ಸಮಾಜ ಹಿತಕ್ಕಾಗಿ ವಚನ ರಚನೆ
ಕನ್ನಡಪ್ರಭ ವಾರ್ತೆ ಶಹಾಪುರ ಡಿ.26
12ನೇ ಶತಮಾನದ ಕಲ್ಯಾಣದ ಶರಣರು ಕಾಲಾಂತರದಲ್ಲಿಯೂ ತಾವು ಚರಿತ್ರೆಯ ಪುಟದಲ್ಲಿ ದಾಖಲಾಗಬೇಕೆಂದು ಹಂಬಲಿಸಿದವರಲ್ಲ. ಸಮಾಜ ಬದುಕಲೆಂದು ವಚನಗಳನ್ನು ರಚಿಸಿದರು ಎಂದು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಡಾ. ಜಯಶ್ರೀ ದಂಡೆ ಅಭಿಪ್ರಾಯಪಟ್ಟರು.
ಪಟ್ಟಣದ ಬಸವ ಮಾರ್ಗ ಪ್ರತಿಷ್ಠಾನ ಏರ್ಪಡಿಸಿದ್ದ ಮೇದಾರ ಕೇತಯ್ಯ ಜಯಂತ್ಯುತ್ಸವ ನಿಮಿತ್ತ ಹಮ್ಮಿಕೊಂಡಿದ್ದ ತಿಂಗಳ ಬಸವ ಬೆಳಕು-26ರ ಸಭೆಯ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ಶರಣ ಮೇದಾರ ಕೇತಯ್ಯನವರ ಕುರಿತು ಮಾತನಾಡಿದರು.
ಅಪ್ಪಟ ಶರಣಜೀವಿ: ತಾಯಿಯ ಹೃದಯ ಹೊಂದಿದ ಬಸವಣ್ಣನವರ ಅಂತಃಕರಣಕ್ಕೆ ಕೇತಯ್ಯ ಬೆರಗಾಗಿದ್ದ. ತನ್ನ ಮನ ಬುದ್ಧಿ ಭಾವಗಳೆಲ್ಲ ಬಸವಣ್ಣನವರನ್ನೇ ಹಾಸಿ-ಹೊದ್ದುಕೊಂಡಿದ್ದ. ಶರಣ ಕೇತಯ್ಯ ಕೂಡಾ ಅಪ್ಪಟ ಶರಣಜೀವಿ. ಪವಿತ್ರವಾದ ಕಾಯಕದಿಂದ ಬಂದುದರಿಂದಲೇ ಲಿಂಗಾರ್ಪಿತವ ಮಾಡಿ ಉಳಿದುದರಲ್ಲಿ ದಾಸೋಹ ಮಾಡುತ್ತಿದ್ದ. ಕೇತಯ್ಯ ಪವಿತ್ರವಾದ ಕಾಯಕಕ್ಕೆ ಮೆಚ್ಚಿ ಶಿವನೇ ಪ್ರತ್ಯಕ್ಷವಾದರೆ ಆತನನ್ನೇ ಪ್ರಶ್ನಿಸಿ, ತಬ್ಬಿಬ್ಬು ಗೊಳಿಸಿದ ಎಂದು ಮಾರ್ಮಿಕವಾಗಿ ನುಡಿದರು. ವಚನಕಾರರ ಬಗೆಗೆ ಇತಿಹಾಸದಲ್ಲಿ ಸಾಕಷ್ಟು ಮಾಹಿತಿ ದೊರೆಯದೆ ಇರುವದಕ್ಕೆ ಪಟ್ಟಭದ್ರ ಹಿತಾಸಕ್ತ ಶಕ್ತಿಗಳೇ ಪ್ರಮುಖ ಕಾರಣ ಎಂದವರು ಕುಟುಕಿದರು.
