ತೊಗರಿ ಮಾರುಕಟ್ಟೆ ಪ್ರವೇಶಿಸಿದ ಸರ್ಕಾರ
ಕ.ಪ್ರ.ವಾರ್ತೆ ಟಿ ಗುಲ್ಬರ್ಗ ಟಿ ಡಿ.26
ಕೊನೆಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ತೀವ್ರ ಕುಸಿದಿದ್ದ ತೊಗರಿಗೆ ಪ್ರೋತ್ಸಾಹದಾಯಕ ಬೆಲೆಗೆ ಬೆಂಬಲ ಬೆಲೆ ನಿಗದಿಪಡಿಸಿದ್ದಲ್ಲದೆ ತಾನೇ ಮಾರುಕಟ್ಟೆ ಪ್ರವೇಶಕ್ಕೂ ಮುಂದಾಗಿದೆ.
ಸರ್ಕಾರದ ಆದೇಶದಂತೆ ಇಲ್ಲಿನ ತೊಗರಿ ಅಭಿವೃದ್ಧಿ ಮಂಡಳಿಯು ಎನ್ಸಿಡಿಇಎಕ್ಸ್ ಸಂಸ್ಥೆಯ ಸಹಯೋಗದೊಂದಿಗೆ ಎಫ್ಎಕ್ಯೂ ಗುಣಮಟ್ಟದ ತೊಗರಿಯನ್ನು ರೈತರಿಗೆ ವಾಣಿಜ್ಯ ರೀತಿಯಲ್ಲಿ ಖರೀದಿಸಲು ಪ್ರತಿ ಕ್ವಿಂಟಲ್ಗೆ 5 ಸಾವಿರ (4,300: 700 ಸಹಾಯಧನ) ನಿಗದಿಪಡಿಸಿ ಕೆಲವು ಷರತ್ತುಗಳನ್ನು ವಿಧಿಸಿ ಆದೇಶ ಹೊರಡಿಸಿದೆ.
ಕೆಲ ಷರತ್ತುಗಳೂ ಅನ್ವಯ: ರೈತರಿಂದ ಹಸನಾದ ಹಾಗೂ ಉತ್ತಮ, ಗಟ್ಟಿ ಕಾಳಿರುವ (ಫೇರ್ ಕ್ವಾಲಿಟಿ- ಎಫ್ಕ್ಯೂ) ಗುಣಮಟ್ಟದ ತೊಗರಿಯನ್ನು ಮಾತ್ರ ಖರೀದಿಸಿತಕ್ಕದ್ದು. ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಮೀರದಂತೆ ತೊಗರಿಯನ್ನು ಖರೀದಿಸತಕ್ಕದ್ದು ಮತ್ತು ತೊಗರಿ ಮೌಲ್ಯವನ್ನು ರೈತರಿಗೆ ಆರ್ಟಿಜಿಎಸ್ ಮೂಲಕವೇ ಪಾವತಿಸಲು ಕ್ರಮ ಕೈಗೊಳ್ಳತಕ್ಕದ್ದು ಎಂಬ ಮೊದಲಾದ ಕೆಲವು ಷರತ್ತುಗಳನ್ನು ನಿಗದಿಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ತೊಗರಿ ಅಭಿವೃದ್ಧಿ ಮಂಡಳಿಯು ಗುಲ್ಬರ್ಗ ಜಿಲ್ಲೆಯಲ್ಲಿ ಗುಲ್ಬರ್ಗ, ಅಫಜಲ್ಪುರ, ಆಳಂದ, ಜೇವರ್ಗಿ, ಸೇಡಂನಲ್ಲಿ ಡಿ.26ರಿಂದ, ಹಾಗೂ ಚಿಂಚೋಳಿ, ಚಿತ್ತಾಪುರ ಹಾಗೂ ಬೀದರ್ ಜಿಲ್ಲೆಯ ಬೀದರ್, ಬಸವಕಲ್ಯಾಣ, ಹುಮನಾಬಾದ್, ಭಾಲ್ಕಿ ಮತ್ತು ಔರಾದ್ನಲ್ಲಿ ಡಿ.27ರಿಂದ ಮತ್ತು ಡಿ.28ರಿಂದ ಯಾದಗಿರಿ ಜಿಲ್ಲೆಯಲ್ಲಿ ಯಾದಗಿರಿ, ಶಹಾಪುರ, ಸುರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಪ್ರಾಂಗಣಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಿದೆ.
ಇವೆಲ್ಲ ವಿವರ ಬೇಕು: ಸದರಿ ಖರೀದಿ ಕೇಂದ್ರಗಳ ಮೂಲಕ ಮಾರಾಟ ಮಾಡಲು ಇಚ್ಛಿಸುವ ರೈತರು 2013- 14ನೇ ಸಾಲಿನ ಪಹಣಿ, ರೈತರ ಗುರುತಿನ ಚೀಟಿ, ಬ್ಯಾಂಕ್ಪಾಸ್ ಪುಸ್ತಕ ಹಾಗೂ ಇತರೆ ದಾಖಲಾತಿಗಳ ವಿವರಗಳನ್ನು ಖರೀದಿ ಕೇಂದ್ರಗಳಲ್ಲಿ ಹಾಜರುಪಡಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಂಡು ನಿಗದಿತ ದಿನಾಂಕದಂದು ಎಫ್ಎಕ್ಯೂ ಗುಣಮಟ್ಟದ ತೊಗರಿಯನ್ನು ಖರೀದಿ ಕೇಂದ್ರಕ್ಕೆ ತೆಗೆದುಕೊಂಡು ಬರಲು ಕೋರಲಾಗಿದೆ. ವಿವರಗಳಿಗೆ ಖರೀದಿ ಕೇಂದ್ರಗಳನ್ನು ಸಂಪರ್ಕಿಸುವಂತೆ ವ್ಯವಸ್ಥಾಪಕ ನಿರ್ರ್ದೇಶಕರು ಕೋರಿದ್ದಾರೆ.
ಬೆಂಬಲ ಬೆಲೆಗೆ ರೈತ ಸಂಘಟನೆ ಸ್ವಾಗತ
ಗುಲ್ಬರ್ಗ: ರೈತರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ 4300 ಬೆಂಬಲ ಬೆಲೆಯ ಜತೆಯಲ್ಲಿ ರಾಜ್ಯ ಸರ್ಕಾರವು 700 ಸಹಾಯಧನ ಸೇರಿಸಿ 5 ಸಾವಿರ ಬೆಂಬಲ ಬೆಲೆಗೆ ರೈತರಿಂದ ತೊಗರಿ ಖರೀದಿಸಲು ನಿರ್ಧರಿಸುವ ಕ್ರಮವನ್ನು ರೈತ ಕೃಷಿ ಕಾರ್ಮಿಕರ ಸಂಘಟನೆ ಸ್ವಾಗತಿಸಿದೆ.
ಆದರೆ, ಗುಲ್ಬರ್ಗ ವಿಭಾಗದ ಎಲ್ಲ ಜಿಲ್ಲೆಗಳು ಮತ್ತು ತಾಲೂಕುಗಳು ಸೇರಿ ರಾಜ್ಯದ ವಿವಿಧೆಡೆ 16 ಕಡೆಗಳಲ್ಲಿ ಮಾತ್ರ ತೊಗರಿ ಖರೀದಿ ಕೇಂದ್ರಗಳನ್ನು ತೆರೆಯುವುದು ಕಡಿಮೆ ಆಗುತ್ತದೆ. ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಸಂಚಾಲಕ ಸಂದೀಪ ಎಸ್. ಒತ್ತಾಯಿಸಿದ್ದಾರೆ.
ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡುವಂತೆ ಪ್ರತಿಭಟನೆ
ಗುಲ್ಬರ್ಗ: ತೊಗರಿ ಮಂಡಳಿಯನ್ನು ಬೆಳೆಕಾಳು ಮಂಡಳಿಯಾಗಿ ಪರಿವರ್ತಿಸಬೇಕು, ತೊಗರಿ ಮಂಡಳಿಗೆ 100 ಕೋಟಿ ಅನುದಾನ ನೀಡಿ ಬಲಪಡಿಸಬೇಕು, 1966ರ ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಕೈ ಬಿಡುವಂತೆ ಒತ್ತಾಯಿಸಿ ವಿವಿಧ ರೈತಪರ ಸಂಘಟನೆಗಳು ಡಿ.30 ರಂದು ನಗರದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.
ಕರ್ನಾಟಕ ಪ್ರಾಂತ ರೈತ ಸಂಘ, ತೊಗರಿ ಬೆಳೆಗಾರರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಅಖಿಲ ಭಾರತ ಕಿಸಾನ ಸಂಘ, ಕೃಷಿಕ ಸಮಾಜ, ರಾಷ್ಟ್ರೀಯ ಕಿಸಾನ ಸಂಘ, ಹೈ. ಕ. ಚೇಂಬರ್ ಆಫ್ ಕಾಮರ್ಸ, ಭೀಮಾ ನದಿ ನೀರು ರಕ್ಷಣಾ ರೈತ ವರ್ಗ, ಕರ್ನಾಟಕ ರಾಜ್ಯ ಬಿಳಿ ಜೋಳ ಅಭಿವೃದ್ಧಿ ಸಂಘಗಳು ನಗರದಲ್ಲಿ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿವೆ.
ಸರ್ಕಾರದ ಸಂಪುಟದ ಉಪ ಸಮಿತಿ ಸಭೆಯಲ್ಲಿ ತೊಗರಿ ಬೆಂಬಲ ಬೆಲೆ ಕ್ವಿಂಟಲಿಗೆ 5 ಸಾವಿರ ನಿಗದಿಪಡಿಸಿದ್ದನ್ನು ಚರ್ಚಿಸಿ ಇನ್ನೂ 500 ಪ್ರೋತ್ಸಾಹಧನ ಸೇರಿಸಿ 5500 ನಿಗದಿಪಡಿಸಬೇಕು ಎಂದು ಸರ್ವಾನುಮತದಿಂದ ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು.
30ರಂದು ಸುಪರ ಮಾರ್ಕೆಟ್ನಿಂದ ಮಿನಿ ವಿಧಾನಸೌಧದವರೆಗೆ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಸಾರ್ವಜನಿಕರು ಭಾಗವಹಿಸಬೇಕು ಎಂದು ಮುಖಂಡರು ಮನವಿ ಮಾಡಿದ್ದಾರೆ.