ಕಾಂತಾ ತಂಡದ ಮೇಲೆ ಹಲ್ಲೆ; ಇಂದು ಪ್ರತಿಭಟನೆ
ಗುಲ್ಬರ್ಗ: ಕೋಲ್ಡ್ ಸ್ಟೋರೇಜ್ ವಿವಾದ ಇದೀಗ ಹೊಸ ತಿರುವು ಪಡೆದುಕೊಳ್ಳತೊಡಗಿದೆ. ಸ್ಟೋರೇಜ್ ಮಾಲೀಕ ಇಲಿಯಾಸ್ ಭಾಗವಾನ್ ಹಾಗೂ ಬೆಂಬಲಿಗರ ಗುಂಪು ಗುರುವಾರ ನಡೆಸಿದ್ದ ಹೋರಾಟಗಾರ, ಮಾಜಿ ಸಚಿವ ಎಸ್.ಕೆ. ಕಾಂತಾ ಹಾಗೂ ಬೆಂಬಲಿಗರ ಮೇಲಿನ ಹಲ್ಲೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.
ನಗರದಲ್ಲಿರುವ ವಿವಿಧ ಸಂಘಟನೆಗಳ ಪ್ರಮುಖರು, ಹೋರಾಟಗಾರರು ಅನೇಕರು ಶುಕ್ರವಾರ ಕನ್ನಡಭವನದಲ್ಲಿ ಸಭೆ ನಡೆಸಿ ಹಲ್ಲೆ ಘಟನೆ ಖಂಡಿಸಿದ್ದಲ್ಲದೆ, ಡಿ.28ರಂದು ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಕಾಯಿದೆ ಉಲ್ಲಂಘಿಸಿ ಕೋಲ್ಡ್ ಸ್ಟೋರೇಜ್ ನಿರ್ಮಿಸಲಾಗಿದೆ ಎಂದು ಹೇಳಿದ್ದೇ ತಪ್ಪೆ, ಜಿಲ್ಲಾಧಿಕಾರಿಗಳು ತಕ್ಷಣ ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಕಾನೂನು ಕ್ರಮದಡಿಯಲ್ಲಿ ಬಂಧಿಸಬೇಕು, ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯ್ತು.
ಹೋರಾಟಗಾರ ಮಾರುತಿ ಮಾನ್ಪಡೆ, ಎಚ್ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಶಾಸಕ ಪಾಟೀಲ್, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಿವಿ ಪಾಟೀಲ್, ಅಶೋಕ ಹೊನ್ನಳ್ಳಿ, ಶ್ರೀಶೈಲ ಘೂಳಿ, ಸೂರ್ಯಕಾಂತ ನಿಂಬಾಳ್ಕರ್, ಭವಾನಿ ವಳಕೇರಿ, ಗರೂರ ಮಲ್ಲಿಕಾರ್ಜುನ, ಹಣ್ಮಂತ ಯಳಂಸಗಿಕರ್, ನಾಗಲಿಂಗಯ್ಯ ಮಠಪತಿ, ಶಿವಶರಣಪ್ಪ ಖಣದಾಳ ಸೇರಿದಂತೆ ನೂರಾರು ಮಂದಿ ಸಭೆಯಲ್ಲಿ ಭಾಗವಹಿಸಿ ಹಲ್ಲೆ ಘಟನೆ ಕಟು ಶಬ್ದಗಳಲ್ಲಿ ಖಂಡಿಸಿ, ತಕ್ಷಣ ಪ್ರತ್ಯುತ್ತರವಾಗಿ ಹೋರಾಟ ನಡೆಸುವ ತೀರ್ಮಾನ ಕೈಗೊಂಡಿದ್ದಾರೆ.