ಹೇಳಿದ್ದೊಂದು, ಮಾಡಿದ್ದು ಮತ್ತೊಂದು...
ಕ.ಪ್ರ.ವಾರ್ತೆ , ಗುಲ್ಬರ್ಗ , ಡಿ.26
ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕಾಗಿ ಭೂಪರಿವರ್ತನೆ (ಕೃಷಿಯೇತರ ಭೂಮಿ) ಮಾಡಿ ನಂತರ ಆ ಸ್ಥಳದಲ್ಲಿ ಶೈತ್ಯಾಗಾರ (ಕೋಲ್ಡ್ ಸ್ಟೋರೇಜ್) ನಿರ್ಮಿಸಿದ ಬೆಳವಣಿಗೆ ಇಲ್ಲಿನ ಹೀರಾಪುರ ಸರ್ವೆ ನಂಬರ್ 3/3 ಜಮೀನಿನಲ್ಲಿ ನಡೆದಿದೆ.
ಈ ಬೆಳವಣಿಗೆಯಲ್ಲಿ ಕರ್ನಾಟಕ ಭೂ ಕಂದಾಯ ಕಾಯಿದೆ 1964 ಉಲ್ಲಂಘನೆಯಾಗಿದೆ. ಜೊತೆಗೇ ಮಹಾನಗರ ಪಾಲಿಕೆ, ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ, ಮಾಲಿನ್ಯ ನಿಯಂತ್ರಣ ಮಂಡಳಿಗಳು ಈ ಅಕ್ರಮ ನಡೆದರೂ ಜಾಣ ಕುರುಡು, ಕಿವುಡು ನೀತಿಗೆ ಜೋತು ಬಿದ್ದಿವೆ ಎಂದು ಬಲವಾಗಿ ಆರೋಪಿಸಿರುವ ಮಾಜಿ ಕಾರ್ಮಿಕ ಸಚಿವ ಎಸ್.ಕೆ. ಕಾಂತಾ, ವಾರದೊಳಗೆ ಶೈತ್ಯಾಗಾರ ಬಂದ್ ಮಾಡಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ರೆ ಜನರ ಸಹಕಾರದೊಂದಿಗೆ ಹೋರಾಟ ಆರಂಭಿಸುವುದಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಗಡುವು ನೀಡಿದ್ದಾರೆ.
ಎನ್ಎ ಆದೇಶ ರದ್ದು ಮಾಡಲು ಗಡವು: ಮಹ್ಮದ್ ಇಲಿಯಾಸ್ ಎಂಬುವವರು ಒಂದೂವರೆ ದಶಕದ ಹಿಂದೆಯೇ ಸ. ನಂ. 3/3 ಜಮೀನನ್ನು ವಸತಿ ಉದ್ದೇಶಕ್ಕೆಂದು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಕಾನೂನು ಪ್ರಕಾರ- ಮಾಹಿತಿ ನೀಡಿದಂತೆಯೇ ಭೂಮಿ ಬಳಕೆಯಾಗಬೇಕು.
ಅನ್ಯ ಉದ್ದೇಶಕ್ಕೆ ಬಳಕೆಯಾದಲ್ಲಿ ಭೂಪರಿವರ್ತನೆ ಅನುಮತಿ ರದ್ದು ಮಾಡುವ ಅಧಿಕಾರ ಜಿಲ್ಲಾಧಿಕಾರಿಗಳಿದೆ ಇದೆ. ತಕ್ಷಣ ಅವರು ಸದರಿ ಭೂಮಿಯ ಎನ್ಎ ಆದೇಶ ರದ್ದುಮಾಡಬೇಕೆಂದು ಕಾಂತಾ ಆಗ್ರಹಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೂಪರಿವರ್ತನೆ ದಾಖಲೆಪತ್ರಗಳು, ಪಾಲಿಕೆ ನೀಡಿರುವ ಮಾಹಿತಿ, ಜೆಸ್ಕಾಂನಿಂದ ಪಡೆದ ದಾಖಲೆಗಳನ್ನೆಲ್ಲ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಅಲ್ಲದೆ ಇದು ಭೂಪರಿವರ್ತನೆ ನಿಯಮದ ದುರ್ಬಳಕೆ, ಕ್ರಿಮಿನಲ್ ಅಪರಾಧ ಕೂಡ. ಮೊದಲು ಜಿಲ್ಲಾದಿಕಾರಿಗಳು ಇದಕ್ಕೆ ಕಾರಣರಾಗಿರುವ ಎಲ್ಲರ ಮೇಲೂ ಕ್ರಿಮಿನಲ್ ದಾವೆ ಹೂಡಿ, ಸದರಿ ಬೆಳವಣಿಗೆಯ ತನಿಖೆಗೆ ಮುಂದಾಗಬೇಕೆಂದು ಆಗ್ರಹಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿ ಗಾಢನಿದ್ರೆ: ಮೊಹ್ಮದ್ ಇಲಿಯಾಸ್ ಎಂಬುವವರು ಬೆಂಗಳೂರಿನ ಕೃಷಿ ಮಾರುಕಟ್ಟೆ ಮಂಡಳಿಯಿಂದ ಪರವಾನಗಿ ಪಡೆದಿದ್ದು, ಅದರಲ್ಲಿ 17,080 ಘನ ಮೀಟರ್ ಸಾಮರ್ಥ್ಯದ ಶೈತ್ಯಾಗಾರ ನಿರ್ಮಾಣಕ್ಕೆ ಪರವಾನಗಿ ಪಡೆದಿದ್ದಾರೆ. ಈ ಮಾಹಿತಿಯನ್ನು ಜೆಸ್ಕಾಂನವರಿಗೂ ಸಲ್ಲಿಸಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಶೈತ್ಯಾಗಾರ ನಿರ್ಮಾಣವಾಗಬೇಕೆಂದರೆ ಅಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯವರು ಪರಿಶೀಲನೆ ನಡೆಸಿ ಅನುಮತಿ ನೀಡಬೇಕು. ಆದರಿಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯವರು ತಮ್ಮ ಪಾತ್ರ ನಿಭಾಯಿಸಿಲ್ಲ ಎಂದು ಕಾಂತಾ ಆರೋಪಿಸಿದರು.
ಖಾರದ ಪುಡಿ ಯಂತ್ರಕ್ಕಾಗಿ ಅನುಮತಿ ಪಡೆದು ನಂತರ, 10 ಸಾವಿರ ಚದರ ಅಡಿಯಲ್ಲಿ ತರಕಾರಿ ಇಡಲು ಶೈತ್ಯಾಗಾರ ನಿರ್ಮಿಸಲಾಗಿದೆ. ಇದಾದ ನಂತರ ದೊಡ್ಡ ಪ್ರಮಾಣದಲ್ಲಿ ಮಾಂಸ ಸಂಸ್ಕರಣೆ ಹಾಗೂ ಶೈತ್ಯಾಗಾರ ಸ್ಥಾಪಿಸಲಾಗಿದೆ. ಇದೆಲ್ಲವೂ ವಸತಿ ಉದ್ದೇಶದ ಭೂಮಿಯಲ್ಲೇ ನಡೆದ ಬೆಳವಣಿಗೆ.
ಎಲ್ಲ ಏಜೆನ್ಸಿಗಳವರು ಶಾಮೀಲು: ಉದ್ದಿಮೆ ಚಟುವಟಿಕೆ ವಸತಿ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪ್ರದೇಶದಲ್ಲಿ ಅದ್ಹೇಗೆ ನಡೆಯಿತೋ ಯಾರೂ ಈ ಬೆಳವಣಿಗೆ ಕೇಳಲಿಲ್ಲ ಯಾಕೆ, ಇದು ಎಲ್ಲ ಏಜನ್ಸಿಗಳವರು ಶಾಮೀಲಾಗಿ ಮಾಡಿರುವ ಅಕ್ರಮ ಎಂದು ಕಾಂತಾ ಜಿಲ್ಲಾಡಳಿತದಡಿಯಲ್ಲಿ ಬರುವ ಹಾಗೂ ಪೂರಕವಾಗಿರುವ ಪಾಲಿಕೆ ಆದಿಯಾಗಿ ಎಲ್ಲ ಏಜನ್ಸಿಗಳನ್ನು ದೂರಿದರು.
