ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು ಗೃಹ ಸಚಿವರ ಪ್ರವಾಸ

Vishwanath S
Updated On : 27 Dec 2013, 12:38 pm

ಗುಲ್ಬರ್ಗ: ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಡಿ.27ರಂದು ಬೆ.5.40ಕ್ಕೆ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಮುಖಾಂತರ ಗುಲ್ಬರ್ಗಕ್ಕೆ ಆಗಮಿಸುವರು. ಅಂದು ಬೆ. 9.30 ಗಂಟೆಗೆ ರಸ್ತೆ ಮೂಲಕ ಬೀದರ ಜಿಲ್ಲೆಯ ಹುಮನಾಬಾದಿಗೆ ಪ್ರಯಾಣಿಸುವರು.
ಇಂದು ಮಹಿಳಾ,  ಮಕ್ಕಳ ಕಲ್ಯಾಣ ಸಮಿತಿ ಸಭೆ
ಗುಲ್ಬರ್ಗ: ಕರ್ನಾಟಕ ವಿಧಾನ ಮಂಡಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಶಕುಂತಲಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ 2013ರ ಡಿ.27ರಂದು ಬೆ.10ಕ್ಕೆ ಗುಲ್ಬರ್ಗ ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಕರ್ನಾಟಕ ವಿಧಾನ ಮಂಡಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಭೆ ಜರುಗಲಿದೆ.
ಈ ಸಭೆಯಲ್ಲಿ ಗುಲ್ಬರ್ಗ, ಬೀದರ್, ರಾಯಚೂರು, ಬಳ್ಳಾರಿ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ, ಶಿಕ್ಷಣ, ಕಂದಾಯ, ಗೃಹ ಮತ್ತು ಅಬಕಾರಿ, ಸಮಾಜಕಲ್ಯಾಣ ಇಲಾಖೆಗಳು ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮ, ಯೋಜನೆಗಳ ಬಗ್ಗೆ ಸಮಿತಿ ಪರಿಶೀಲಿಸಲಿದೆ.
ಬಾಲಕಾರ್ಮಿಕತೆ: 90 ಸಾವಿರ ದಂಡ
ಗುಲ್ಬರ್ಗ: ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಕಾಯ್ದೆ 1986ರಡಿ ಕಾರ್ಮಿಕ ಇಲಾಖೆಯಿಂದ 2010- 12ರಿಂದ ಇದುವರೆಗೆ 270 ತನಿಖೆಗಳನ್ನು ಅಪಾಯಕಾರಿ ಮತ್ತು ಅಪಾಯಕಾರಿಯಲ್ಲದ ಉದ್ದಿಮೆಯಲ್ಲಿ ನಡೆಸಿದ್ದು ಅದರಲ್ಲಿ 20ಪ್ರಕರಣಗಳಲ್ಲಿನ ಮಾಲೀಕರ ವಿರುದ್ಧ ನ್ಯಾಯಾಯಲಯದಲ್ಲಿ ಮೊಕ್ಕದಮೆ ಹೂಡಲಾಗಿದೆ.
ಅವುಗಳ ಪೈಕಿ 9 ಪ್ರಕರಣಗಳು ಇತ್ಯರ್ಥ್ಯವಾಗಿದ್ದು, ತಪ್ಪಿತಸ್ಥ ಮಾಲೀಕರಿಗೆ ಒಟ್ಟು 90 ಸಾವಿರ ದಂಡ ವಿಧಿಸಲಾಗಿದೆ. ಬಾಲ ಕಾರ್ಮಿಕರನ್ನು ವಿಶೇಷ ಬಾಲ ಕಾರ್ಮಿಕ ಶಾಲೆಗಳಲ್ಲಿ ಮತ್ತು ಸಮೀಪದ ಸರ್ಕಾರಿ ಶಾಲೆಯಲ್ಲಿ ಸೇರಿಸಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.
