ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬೀದಿ ವ್ಯಾಪಾರಿಗಳ ಅಭಿವೃದ್ಧಿಗೆ ಒತ್ತಾಯ

Vishwanath S
Updated On : 27 Dec 2013, 12:35 pm

ಗುಲ್ಬರ್ಗ: ಬೀದಿ ವ್ಯಾಪಾರಿಗಳ ಸಮಗ್ರ ಅಭಿವೃದ್ಧಿ ಮತ್ತು ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದ್ದು, ಕೂಡಲೇ ರಾಜ್ಯದಲ್ಲಿಯೂ ಅದು ಅನುಷ್ಠಾನಗೊಳಿಸುವಂತೆ ಸಂಬಂಧಿಸಿದ ಸಚಿವರಿಗೆ ಒತ್ತಡ ಹೇರಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ಹೇಳಿದರು.
ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಗುರುವಾರ ಅಖಿಲ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘ ಆಯೋಜಿಸಿದ್ದ ಬೃಹತ್ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 5 ಸಾವಿರ ಬೀದಿ ವ್ಯಾಪಾರಿಗಳ ಬದುಕು ಗಂಭೀರವಾಗಿದ್ದು, ಅವರಿಗೆ ವ್ಯಾಪಾರ ಮಾಡಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು, ಜಾಮೀನು ರಹಿತ ಬ್ಯಾಂಕ್ ಸಾಲ ನೀಡುವುದು, ಮನೆಗಳು ಕಲ್ಪಿಸುವುದು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವ ಕುರಿತು ಪ್ರಧಾನಿ ಮನಮೋಹನಸಿಂಗ್ ಅವರು ಎಲ್ಲ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದ ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಅವರಿಗೆ ಈ ಕುರಿತು ಮನವರಿಕೆ ಮಾಡಿ ಪಾಲಿಕೆ ಆಯುಕ್ತರ ಮೂಲಕ ಅವುಗಳು ಅನುಷ್ಠಾನಗೊಳಿಸಲು ಮನವಿ ಮಾಡಲಾಗುವುದು ಎಂದರು.
ಸರ್ಕಾರದ ನಿರ್ಲಕ್ಷ್ಯ: ಸಂಘದ ಸಂಸ್ಥಾಪಕ ಜಗನ್ನಾಥ ಸೂರ್ಯವಂಶಿ ಮತ್ತು ಗೌರವಾಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, ಸರ್ಕಾರ ಒಂದು ಕಡೆ ನಿರ್ಲಕ್ಷ್ಯಕ್ಕೊಳಗಾದ ಜನರಿಗೆ ನೌಕರಿ ನೀಡುತ್ತಿಲ್ಲ. ಮತ್ತೊಂದೆಡೆ ಬೀದಿಯಲ್ಲಿ ವ್ಯಾಪಾರ ಮಾಡಿ ಬದುಕಬೇಕೆಂದರೆ ಮೂಲ ಸೌಕರ್ಯಗಳು ಒದಗಿಸದೇ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ವ್ಯಾಪಾರಿಗಳಿಗೆ 50 ಸಾವಿರದಿಂದ 1 ಲಕ್ಷದವರೆಗೆ ಜಾಮೀನು ರಹಿತ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್, ಜೈಕರವೇ ಅಧ್ಯಕ್ಷ ಅರುಣಕುಮಾರ್ ಪಾಟೀಲ್, ಈಶಾನ್ಯ ಕರ್ನಾಣಕ ಕನ್ನಡ ಸೇನೆಯ ಅಧ್ಯಕ್ಷ ಶಿವಶರಣಪ್ಪ ಖಣದಾಳ, ಕನ್ನಡ ಭೂಮಿ ಜಾಗೃತಿ ಸಮಿತಿ ಅಧ್ಯಕ್ಷ ಲಿಂಗರಾಜ ಸಿರಗಾಪುರ, ಕರವೇ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಲಂಡನಕರ್, ನಂದಕುಮಾರ ನಾಗಭುಜಂಗೆ, ಸಚಿನ್ ಫರಹತಾಬಾದ್, ಅಮೃತ ಸಿರನೂರ್,  ಅಬ್ದುಲ್ ಸಲಾಂ, ಶಿವಾನಂದ ದಶಮನಿ, ಮಹಾದೇವಪ್ಪ, ರವಿ ಒಂಟಿ, ಹಣಮಂತ ಸುಲ್ತಾನಪುರ, ದತ್ತು ಭಾಸಗಿ, ನಾಗರಾಜ, ಶಿವಕುಮಾರ್, ಶೇಖರ, ಅವಿನಾಶ ರೆಡ್ಡಿ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement