ತೊಗರಿ ಬೇಳೆ ಆಮದು ಸುಂಕ ಏರಿಸಿ
ಗುಲ್ಬರ್ಗ/ಶಹಾಬಾದ್: ಕೇಂದ್ರ ಸರ್ಕಾರ ತೊಗರಿ ಬೇಳೆ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು, ಆಮದು ಪ್ರೋತ್ಸಾಹ ಸಬ್ಸಿಡಿ ನಿಲ್ಲಿಸಿ, ಶೇ.30ರಷ್ಟು ಆಮದು ಶುಲ್ಕ ಹಾಕಲು ಒತ್ತಾಯಿಸಿ ಜ.30ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತಸಂಘದ ಮುಖಂಡ ಮಾರುತಿ ಮಾನ್ಪಡೆ ಹೇಳಿದರು.
ಸಂಜೆ ನಗರದಲ್ಲಿ ದಾಲ್ ಮಿಲ್ಲರ್ಸ್ ಮತ್ತು ಅಡತ್ ವ್ಯಾಪಾರಸ್ಥರ, ರೈತರ ಸಭೆ ನಡೆಸಿ ಮಾತನಾಡುತ್ತ, ಬಹುರಾಷ್ಟ್ರೀಯ ಕಂಪನಿಗಳ ಪರವಾಗಿರುವ 1996ರ ಎಪಿಎಂಸಿ ಕಾಯ್ದೆ ತಿದ್ದುಪಡೆ ಕಾಯ್ಕೆ ಕೈಬಿಡಬೇಕು. ಗುಲ್ಬರ್ಗ, ಬೀದರ್, ರಾಯಚೂರು, ಬಿಜಾಪುರಗಳಲ್ಲಿ ಹೆಚ್ಚು ಕಾಳುಗಳ ಕಾರ್ಖಾನೆಗಳಿದ್ದು, ದಾಲ್ ಕ್ಷಸ್ಟರ್ ಮಂಜೂರಾತಿ ಮಾಡಿ, ಸಾವಿರಾರು ಕೋಟಿ ರು. ಮಂಜೂರು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.
ರೈತರು ಬದುಕಲು ಸಾಧ್ಯವಿಲ್ಲ: ಹೈ-ಕ ವಾಣಿಜ್ಯ ಮಂಡಳಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾತನಾಡಿ, ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಶರದ್ ಪವಾರ, ಪ್ರಪುಲ್ಲ ಪಟೇಲರಂಥ 20- 25 ಜನರ ತೊಗರಿ ಮಾಫಿಯಾದವರು ತಮ್ಮ ಲಾಭಕ್ಕಾಗಿ ತೊಗರಿ ಬೇಳೆಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದರಿಂದ ದಾಲ್ ಮಿಲ್ ಮಾಲೀಕರು, ಕಮೀಷನ್ ಏಜಂಟರು, ರೈತರು ಬದುಕುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮನವಿ: ಹೊರ ದೇಶದಿಂದ ಹಂದಿಗಳು ತಿನ್ನುವ ಬೇಳೆ ಕಾಳುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದ ಅವರು, 80 ಲಕ್ಷ ರೈತರು ತೊಗರಿ ಬೇಳೆ ಮೇಲೆ ಅವಲಂಬಿತರಾಗಿದ್ದು, ಪ್ರಬಲ ತೊಗರಿ ಬೋರ್ಡ್ ರಚಿಸಬೇಕೆಂದು ಆಗ್ರಹಿಸಲು, ಜಿಲ್ಲೆಯವರಾದ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ಇಲ್ಲಿಯ ಸಮಸ್ಯೆ ಕೇಂದ್ರಕ್ಕೆ ತಿಳಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು. ರೈತರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
ಸಭೆಯಲ್ಲಿ ದಾಲ್ ಮಿಲ್ ಅಡತ್ ವ್ಯಾಪಾರಸ್ಥರು, ರೈತರಾದ ಹಣಮಂತರಾವ ಇಂಗಿನಶೆಟ್ಟಿ, ಶರಣಬಸಪ್ಪ ಕೋಬಾಳ, ಮಹಾಲಿಂಗಪ್ಪ ಇಂಗಿನಶೆಟ್ಟಿ, ಪ್ರಶಾಂತ ಮರಗೋಳ, ಸಂತೋಷಕುಮಾರ್ ಇಂಗಿನಶೆಟ್ಟಿ, ಶಂಕರ ಸೂಗೂರ, ವಿಶ್ವರಾಧ್ಯ ಬಿರಾಳ, ಸಂಗು ರಾಮಶೆಟ್ಟಿ, ಭೀಮಣ್ಣ ಖಂಡ್ರೆ, ಅಣ್ಣಾರಾವ ಪಾಟೀಲ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.