ಲಿಂಗಾಯತ ಎಂಬುದು ಜಾತಿ ಅಲ್ಲವೇ ಅಲ್ಲ. ಅದೊಂದು ವಿಶಿಷ್ಟವಾದ ಜೀವನ ಪಥ. ಮಾದಾರ ಚನ್ನಯ್ಯ, ಡೋಹಾರ ಕಕ್ಕಯ್ಯ, ಸಮಗಾರ ಹರಳಯ್ಯ, ಮೇದಾರ ಕೇತಯ್ಯ, ಸೂಳೆ ಸಂಕವ್ವೆ ಮೊದಲಾದ 770 ಅಮರ ಗಣಂಗಳು ರೂಪಿಸಿದ ಮಾರ್ಗ. ಕಾಯಕಗಳು ಕಾಲಾಂತರದಲ್ಲಿ ಜಾತಿಯಾದವು. ಬಸವಣ್ಣನವರು ಕಟ್ಟಿದ ಸಮಾಜದಲ್ಲಿ ಮೇಲು-ಕೀಳು, ಮುಟ್ಟು-ತಟ್ಟು ಬಡವ-ಬಲ್ಲಿದ, ಹೆಣ್ಣು-ಗಂಡು ಎಂಬ ಬೇಧ ಭಾವಗಳು ಇರಲಿಲ್ಲ. ಯಾರು ಯಾರನ್ನು ಮೋಸಗೊಳಿಸುವ ಎತ್ತುಗಡೆಯೂ ನಡೆಯಲಿಲ್ಲ. ಇಂಥ ಸುಖೀ ರಾಜ್ಯದಿಂದ ಪುರೋಗಾಮಿ ಶಕ್ತಿಗಳ ಆಟ ಅಡಗಿಹೋಯ್ತು. ಇದರಿಂದಲೇ 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಬರ್ಬರ ಹತ್ಯಾಕಾಂಡ ಜರುಗಿತು ಎಂದು ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವರಾಧ್ಯ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಡೈರಿ ಬಿಡುಗಡೆ: ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಗುರುಬಸವಯ್ಯ ಗದ್ದುಗೆ ಅವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಭೀಮರಾಯ ನುಚ್ಚಿನ್ ಅಲ್ಲಮಪ್ರಭು, ಅಮಿತ ಯಕ್ಷಂತಿ, ಮಲ್ಲಿಕಾರ್ಜುನ ಅವರು ವಚನ ಪ್ರಾರ್ಥನೆ ಮಾಡಿದರು. ಬಸವರಾಜ ಕಲೆಗಾರ 2014ರ ಡೈರಿ ಬಿಡುಗಡೆಗೊಳಿಸಿದರು. ಸಭೆಯ ಅದ್ಯಕ್ಷತೆ ಚಿಂಥಣಾ ಮೇದಾರ ವಹಿಸಿದ್ದರು. ಪ್ರಕಾಶ ದೊರೆ ಮುಡಬೂಳ ಸ್ವಾಗತಿಸಿದರು. ಶಿವಣ್ಣ ಇಜೇರಿ ನಿರೂಪಿಸಿ, ಎಸ್.ಎಸ್. ನಾಯಕ ವಂದಿಸಿದರು.
ವಿಶ್ವನಾಥ ಗೊಂದಡಗಿ, ಶಿವಯೋಗಪ್ಪ ಮುಡಬೂಳ, ಸಿದ್ದಯ್ಯ ಕನ್ನೆಕೋಳೂರ, ಡಿ.ಜಿ. ಬಳ್ಳೂರಗಿ, ಸಂಗಣ್ಣ ಧೋರನಳ್ಳಿ, ಭೀಮರಾಯ ಲಿಂಗೇರಿ ಪರಮೇಶ್ವರ ಬಡಿಗೇರ, ಬಸವರಾಜ ಸಿನ್ನೂರ, ಅಂಬದಾಸ ಗಾಳಿ, ಸಾಯಿಬಣ್ಣ ಪುರ್ಲೆ, ನಾಗರಾಜ ಮೇದಾ, ಹನುಮಂತ ಹಳಿಮನಿ, ಮಹಾದೇವಪ್ಪ ಬಬಲಾದಿ, ಮೋಹನಕಾಂತ ರಂಗದಳ, ಚಂದ್ರಕಾಂತ ಕರದಳ್ಳಿ, ಸಿದ್ದರಾಮ ಹೊನ್ಕಲ್, ಡಾ. ಚಂದ್ರಶೇಖರ ಸುಭೆದಾರ, ಚನ್ನಪ್ಪ ಗುಂಡಾನೂರ ಮತ್ತಿತರರು ಉಪಸ್ಥಿತರಿದ್ದರು.