ನೀರಿನ ವಿಷಯದಲ್ಲಿ ಗೊಂದಲದ ನಿಲುವೇಕೆ?
ಶಹಾಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಯ ನೀರು 2013-14ನೇ ಸಾಲಿನ ಬೆಳೆ ಆಧರಿಸಿ, ನವೆಂಬರ್ 28ರಂದು ಆಲಮಟ್ಟಿಯಲ್ಲಿ ಸಭೆ ಸೇರಿ ಹೆಚ್ಚು ಕಡಿಮೆ ಮಾರ್ಚ್ ಮುಗಿಯುವವರೆಗೆ ನೀರು ಹರಿಸುತ್ತೇವೆಂದು ಹೇಳಿದ್ದಾರೆ. ಸದ್ಯ ಫೆ. 23ರವರೆಗೆ ನೀರು ಬಿಡಲಾಗುತ್ತಿದೆ ಎಂದು ರೈತರಿಗೆ ನೋಟಿಸ್ ನೀಡಲಾಗುತ್ತಿದೆ. ಕೃಷ್ಣಾ ಭಾಗ್ಯ ಜಲನಿಗಮದ ರೈತ ವಿರೋಧಿ ನಿಲುವಿಗೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಗೌಡ ಸಲಹಾ ಸಮಿತಿ ನಿರ್ಣಯದಂತೆ ನೀರು ಬರಬಹುದೆಂದು ನಂಬಿ ಸೇಂಗಾ, ಸಜ್ಜೆ, ಮೆಕ್ಕೆಜೋಳ, ಸೂರ್ಯಪಾನವನ್ನು ರೈತರು ಬಿತ್ತಿದ್ದಾರೆ.
ಈಗ ಫೆಬ್ರವರಿವರೆಗೆ ಮಾತ್ರ ನೀರು ಬರುವ ನಿರ್ಧಾರ ತಿಳಿದು ಕಂಗಾಲಾಗಿದ್ದಾರೆ. ಸದ್ಯ ಎಸ್ಬಿಸಿಯಲ್ಲಿ ಇನ್ನಿತರ ಕಾಲುವೆಗಳಲ್ಲಿ ನೀರು ನಿರ್ವಹಣೆಯ ನಿಯಮವಿಲ್ಲದೆ ಮನಬಂದಂತೆ ಕಾಲುವೆ ಒಡೆದು ಹೋಗುವ ರೀತಿಯಲ್ಲಿ ನೀರು ಬಿಡುತ್ತಿರುವುದು ಅನಾವಶ್ಯಕವೆಂಬುದು ಅವರ ಗಮನಕ್ಕೆ ಬರುತ್ತಿಲ್ಲವೇ? ಅವಶ್ಯಕತೆ ಇದ್ದಾಗ ನೀರು ಹರಿಸದೇ ಮನಬಂದಂತೆ ಅವೈಜ್ಞಾನಿಕವಾಗಿ ನೀರು ಹರಿಸುತ್ತಾ ಡ್ಯಾಂ ಖಾಲಿ ಮಾಡುವ ಹುನ್ನಾರ ನಡೆದಿದೆ.
ಹಣ ಎತ್ತಿಹಾಕಲು ಸಂಚು: ಸಾವಿರಾರು ಕೋಟಿ ರು. ಖರ್ಚು ಮಾಡಿ ಕಾಲುವೆಗಳು ನಿರ್ಮಾಣವಾಗಿದ್ದು, ಅಧಿಕಾರಿಗಳ ಬೇಜವಾಬ್ದಾರಿತನ ಜನಪ್ರತಿನಿಧಿಗಳ ನಿಷ್ಕಾಳಜಿಗೆ ಕಾಲುವೆಗಳು ನಲುಗಿ ಹೋಗಿವೆ. ರಿಪೇರಿ ನೆಪದಲ್ಲಿ ಹಣ ಎತ್ತಿ ಹಾಕುವ ಕಾರ್ಯಕ್ಕೆ ವ್ಯವಸ್ಥಿತ ಸಂಚು ನಡೆದಿದೆ ಎಂದು ಆರೋಪಿಸಿದ್ದಾರೆ.
ಮಾರ್ಚ್ ಕೊನೆವರೆಗೆ ನೀರು ಬಿಡದಿದ್ದರೆ ರೈತ ಸಮುಹದ ಹಿತಕ್ಕಾಗಿ ಕೆಬಿಜೆಎನ್ಎಲ್ ಕಚೇರಿಗೆ ಮುತ್ತಿಗೆ ಹಾಕುವುದು, ಉಗ್ರ ಸ್ವರೂಪದ ಚಳುವಳಿ ನಡೆಸಲಾಗುವುದು ಎಂದು ಸಮಿತಿಯ ಎಸ್.ಎಂ. ಸಾಗರ ದಾವಲಸಾಬ ನದಾಫ್, ಸಿದ್ದಯ್ಯ ಹಿರೇಮಠ, ಮಲ್ಲನಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.