ಈ ಕೋಲ್ಡ್ ಸ್ಟೋರೇಜ್ ಪಕ್ಕದಲ್ಲೇ ಸ.ನಂ 7 ಇದೆ. ಇದು ಸರ್ಕಾರಿ ಜಮೀನು. ಇದೀಗ ನಿಧಾನವಾಗಿ ಈ ಜಮೀನು ಒತ್ತುವರಿಯಾಗುತ್ತಿದೆ. ಪಾಲಿಕೆಗಾಗಲಿ, ಜಿಲ್ಲಾಡಳಿತಕ್ಕಾಗಲಿ ಇದೂ ಗಮನಕ್ಕಿಲ್ಲ ಎಂದರು.
ಜೆಸ್ಕಾಂ ಜಾಣತನ: ಖಾರಾ ಕುಟ್ಟುವ ಗಿರಣಿಗೆ ಎಂದು ಕಡಿಮೆ ಪ್ರಮಾಣದ ವಿದ್ಯುಚ್ಛಕ್ತಿ ಅನುಮತಿ ಪಡೆಯಲಾಗಿತ್ತು. ಇದಾದ ನಂತರ 500 ಕೆವಿ ವಿದ್ಯುಚ್ಛಕ್ತಿ ಬಳಸಲಾಗುತ್ತಿದೆ. ಆದರೂ ಇಷ್ಟೊಂದು ವಿದ್ಯುತ್ ಬಳಸುವ ಘಟಕ ಯಾವುದು, ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಜೆಸ್ಕಾಂನವರೂ ಕಣ್ಣೆತ್ತಿ ನೋಡಿಲ್ಲ. ಹೀಗಾಗಿ ಜೆಸ್ಕಾಂ ಸಿಬ್ಬಂದಿ ಸಹ ಶಾಮೀಲಾಗಿ ಜಾಣತನ ಮೆರೆದಿದ್ದಾರೆ ಎಂದು ಕಾಂತಾ ದೂರಿದರು.
ತಾವು ಮಾಹಿತಿ ಹಕ್ಕು ಅಡಿಯಲ್ಲಿ ಪಾಲಿಕೆಗೆ, ಜೆಸ್ಕಾಂಗೆ ಪತ್ರ ಬರೆದು ಮಾಹಿತಿ ಕೋರಿದಾಗ ತಕ್ಷಣ ಮಾಹಿತಿ ದೊರಕಲಿಲ್ಲ. ನಂತರ ಅಪೂರ್ಣ ಮಾಹಿತಿ ನೀಡಿದ್ದಾರೆ. ಮಾಹಿತಿ ಹಕ್ಕು ಆಯೋಗದವರೆಗೂ ವಾದ ಸಾಗಿ ಅಧಿಕಾರಿಗಳು ದಂಡ ಹಾಕಿಸಿಕೊಂಡರೇ ಹೊರತು ಈ ಪ್ರಕರಣದಲ್ಲಿ ಪಕ್ಕಾ ಹಾಗೂ ಪೂರ್ಣ ಮಾಹಿತಿ ನೀಡಲು ಸಿದ್ಧರಿಲ್ಲ ಎಂದು ಪಾಲಿಕೆ ಹಾಗೂ ಜೆಸ್ಕಾಂ ಸಿಬ್ಬಂದಿಯ ಸಾಚಾತಾನವನ್ನು ಟೀಕಿಸಿದರು.
