ವೈಚಾರಿಕತೆ, ಆದರ್ಶ ಆಚರಣೆಗೆ ಬರಲಿ
ಗುಲ್ಬರ್ಗ: ಕೇವಲ ವೈಚಾರಿಕತೆ, ಆದರ್ಶಗಳನ್ನು ಒಪ್ಪಿಕೊಂಡರೆ ಸಾಲದು. ಅವು ಭಾವನೆಗಳ ಮಟ್ಟಕ್ಕೆ ಇಳಿದು ಆಚರಣೆಗೆ ಬರಬೇಕೆಂದು ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ರಾಜ್ಯ ಸಮಿತಿಯ ಸದಸ್ಯ ಮೈಸೂರಿನ ಬಿ.ರವಿ ಅಭಿಪ್ರಾಯಪಟ್ಟರು.
ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಗುಲ್ಬರ್ಗ ಜಿಲ್ಲಾ ಸಮಿತಿಯಿಂದ ಕಥೆಗಾರ್ತಿಯಾದ ಕೊಡಗಿನ ಗೌರಮ್ಮನವರ ಜನ್ಮಶತಮಾನೋತ್ಸವ ನಿಮಿತ್ತ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕೊಡಗಿನ ಗೌರಮ್ಮ ಒಂದು ನೆನಪು ಎಂಬ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಪಿಡುಗು ನಿರ್ಮೂಲನೆಗೆ ಯತ್ನಿಸಿದ್ದರು: ವ್ಯವಸ್ಥೆಯ ಅಸಮಾನತೆ, ವಿಧವಾ ವಿವಾಹ, ಮಹಿಳೆಯ ಸ್ಥಾನಮಾನ, ವೇಶ್ಯೆ ವೃತ್ತಿಯ ಬಗ್ಗೆ, ಪ್ರೇಮದ ಹಕ್ಕಿನ ಬಗ್ಗೆ ಕೊಡಗಿನ ಗೌರಮ್ಮ ಬರೆದಿರುವ ದುಃಖಸೇತು, ವಾಣಿಯ ಸಮಸ್ಯೆ, ಪುನರ್ ವಿವಾಹ, ಪುಟ್ಟಚಿತ್ರ, ಮನುವಿನ ರಾಣಿ, ಹೀಗೆ ಅವರ ಎಲ್ಲ ಕಥೆಗಳಲ್ಲಿ ಜಾತಿ, ಧರ್ಮದ ಆಚರಣೆಗಳಿಗಿಂತ ತುಂಬಾ ಅಗತ್ಯವಾಗಿರುವ ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳುವ ಕಳಕಳಿಯು ಎದ್ದುಕಾಣುತ್ತದೆ. ಈ ಸಾಮಾಜಿಕ ಪಿಡುಗುಗಳನ್ನು ಸಮಾಜವು ಅರಿತು ಅವುಗಳ ನಿರ್ಮೂಲನೆಗಾಗಿ ಶ್ರಮಿಸಬೇಕೆಂಬ ಆಶಯ ಅವರದ್ದಾಗಿತ್ತು ಎಂದರು.
ಪತ್ರಕರ್ತ ದೇವು ಪತ್ತಾರ, ಸೇಡಂನ ನೃಪತುಂಗ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಚಂದ್ರಕಲಾ ಬಿದರಿ ಮಾತನಾಡಿದರು.
ಆವಿಷ್ಕಾರ ಸಾಂಸ್ಕೃತಿಕ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಜಿ. ದೇಸಾಯಿ, ಡಾ. ಶೈಲಜಾ ಕೊಪ್ಪರ, ಸಿದ್ದರಾಮ ವಾರದ, ಪ್ರೊ. ಅಂಬರಾವ ಉಪಳಾಂವಕರ್, ಜ್ಯೋತಿ ಕುಲಕರ್ಣಿ, ಕಾವ್ಯಶ್ರೀ ಮಹಾಗಾಂವಕರ್, ಲಕ್ಷೀ ಜೋಶಿ, ಆವಿಷ್ಕಾರದ ಸದಸ್ಯರಾದ ಅಶ್ವಿನಿ, ರಾಜಶೇಖರ ಇನ್ನಿತರ ಬರಹಗಾರರು, ಗಣ್ಯರು ಹಾಗೂ ವಿದ್ಯಾರ್ಥಿ- ಯುವ ಜನರು ಉಪಸ್ಥಿತರಿದ್ದರು.