ಪ್ರೋತ್ಸಾಹಧನ ಪರಿಷ್ಕರಿಸಿ, ಖರೀದಿ ಕೇಂದ್ರ ಹೆಚ್ಚಿಸಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಡಿ.27
ಕ್ವಿಂಟಲ್ ತೊಗರಿಗೆ 700 ಪ್ರೋತ್ಸಾಹಧನ ಏನೇನೂ ಸಾಲದು ಎಂದಿರುವ ತೊಗರಿ ಕಣಜದ ರೈತ ಸಂಘಟನೆಗಳು ಹಾಗೂ ರೈತರು, ರಾಜ್ಯ ಸರ್ಕಾರ ಕೊನೇ ಪಕ್ಷ ಪ್ರತಿ ಕ್ವಿಂಟಲ್‌ಗೆ 1,200 ಆದರೂ ಪ್ರೋತ್ಸಾಹಧನ ನೀಡಲಿ ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಕ್ವಿಂಟಲ್ ತೊಗರಿಗೆ 4,300 ಎಂಎಸ್ಪಿ ನಿಗದಿ ಮಾಡಿದೆ. ರಾಜ್ಯ ಸರ್ಕಾರ 700ರ ಬದಲು 1,200ರ ಪ್ರೋತ್ಸಾಹ ಧನ ನೀಡಿದಲ್ಲಿ ತೊಗರಿ ರೈತರಿಗೆ ಕ್ವಿಂ.ಗೆ ಕನಿಷ್ಠ 5,500 ಆದರೂ ದೊರಕುತ್ತದೆ. ಇಲ್ಲದೆ ಹೋದಲ್ಲಿ ರೈತರ ಸಂಕಷ್ಟ ಹಾಗೇ ಮುಂದುವರಿಯುತ್ತದೆ ಎಂದು ಇಂದಿಲ್ಲಿ ಸಭೆ ಸೇರಿದ್ದ ರೈತಪರ ಸಂಘಟನೆಗಳು, ಹೋರಾಟಗಾರರು, ಹಿರಿಯ ರೈತರು, ಧಾನ್ಯ ವರ್ತಕರು ಸೇರಿದಂತೆ ಅನೇಕರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಸಭೆಯ ನೇತೃತ್ವ ವಹಿಸಿದ್ದ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ಪ್ರೋತ್ಸಾಹಧನ ಯೋಜನೆ ಸ್ವಾಗತಾರ್ಹ. ಆದರೆ ಅದು ತುಸು ಹೆಚ್ಚಲಿ, ಕ್ವಿಂಟಲ್‌ಗೆ 1,200 ಇರಲಿ. ಇದರಿಂದ ರೈತರಿಗೆ 5,500 ಆದರೂ ಬೆಲೆ ದೊರಕುತ್ತದೆ. ಇಲ್ಲದೆ ಹೋದಲ್ಲಿ ರೈತರ ಗೋಳಿಗೆ ಕೇಳುವವರೇ ಇಲ್ಲದಂತಾಗುತ್ತದೆ ಎಂದರು.
ಹೋರಾಟ ಮುಂದುವರಿಕೆ: ಕೇಂದ್ರ ಸರ್ಕಾರ 6 ತಿಂಗಳಿಗೂ ಹೆಚ್ಚಿನ ಅವಧಿಯ ತೊಗರಿ ಬೆಳೆಗೆ 4,300 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದ್ದು ಅವೈಜ್ಞಾನಿಕ, ಬೆಂಬಲ ಬೆಲೆ ಹೆಚ್ಚಿಸಬೇಕೆಂದು ಹೋರಾಟ ನಡೆಸಲಾಗುತ್ತದೆ. ತೊಗರಿಗೆ ಪ್ರತಿ ಕ್ವಿಂಟಲ್‌ಗೆ 6,450 ಬೆಲೆ ನಿಗದಿಪಡಿಸಬೇಕು. ಇದು ಡಾ. ಸ್ವಾಮಿನಾಥನ್ ಅವರು ನೀಡಿರುವ ವರದಿಯ ಆಧರಲ್ಲಿ ಕೇಳುತ್ತಿರುವ ಬೆಲೆಯಾಗಿದೆ. ಕೇಂದ್ರ ತೊಗರಿ ವಿಚಾರದಲ್ಲಿ ಎಲ್ಲಾ ಪೂರ್ವಾಗ್ರಹಗಳನ್ನು ಬದಿಗೊತ್ತಿ ತಕ್ಷಣ ಈಗಿರುವ ಬೆಂಬಲ ಬೆಲೆಯನ್ನು ಪರಿಷ್ಕರಿಸಿ 6,450 ಇರುವಂತೆ ನೋಡಿಕೊಳ್ಳಬೇಕೆಂದರು.