ಸರ್ಕಾರಿ ನೌಕರರ ಸಂಘದ ರ್ಯಾಲಿ ಇಂದು
ಗುಲ್ಬರ್ಗ: 5 ಲಕ್ಷ ಜನಸಂಖ್ಯೆ ಮೀರಿರುವ ಗುಲ್ಬರ್ಗ ನಗರಕ್ಕೆ ಬಿ ನಗರ ಪಟ್ಟ ನೀಡಬೇಕು, ಈಗಾಗಲೇ ಜಾರಿಯಾಗಿರುವ ಕಲಂ 371(ಜೆ) ನಿಯಮಗಳನ್ನು ಸರ್ಕಾರಿ ನೌಕರರ ಬಡ್ತಿ ವಿಚಾರದಲ್ಲಿಯೂ ಅನ್ವಯಿಸುವಂತೆ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘಟನೆ ಕಾರ್ಯಕರ್ತರು ಡಿ.27ರಂದು  ನಗರದಲ್ಲಿ ಜಗತ್ ವೃತ್ತದಿಂದ ಸರ್ದಾರ್ ಪಟೇಲ್ ವೃತ್ತದ ಮೂಲಕ ಡಿಸಿ ಕಚೇರಿವರೆಗೂ ರ್ಯಾಲಿ ನಡೆಸಲು ನಿರ್ಧರಿಸಿದ್ದಾರೆ. ಸರ್ಕಾರ ಬಿ ನಗರ ಪಟ್ಟ ನೀಡಲು ಹಿಂದೆ ಮುಂದೆ ನೋಡುತ್ತಿದೆ. ಜೊತೆಗೇ ಉದ್ಯೋಗದಲ್ಲಿ, ಇತರೆ ಎಲ್ಲ ರಂಗಗಳಲ್ಲಿ ಕಲಂ 371(ಜೆ) ನಿಯಮಗಳು ರೂಪಗೊಂಡಿರುವಾಗ ಸರ್ಕಾರಿ ನೌಕರರ ಬಡ್ತಿಯಲ್ಲಿಯೂ ಕಲಂ 371 ನಿಯಮಗಳನ್ನು ರೂಪಿಸಿ ಪಾಲು ನೀಡುವಂತೆ ಸರ್ಕಾರದ ಗಮನ ಸೆಳೆಯುವುದೇ ರ್ಯಾಲಿಯ ಉದ್ದೇಶ ಎಂದು ಸಂಘಟನೆ ಹೇಳಿದೆ.
ಇಂದು ಜಾತ್ರೆ
ಜೇವರ್ಗಿ: ತಾಲೂಕಿನ ವಸ್ತಾರಿ ಗ್ರಾಮದ ಗ್ರಾಮ ದೇವತೆ ಜಾತ್ರೆ ಡಿ.27ರಂದು ನಡೆಯಲಿದೆ.  ಉತ್ಸವದ ನಿಮಿತ್ತ ದೇವಿಗೆ ವಿಶೇಷ ಪೂಜೆ, ಅಲಂಕಾರ ನೆರವೇರಲಿದೆ. ಬೆ.11 ಗಂಟೆಗೆ ಮುತ್ತೈದೆಯರಿಂದ ಕುಂಬ ಕಳಸ, ಶಿವಮೊಗ್ಗ ಕಲಾ ತಂಡದಿಂದ ಜಾನಪದ ಕಲಾ ನೃತ್ಯ, ಅಥಣಿ ಕಲಾ ತಂಡದಿಂದ ಡೊಳ್ಳು ಕುಣಿತ, ನವಿಲು ಕುಣಿತ, ಗೊಂಬೆ ಕುಣಿತ, ಕುದುರೆ ಕುಣಿತ ನಡೆಯಲಿದೆ.  ಸಂಜೆ 7ಕ್ಕೆ ಹಾಸ್ಯ ಮಂಜರಿ ಕಾರ್ಯಕ್ರಮ ನಡೆಯಲಿದ್ದು, ಇಂದುಮತಿ ಸಾಲಿಮಠ, ರವಿ ಭಜಂತ್ರಿ ಹಾಸ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಶಾಸಕ ಡಾ. ಅಜಯಸಿಂಗ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಗ್ರಾಮದ ಬೈಲಪ್ಪ ಬಿರಾದಾರ ತಿಳಿಸಿದ್ದಾರೆ.
ಮಹಿಳೆ ಮೇಲೆ ಹಲ್ಲೆ
ಗುಲ್ಬರ್ಗ: ಅಫಜಲ್ಪುರ ತಾಲೂಕಿನ ಮಲ್ಲಾಬಾದ್‌ನಲ್ಲಿ ನಾಲ್ವರು ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ನಾಗಮ್ಮ ಎಂಬ ಮಹಿಳೆ ಹಲ್ಲೆಗೊಳ್ಳಗಾದವರು. ನಾಗಮ್ಮ ತನ್ನ ಮಕ್ಕಳೊಂದಿಗೆ ಗ್ರಾಮದ ಶರಣಬಸವೇಶ್ವರ ದೇವಾಲಯ ಮುಂದೆ ಹೋಗುತ್ತಿದ್ದಾಗ ಅವರ ಭಾವ ಮಾಳಪ್ಪ, ಅವರ ಹೆಂಡತಿ ಶಾರವ್ವ ಅವರ ಮಕ್ಕಳಾದ ಸಿದ್ದಪ್ಪ ಮತ್ತು ರೇಣುಕಾ ಅವರು ತಡೆದು ನಾಗಮ್ಮ ಎಂಬವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಅಫಜಲ್ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಂಡೇರಾವ್ ನಿಧನ
ಗುಲ್ಬರ್ಗ: ತಾಲೂಕಿನ ಲೆಂಗಟಿ ಗ್ರಾಮ ನಿವಾಸಿ, ಎಂಜಿನಿಯರ್ ಗುಂಡೇರಾವ್ ಜಾಗಿರ್ದಾರ್(81) ಇತ್ತೀಚೆಗೆ ನಿಧನರಾದರು. ನೂತನ ವಿದ್ಯಾಲಯದಲ್ಲಿ ತಮ್ಮ ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸ ಪೂರೈಸಿದ್ದ ಗುಂಡೇರಾವ್ ಹೈದ್ರಾಬಾದ್‌ನಲ್ಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ಯುಎಸ್‌ಎನಲ್ಲಿ ಎಂಎಸ್ ಪದವಿ ಪಡೆದಿದ್ದರು. ದೆಹಲಿ ಮೂಲದ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಇವರು ಕಾರ್ಯನಿರ್ವಹಿಸಿದ್ದರು. ಇವರ ನಿಧನಕ್ಕೆ ಬಂಧುಗಳು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಬಸ್ ಸಂಚಾರಿ ವೇಳೆ ಬದಲಾಯಿಸಲು ವಿದ್ಯಾರ್ಥಿಗಳ ಆಗ್ರಹ
ಶಹಾಪುರ: ಪಟ್ಟಣದ ಬಸ್‌ನಿಲ್ದಾಣ ದಿಂದ ಟಿ. ವಡಿಗೇರಾ ಮುಖಾಂತರ ಬೀರನಕಲ್ ತಾಂಡಾಕ್ಕೆ ಹೋಗಿ ಬರುವ ಈಗಿರುವ ಬಸ್ಸಿನ ವೇಳೆ ಬದಲಿಸಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಸಲ್ಲಿ  ಮಾತನಾಡಿದ ಟಿ. ವಡಿಗೇರಾ ಪ್ರಮುಖರಾದ ವೆಂಕೋಬ ಬಾಲಪ್ಪ ಬೀರನಕಲ್ ತಾಂಡಾ, ಹೈಯಾಳ ಕೆ, ಟಿ. ವಡಿಗೇರಾದ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಶಹಾಪುರಕ್ಕೆ ಬರುತ್ತಿರುವುದರಿಂದ ನಿಗದಿತ ವೇಳೆಯಲ್ಲಿ ಬಸ್ ಬರದೇ ಸಕಾಲದಲ್ಲಿ ಶಾಲೆ ತಲುಪದೆ ಅಭ್ಯಾಸಕ್ಕೆ ಅಡಚಣೆಯಾಗುತ್ತಿದೆ. ದಿನ ನಿತ್ಯ ಬೀರನಕಲ್ ತಾಂಡಾದಲ್ಲಿ ಬಸ್ ವಾಸ್ತವ್ಯ ಮಾಡಬೇಕು ಎಂದು ಆಗ್ರಹಿಸಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆಯ ವ್ಯವಸ್ಥಾಪಕರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮಲ್ಲನಗೌಡ, ಭೀಮನಗೌಡ, ಶೇಖರ ಹೈಯಾಳ, ನಾಗನಗೌಡ, ಮಲ್ಲು ವೆಂಕಟೇಶ ಸೇರಿದಂತೆ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಾಣಿಬಲಿ ತಡೆಗೆ ದಸಂಸ ಆಗ್ರಹ
ಹುಣಸಗಿ: ಸಮೀಪದ ಶ್ರೀನಿವಾಸಪುರ ಹಳ್ಳಿ ಹಾಗೂ ವಜ್ಜಲ, ಯಾಳಗಿ ಗ್ರಾಮಗಳಲ್ಲಿ ಗ್ರಾಮದೇವತೆ ಜಾತ್ರೆಯ ಹೆಸರಿನಲ್ಲಿ ಪ್ರಾಣಿಬಲಿ ನಡೆಯುವುದನ್ನು ಕಟ್ಟುನಿಟ್ಟಾಗಿ ತಡೆಗಟ್ಟುವಂತೆ ಅಗತ್ಯ ಕ್ರಮ ಜರುಗಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಭೀಮರಾಯ ಸಿಂದಗೇರಿ, ರಾಜ್ಯ ಸಮಿತಿಯ ಸದಸ್ಯ ನಾಗಣ್ಣ ಕಲ್ಲದೇವನಹಳ್ಳಿ ಇತರರು ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ದೊರೆತು 67 ವರ್ಷಗಳಾದರೂ ದೇವರ ಹೆಸರಿನಲ್ಲಿ ಮೂಕ ಪ್ರಾಣಿಗಳ ಬಲಿ ನೀಡುವುದು ನಡೆಯುತ್ತಿರುವುದನ್ನು ಖಂಡಿಸಿದ್ದಾರೆ.
 ಈ ಪ್ರಾಣಿಬಲಿ ಆಚರಣೆಯಿಂದ ಗ್ರಾಮಗಳಲ್ಲಿ ಅಶಾಂತಿ ವಾತಾವರಣ ಉಂಟಾಗಿ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಮದೇವತೆಯ ಜಾತ್ರೆಗಳ ದಿನಾಂಕ ಮತ್ತು ಸಮಯ ಸೇರಿದಂತೆ ಎಲ್ಲ ವಿವರಗಳನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಒದಗಿಸಿ ಪ್ರಾಣಿಬಲಿ ತಡೆಯುವಂತೆ ಆಗ್ರಹಿಸಿದ್ದಾರೆ.
ಜ.1 ಜಕ್ಕಣ್ಣ ಸ್ಮರಣೋತ್ಸವ
ಶಹಾಪುರ: ವಿಶ್ವಕರ್ಮ ಅಮರ ಶಿಲ್ಪಿ ಜಕ್ಕಣಾಚಾರಿ ಸ್ಮರಣೋತ್ಸವ ಕಾರ್ಯಕ್ರಮ 2014ರ ಜ. 1ರಂದು ಅದ್ಧೂರಿಯಾಗಿ ಬೆಂಗಳೂರಿನ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಜರುಗುವುದು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾದ ರಾಜ್ಯಧ್ಯಕ್ಷ ಕೆ.ಪಿ. ನಂಜುಂಡಿ ನೇತೃತ್ವದಲ್ಲಿ ರಾಜ್ಯದ ಅನೇಕ ಮಠಾಧೀಶರ ಸನ್ನಿದಾನದಲ್ಲಿ ರಾಜ್ಯ ಸರ್ಕಾರದ ಅನೇಕ ಮಂತ್ರಿಗಳ ಉಪಸ್ಥಿತಿ ಇರುವುದು. ನಾಡಿನ ವಿಶ್ವಕರ್ಮರ ಸಂಘಟನೆಯೊಂದಿಗೆ ನಡೆಯುವ 67 ಮಠಾಧೀಶರ ರಾಜ್ಯಾಧ್ಯಕ್ಷ ಶ್ರೀಕಾಳಹಸ್ತೇಂದ್ರ ಮಹಾ ಸ್ವಾಮಿ ಸಮಾಜ ಸಕ್ರೀಯವಾಗಿ ಪಾಲ್ಗೊಳ್ಳುವರು.
