ಮಹಾಗಾಂವ ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ನಾಳೆ ಹೆದ್ದಾರಿ ತಡೆ
ಗುಲ್ಬರ್ಗ: ಜಿಲ್ಲೆಯ ಮಹಾಗಾಂವ ಗ್ರಾಮವನ್ನು ತಾಲೂಕು ಕೇಂದ್ರ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಯುವ ಶಕ್ತಿ ಸೈನ್ಯವು ಡಿ.28ರಂದು ಮಹಾಗಾಂವ ಕ್ರಾಸ್ನಲ್ಲಿ ಬೃಹತ್ ಪ್ರತಿಭಟನೆ ಮತ್ತು ಹೆದ್ದಾರಿ ತಡೆ ಚಳವಳಿ ಕೈಗೊಳ್ಳಲು ನಿರ್ಧರಿಸಿದೆ.
ಸುಮಾರ ವರ್ಷಗಳಿಂದ ವಿವಿಧ ಹೋರಾಟಗಳನ್ನು ಮಾಡುತ್ತಾ ಮನವಿ ಸಲ್ಲಿಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಆದರೆ, ಇಲ್ಲಿಯವರೆಗೂ ಮಹಾಗಾಂವ ಗ್ರಾಮವನ್ನು ತಾಲೂಕು ಕೇಂದ್ರ ಮಾಡುವ ಲಕ್ಷಣಗಳೇ ಕಾಣುತ್ತಿಲ್ಲ. ಹೀಗಾಗಿ ಈ ಹೋರಾಟ ಅನಿವಾರ್ಯವಾಗಿದೆ ಎಂದು ಸೈನ್ಯದ ರಾಜ್ಯಾಧ್ಯಕ್ಷ ಲಿಂಗರಾಜ ಗುಂಡುರಕರ್ ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬರುವ ಲೋಕಸಭಾ ಚುನಾವಣೆ ಒಳಗಾಗಿ ತಾಲೂಕು ಕೇಂದ್ರವೆಂದು ಘೋಷಣೆ ಮಾಡಲೇಬೇಕು. ಇಲ್ಲವಾದರೆ ತಾಲೂಕು ಘೋಷಣೆ ಮಾಡುವವರೆಗೂ ವಿವಿಧ ಹಂತದ ಹೋರಾಟಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಈಗಿನ ಶಾಸಕರು, ಚುನಾವಣೆಯ ಪೂರ್ವದಲ್ಲಿ ಮಹಾಗಾಂವ ಗ್ರಾಮವನ್ನು ತಾಲೂಕು ಮಾಡಲು ಸತತವಾಗಿ ಪ್ರಯತ್ನ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು. ಆದರೆ, ಈ ವಿಷಯದ ಬಗ್ಗೆ ಇಲ್ಲಿಯವರೆಗೂ ಚಕಾರವೆತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುನರ್ ರಚನೆಗೆ ಆಗ್ರಹ: ಮಹಾಗಾಂವ ತಾಲೂಕು ಕೇಂದ್ರವನ್ನಾಗಿ ಪರಿವರ್ತಿಸಲು 1974 ಏಪ್ರಿಲ್ 10 ರಂದು ಮೈಸೂರು ರಾಜ್ಯದ ಜಿಲ್ಲಾ ಹಾಗೂ ತಾಲೂಕು ಪುನರ್ ವಿಂಗಡಣಾ ಆಯುಕ್ತರಿಗೆ ಎಲ್ಲ ಮಾಹಿತಿ ನೀಡಲಾಗಿದೆ. ವಾಸುದೇವರಾವ ಅಧ್ಯಕ್ಷತೆಯಲ್ಲಿ ಸರ್ಕಾರ ನೇಮಿಸಿದ್ದ ತಾಲೂಕು ಪುನರ್ ರಚನೆ ಆಯೋಗವು ಸಹ ಮಹಾಗಾಂವ, ಕಾಳಗಿ, ಶಹಾಬಾದ್, ವಡಗೇರಾ ತಾಲೂಕು ಕೇಂದ್ರಗಳಾಗಿ ಪುನರ್ ರಚನೆ ಮಾಡಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದರು.
ಶಿವಮೂರ್ತಿ ನಿಗ್ಗುಡಗಿ, ಮಲ್ಲಿಕಾರ್ಜುನ, ವಿಜಯಕುಮಾರ್ ರಾವೂರ ಇದ್ದರು.
ಲೋಕಸಭಾ ಚುನಾವಣೆ ಒಳಗಾಗಿ ತಾಲೂಕು ಕೇಂದ್ರವೆಂದು ಘೋಷಣೆ ಮಾಡದಿದ್ದರೆ ಘೋಷಣೆ ಮಾಡುವವರೆಗೂ ವಿವಿಧ ಹಂತದ ಹೋರಾಟಗಳನ್ನು ಕೈಗೊಳ್ಳಲಾಗುವುದು.
-ಲಿಂಗರಾಜ, ರಾಜ್ಯಾಧ್ಯಕ್ಷ,
ಕರ್ನಾಟಕ ಯುವ ಶಕ್ತಿ ಸೈನ್ಯ