ಅಮೋನಿಯಂ ದ್ರಾವಣ ಸೋರಿಕೆ
ಇತ್ತೀಚೆಗಷ್ಟೆ ಈ ಕೋಲ್ಡ್ ಸ್ಟೋರೇಜ್ನಿಂದ ಅಮೋನಿಯಂ ದ್ರಾವಣ ಸೋರಿ ತೊಂದರೆಯಾಗಿತ್ತು. ಸುತ್ತಲಿನ ಬಡಾವಣೆಯ ಜನತೆ ಕಿವಿ, ಗಂಟಲು, ಶ್ವಾಸಕೋಶ ಸಂಬಂಧಿ ತೊಂದರೆಗಳಿಂದ ಬಳಲಿದ್ದರು. ಈ ಶೈತ್ಯಾಗಾರದ ಮಾಲೀಕ ಇಲಿಯಾಸ್ ಅವರೇ ಕುಟುಂಬ ಸದಸ್ಯರೊಂದಿಗೆ ಅಲ್ಲಿಂದ ಜಾಗ ಖಾಲಿ ಮಾಡಿದ್ದರು. ಜನವಸತಿಗೆ ತೊಂದರೆಯಾಗುವ ರಸಾಯನಿಕ ಬಳಸುವ ಉದ್ದಿಮೆ ಘಟಕ ಜನನಿಬಿಡ ಪ್ರದೇಶದಲ್ಲಿರುವುದು ಅಪಾಯಕಾರಿ ಎನ್ನುತ್ತಾರೆ ಬಡಾವಣೆಯ ಅಬ್ದುಲ್ ರಹೀಂ, ನೂರ್ ಇಲಿಯಾಸ್ ವಕೀಲರು ಹಾಗೂ ಪಾಲಿಕೆ ಮಾಜಿ ಸದಸ್ಯ ಅಸ್ಲಂ ಕಲ್ಯಾಣಿ. ಅಮೋನಿಯಂ ದ್ರಾವಣ ಸೇರಿಕೆಯಿಂದ ಏನೂ ಆಗೋದಿಲ್ಲ ಎಂದು ಘಟನೆಯ ನಂತರ ಹಲವರು ನೀಡಿರುವ ಹೇಳಿಕೆಯನ್ನು ಖಂಡಿಸಿದ ಇವರು, ಜನವಸತಿ ಪ್ರದೇಶದಲ್ಲಿ ಇಂತಹ ಚಟುವಟಿಕೆ ನಡೆದದ್ದು ದುರದೃಷ್ಟಕರ, ಕಾನೂನುಗಳು ಇದ್ದರೂ ಯಾರೂ ಅವುಗಳ ಅನುಷ್ಠಾನದತ್ತ ಗಮನಹರಿಸದೆ ಜನರಿಗೆ ತೊಂದರೆಯಾದರೂ ಸುಮ್ಮನಿದ್ದಾರೆ ಎಂದು ನಿವಾಸಿಗಳು ಕಳವಳ ಹೊರಹಾಕಿದರು.
ರಾಜಕಾರಣಿಗಳ ಶ್ರೀರಕ್ಷೆ
ಅಕ್ರಮ ಶೈತ್ಯಾಗಾರ ಸುತ್ತಮುತ್ತ ಇಷ್ಟೊಂದು ಅವಾಂತರ ನಡೆದರೂ ಸ್ಥಳೀಯವಾಗಿ ಯಾವ ನಾಯಕರು ಬಾಯಿ ಬಿಡುತ್ತಿಲ್ಲ. ಇದಕ್ಕೆಲ್ಲ ರಾಜಕಾರಣಿಗಳ ಶ್ರೀರಕ್ಷೆ ಇದೆ. ಸಂಸದರು, ಸಚಿವರ ಆಸರೆಯಿಂದಾಗಿಯೇ ಎಂದು ಹಲವರು ಸೇರಿಕೊಂಡು ಅಡ್ಡದಾರಿಗೆ ಇಳಿದಿದ್ದಾರೆ. ಕಾನೂನು ಪ್ರಕಾರ ಅಧಿಕಾರಿಗಳು ಕ್ರಮ ಜರುಗಿಸಿ ಗುಲ್ಬರ್ಗ ಜನತೆಗೆ ನ್ಯಾಯ ಒದಗಿಸಬೇಕೆಂದು ಕಾಂತಾ ಆಗ್ರಹಿಸಿದ್ದಾರೆ.
ಕಾಂತಾ, ಬೆಂಬಲಿಗರ ಮೇಲೆ ಹಲ್ಲೆ
ಗುಲ್ಬರ್ಗ: ಮಾಜಿ ಸಚಿವ, ಹೋರಾಟಗಾರ ಎಸ್.ಕೆ. ಕಾಂತಾ ಮತ್ತವರ ಬೆಂಬಲಿಗರ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ಮಾಡಿದೆ. ಕಾಂತಾ ತಮ್ಮ ಬೆಂಬಲಿಗರೊಂದಿಗೆ ಅಪ್ಪನ ಕೆರೆ ಪಕ್ಕದಲ್ಲಿರುವ ಕಲ್ಯಾಣ ಕಲ್ಯಾಣ ಮಂಟಪಕ್ಕೆ ಮದುವೆ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ.
ಎಂಎಸ್ಕೆ ಮಿಲ್ ಪ್ರದೇಶದಲ್ಲಿರುವ ಕೋಲ್ಡ್ ಸ್ಟೋರೇಜ್ ವಿವಾದಕ್ಕೆ ಸಂಬಂಧಿಸಿದಂತೆಯೇ ಗುಂಪೊಂದು ಕಾಂತಾ ಅವರನ್ನು ಎದುರಾಗಿ ಅವಾಚ್ಯವಾಗಿ ನಿಂದಿಸಿದೆ. ಜೊತೆಗೇ ಹಲ್ಲೆಗೂ ಯತ್ನಿಸಿದೆ ಎಂದು ಹೇಳಲಾಗಿದೆ. ಸುದ್ದಿ ತಿಳಿದ ತಕ್ಷಣ ಬ್ರಹ್ಮಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸತೀಶ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರಕರಣ ತಿಳಿಗೊಳಿಸಿದ್ದಾರೆ. ಈ ಸಂಬಂಧ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮೋನಿಯಂ ನೈಟ್ರೇಟ್ ಸೋರಿಕೆ; ತನಿಖೆಯಾಗಲಿ
ಗುಲ್ಬರ್ಗ: ಇಲ್ಲಿನ ಎಂಎಸ್ಕೆ ಮಿಲ್ ಪ್ರದೇಶದಲ್ಲಿರುವ ಕೋಲ್ಡ್ ಸ್ಟೋರೇಜ್ನಲ್ಲಿ ಡಿ.21ರಂದು ಸಂಜೆ ಸಂಭವಿಸಿರುವ ಅಮೋನಿಯಂ ನೈಟ್ರೇಟ್ ಅನಿಲ ಸೋರಿಕೆ ಘಟನೆಯ ತನಿಖೆ ನಡೆಸಬೇಕು. ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಮಾಜಿ ಸಚಿವ ಎಸ್.ಕೆ. ಕಾಂತಾ ಆಗ್ರಹಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಪ್ರಸಾದ್ ಅವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿರುವ ಕಾಂತಾ, ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡದಲ್ಲಿ ಶೈತ್ಯಾಗಾರ ನಡೆಸಲಾಗುತ್ತಿದೆ. ಅದನ್ನು ಕೂಡಲೇ ಮುಚ್ಚಿಸಬೇಕು. ಸುಳ್ಳು ಮಾಹಿತಿ ನೀಡಿ ಸೃಷ್ಟಿಸಲಾಗಿರುವ ಭೂಪರಿವರ್ತನಾ ಪರವಾನಗಿ ವಾಪಸ್ ಪಡೆಯಬೇಕು. ಶೈತ್ಯಾಗಾರ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿರುವ ನಾನಾ ಏಜನ್ಸಿಗಳ ಸಿಬ್ಬಂದಿ ವಿರುದ್ಧವೂ ವಿಚಾರಣೆ ಆರಂಭಿಸಬೇಕು. ಸ.ನಂ.7ರ ಹೀರಾಪುರ ಸರ್ಕಾರಿ ಜಮೀನನಲ್ಲಿ ಸಾಗಿರುವ ಒತ್ತುವರಿ ನಿಲ್ಲಿಸಬೇಕೆಂದು ಕಾಂತಾ 4 ಪುಟಗಳ ವಿವಿರವಾದಂತಹ ಮನವಿ ಪತ್ರವನ್ನು ಪೂರಕ ದಾಖಲೆಗಳ ಸಮೇತ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.