ಶಹಾಪುರ ಘಟಕ ಅಧ್ಯಕ್ಷ ದೇವಿಂದ್ರಪ್ಪ ಕನ್ನೆಕೊಳೂರ, ತಾಲೂಕು ಮಹಾಸಭಾ ಯುವ ಘಟಕದ ಅಧ್ಯಕ್ಷ ರಮೇಶ ಬಡಿಗೇರ ಇಬ್ರಾಹಿಂಪೂರ ಕರೆ ನೀಡಿದರು.
ಸಂಭ್ರಮದ ಕ್ರಿಸ್ಮಸ್
ಶಹಾಪುರ: ಶಾಂತಿ ಕರುಣೆಯ ಪ್ರತಿರೂಪವಾಗಿರುವ ದೇವ ಪುತ್ರ ಏಸುವಿನ ಜನ್ಮದಿನವನ್ನು ಬುಧವಾರ ಸಡಗರ ಸಂಭ್ರಮಗಳೊಂದಿಗೆ ನಗರದಲ್ಲಿನ ಮೇಥೋಡಿಸ್ಟ್ ಚರ್ಚ್ ಹಾಗೂ ಸೇಂಟ್ ಪೀಟರ್ ಚರ್ಚ್‌ಗಳಲ್ಲಿ ಆಚರಿಸಲಾಯಿತು. ಶಿಲುಬೆ ಏರಿದ ಏಸುವಿನ ಮೂರ್ತಿಗೆ ಅಲಂಕಾರ ಮಾಡಿ, ಪ್ರಾರ್ಥನೆ ಸಲ್ಲಿಸಲಾಯಿತು. ಎಲ್ಲಡೆ ಶಾಂತಿ ಕರುಣೆ ಸರಳತೆ ಸಾರುವ ಸಾರಿರಿ..ಸಾರಿರಿ..ಜಗವೆಲ್ಲ ಪ್ರೀತಿ ಪ್ರೇಮವನ್ನು ಸಾರಿರಿ ಎಂದು ಪ್ರಾರ್ಥನೆ ಹಾಡು ಹಾಡಿದರು.
ಬೈಬಲ್ ಸಂದೇಶ: ಪಟ್ಟಣದ ಮೇಥೋಡಿಸ್ಟ್ ಚರ್ಚ್‌ನಲ್ಲಿ ಡಿ. 2ರಿಂದಲೇ ನಾನಾ ಕಾರ್ಯಕ್ರಮ ಆರಂಭವಾಗಿದ್ದವು. ಮಧ್ಯರಾತ್ರಿ ಜನಿಸುವ ಏಸುವಿನ ಎಲ್ಲ ಸನ್ನಿವೇಶಗಳನ್ನು ಬಿಂಬಿಸುವ ಪ್ರಕೃತಿಗಳು ಕ್ರಿಸ್ತನ ಭಕ್ತರನ್ನು ಪುಳಕಿತಗೊಳಿಸಿದವು. ಬೆಳಿಗ್ಗೆ ನಡೆದ ಪ್ರಾರ್ಥನೆಯಲ್ಲಿ ರೆವರೆಂಡ್ ಜ್ಞಾನಮಿತ್ರ ಸಿಮೆನ್ ಸಭಾಪಾಲಕ ಅವರು ಬೈಬಲ್ ಸಂದೇಶವನ್ನು ಸಾರಿದರು. ನೂರಾರು ಕ್ರೈಸ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement