಲ್ಲ
ಕ.ಪ್ರ. ವಾರ್ತೆ ಗುಲ್ಬರ್ಗ ಡಿ. 25
ಸರ್ಕಾರಿ ಕೆಲಸ ಸಿಕ್ಕರೆ ಲೈಫ್ ಸೆಟಲ್ ಎಂದುಕೊಳ್ಳುವುದುಂಟು. ಆದರೆ ಇಲ್ಲಿ ಕೆಲಸಕ್ಕೆ ಸೇರಿ ಮೂರೂವರೆ ವರ್ಷವಾಗಿದೆ. ಇನ್ನೂ ಪ್ರೊಬೇಷನರಿ ಅವಧಿಯನ್ನೇ 'ಕಾಯಂ' ಮಾಡಿಲ್ಲ. ಯಾರದ್ದೋ ತಪ್ಪಿಗೆ ಸಂಭಾವಿತರಿಗೂ ಶಿಕ್ಷೆ. ಸರ್ಕಾರದ ಈ ವಿಳಂಬ ನೀತಿಯನ್ನು ಕೇಳೋರು ಯಾರೂ ಇಲ್ಲದಂತೆ ಆಗಿದೆ.
ಇದು ರಾಜ್ಯದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಗಳಲ್ಲಿ 2010 ಮೇ ತಿಂಗಳಿನಲ್ಲಿ ಕೆಪಿಎಸ್ಸಿ ಮೂಲಕ ನೇಮಕಗೊಂಡಿರುವ 402 ಕಿರಿಯ ತರಬೇತಿ ಅಧಿಕಾರಿಗಳ (ಜೆಟಿಓ) ದೌರ್ಭಾಗ್ಯದ ಕಥೆ.
ನೇಮಕಾತಿ ನಿಯಮಾನುಸಾರ 2 ವರ್ಷಗಳ ಪ್ರೊಬೇಷನರಿ ಅವಧಿಯನ್ನು ಪೂರ್ಣಗೊಳಿಸಿದರೂ ಉದ್ಯೋಗ ಮತ್ತು ತರಬೇತಿ ಇಲಾಖೆ ಕಾಯಂ ಪೂರ್ವ ಅವಧಿಯನ್ನೇ ಘೋಷಿಸಿಲ್ಲ. ಇದರಿಂದ ಇವರಿಗೆ ವಾರ್ಷಿಕ ವೇತನ ಬಡ್ತಿ ಇಲ್ಲ. ಇದು ಸೇವಾ ಭದ್ರತೆಯನ್ನೂ ಪ್ರಶ್ನೆ ಮಾಡುತ್ತಿದೆ.
ಏನಿದು ಪ್ರಕರಣ?: ಕಾರ್ಮಿಕ ಇಲಾಖೆ ಅಡಿಯಲ್ಲಿರುವ ಉದ್ಯೋಗ ಮತ್ತು ತರಬೇತಿ ಆಯುಕ್ತಾಲಯ ಕರ್ನಾಟಕ ಲೋಕ ಸೇವಾ ಆಯೋಗದ ಮೂಲಕ 2010ರಲ್ಲಿ 402 ಜೆಟಿಓ ಹುದ್ದೆ ಭರ್ತಿ ಮಾಡಿಕೊಂಡು ರಾಜ್ಯದ ವಿವಿಧ ಐಟಿಐಗಳಿಗೆ ನಿಯೋಜಿಸಿತ್ತು. ನಿಯಮಾನುಸಾರ ಯಾವುದೇ ಕಿರಿಕಿರಿ ಇಲ್ಲದಂತೆ, ಆರೋಪಗಳಿಂದ ಮುಕ್ತರಾಗಿ 2 ವರ್ಷಗಳ ಸೇವೆ ಪೂರೈಸಿದವರಿಗೆ ಕಾಯಂ ಪೂರ್ವ ಸೇವೆ ಅವಧಿ ಘೋಷಣೆ ಮಾಡಬೇಕು. ಆದರೆ ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ.
ಹಲವರು ಸಲ್ಲಿಸಿರುವ ಬೋಧನಾನುಭವ ಪ್ರಮಾಣ ಪತ್ರಗಳು ಬೋಗಸ್ ಆಗಿವೆ ಎಂಬ ಆರೋಪ ಕೇಳಿಬಂತು. ಇದು ಸದನದಲ್ಲೂ ಚರ್ಚೆಯಾಗಿ ಬಿಜೆಪಿ ಸರ್ಕಾರವಿದ್ದಾಗಲೇ 2011ರಲ್ಲಿ ಇದನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿತ್ತು. ಈಗ 2013ರ ಕೊನೆ ತಿಂಗಳು ಬಂದರೂ ಕಾರ್ಮಿಕ ಇಲಾಖೆಗೆ ಸಿಐಡಿ ತನಿಖಾ ವರದಿಯನ್ನೇ ಸಲ್ಲಿಸಿಲ್ಲ. ತನಿಖೆ ಏನಾಯ್ತು, ಯಾವ ಹಂತದಲ್ಲಿದೆ ಈ ಅಕ್ರಮದಲ್ಲಿರುವವರು ಯಾರು? ಇದಾವುದಕ್ಕೂ ಇನ್ನೂ ಉತ್ತರ ಸಿಕ್ಕಿಲ್ಲ.
ಎರಡು ಬಾರಿ ಪರಿಶೀಲನೆ: ಆಯ್ಕೆಯಾದ ಅಭ್ಯರ್ಥಿಗಳ ಪ್ರಮಾಣ ಪತ್ರಗಳನ್ನು ಕೆಪಿಎಸ್ಸಿ ಪರಿಶೀಲಿಸಿದೆ. ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲೂ ಬೋಧನಾನುಭವ ಪತ್ರ ಸೇರಿ ಎಲ್ಲ ಪ್ರಮಾಣ ಪತ್ರಗಳ ಪರಿಶೀಲನೆ 2 ಬಾರಿ ನಡೆದಿತ್ತು. ಪ್ರಕರಣ ಸಿಐಡಿಗೆ ಒಪ್ಪಿಸಿದ ನಂತರ ಅಸಲಿ-ನಕಲಿ ಪತ್ತೆಗೆ ಈ ಅಭ್ಯರ್ಥಿಗಳು ಕಾರ್ಯನಿರ್ವಹಿಸುತ್ತಿರುವ ಐಟಿಐ ಕಾಲೇಜುಗಳ ಪ್ರಾಚಾರ್ಯರ ನೇತೃತ್ವದಲ್ಲಿ ತನಿಖೆ ನಡೆಸಲಾಗಿದೆ.
ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ವರದಿ ಇನ್ನೊಂದು ತಿಂಗಳಲ್ಲಿ ನಿರೀಕ್ಷಿಸಲಾಗಿದೆ. ನಂತರ ಸೂಕ್ತ ನಿರ್ಣಯವನ್ನು ಇಲಾಖೆ ಪ್ರಕಟಿಸುತ್ತದೆ.
- ಪಿ.ಟಿ. ಪರಮೇಶ್ವರ ನಾಯಕ, ಕಾರ್ಮಿಕ ಸಚಿವ
ಈ ಸಂಗತಿ ಇಲಾಖೆ ಗಮನದಲ್ಲಿದೆ. ಸಿಐಡಿ ವಿಚಾರಣೆ ನಡೆದಿದೆ. ವರದಿ ಬಂದು ಪರಿಶೀಲನೆಯಾದ ಬಳಿಕ ಇವರ ಪ್ರೊಬೇಷನರಿ ಅವಧಿ ಘೋಷಣೆ, ವಾರ್ಷಿಕ ವೇತನ ಬಡ್ತಿ ಎಲ್ಲವೂ ಇತ್ಯರ್ಥವಾಗುತ್ತದೆ. ಜನವರಿಯೊಳಗೆ ಸಮಸ್ಯೆಗೆ ಇತ್ಯರ್ಥವಾಗಹುದು.
- ಎಂ.ಬಿ. ದ್ಯಾಬೇರಿ,
ಪ್ರ. ಕಾರ್ಯದರ್ಶಿ, ಕಾರ್ಮಿಕ ಇಲಾಖೆ
-ಶೇಷಮೂರ್ತಿ ಅವಧಾನಿ