ತೊಗರಿಯನ್ನು ಸುಂಕರಹಿತವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದಲೂ ತೊಗರಿ ಕಣಜದಲ್ಲಿ ಬೆಲೆ ಪಾತಾಳ ಸೇರುವಂತಾಗಿದೆ. ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳುವ ತೊಗರಿಗೆ ಶೇ.30ರಷ್ಟು ಸುಂಕ ವಿಧಿಸಬೇಕು. ಅದನ್ನೆಲ್ಲ ಬಿಟ್ಟು ಸುಂಕ ಮುಕ್ತವಾಗಿ ತೊಗರಿ ಆಮದು ಆದಲ್ಲಿ ದೇಶಿ ತೊಗರಿಗೆ, ಅದನ್ನೇ ನಂಬಿರುವ ರೈತರಿಗೆ ಪೆಟ್ಟು ಬೀಳುತ್ತದೆ ಎಂದರು.
ದೆಹಲಿಗೆ ನಿಯೋಗ ಹೋಗಲಿ: ಸಿಎಂ ಸಿದ್ದರಾಮಯ್ಯ ತೊಗರಿ ವಿಚಾರದಲ್ಲಿ ಅಲಕ್ಷತನ ಮಾಡಬಾರದು. ಬೆಂಬಲ ಬೆಲೆ ಪರಿಷ್ಕರಣೆ ಹಾಗೂ ಸುಂಕ ವಿಧಿಸಿ ತೊಗರಿ ಆಮದಿಗೆ ಮುಂದಾಗುವಂತೆ ಕೇಂದ್ರದ ಮೇಲೆ ಒತ್ತಡ ತರಲು ನಿಯೋಗ ತೆರಳಬೇಕು. ಅಡಕೆಗೆ ಸಂಕಷ್ಟ ಬಂದಾಗ ರಾಜ್ಯ ಸರ್ಕಾರ ಕೇಂದ್ರಕ್ಕೆ ನಿಯೋಗ ಹೋಯ್ತು. ತೊಗರಿಗೂ ಸಂಕಷ್ಟ ಬಂದಿರುವಾಗ ಯಾಕೆ ನಿಯೋಗದಲ್ಲಿ ಹೋಗಬಾರದು. ನಮ್ಮ ರೈತರ ನೋವು- ದುಃಖ, ತೊಂದರೆಗಳನ್ನು ರಾಜ್ಯ ಸರ್ಕಾರವೇ ಕೇಂದ್ರದ ಗಮನಕ್ಕೆ ತರಬೇಕು. ರೈತರ ನೆರವಿಗೆ ಬರಲು ಸರ್ಕಾರ ತಕ್ಷಣ ದೆಹಲಿಗೆ ನಿಯೋಗ ಹೋಗಲು ಸಿದ್ಧವಾಗಬೇಕು ಎಂದರು.
ಹೋಬಳಿಗೊಂದು ಕೇಂದ್ರ ತೆರೆಯಿರಿ: ಈಗಾಗಲೇ 16 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಇದು ಯಾತಕ್ಕೂ ಸಾಲದು, ಗುಲ್ಬರ್ಗ ಜಿಲ್ಲೆಯೊಂದರಲ್ಲೇ 4 ಲಕ್ಷ ಹೆಕ್ಟರ್ ತೊಗರಿ ಬೆಳೆ ಇದೆ. ಆದ್ದರಿಂದ ಹೋಬಳಿಗೊಂದು ಕೇಂದ್ರ ತೆರೆಯಬೇಕು. ಇದಲ್ಲದೆ ಬಿಜಾಪುರ ಹಾಗೂ ಬಾಗಲಕೋಟೆಯಲ್ಲಿಯೂ ಖರೀದಿಗೆ ಕೇಂದ್ರಗಳು ಆರಂಭವಾಗಬೇಕು. ಪ್ರತಿ ರೈತರಿಂದ 20 ಕ್ವಿಂಟಲ್ ಮಾತ್ರ ಖರೀದಿಸಲಾಗುತ್ತದೆ ಎಂದು ಷರತ್ತು ಹಾಕಲಾಗಿದೆ. ಇದನ್ನು ತಕ್ಷಣ ಕೈಬಿಡಬೇಕು ಅಥವಾ ಪ್ರತಿ ರೈತರಿಂದ ಕನಿಷ್ಠ 50 ಕ್ವಿಂಟಲ್ ತೊಗರಿ ಖರೀದಿಸಬೇಕು ಎಂದು ಮಾನ್ಪಡೆ ಆಗ್ರಹಿಸಿದರು.
ಕಳೆದ ಬಾರಿ ಪ್ರತಿ ರೈತರಿಂದ 25 ಕ್ವಿಂಟಲ್ ತೊಗರಿಯನ್ನು ಸರ್ಕಾರವೇ ಖರೀದಿಸಿದೆ. ಈ ಬಾರಿ 5 ಕ್ವಿಂಟಲ್ ಕಡಿತ ಮಾಡಲಾಗಿದೆ. ಬತ್ತ, ಮೆಕ್ಕೆಜೋಳಕ್ಕೆ ಇಂತಹ ಸೀಮಿತತೆಯೇ ಇಲ್ಲ. ಅವುಗಳಿಗೆ ಇರದ ಇತಿಮಿತಿ ತೊಗರಿ ಖರೀದಿಯಲ್ಲೇ ಯಾಕೆ ಎಂದು ಪ್ರಶ್ನಿಸಿದರು. ಸರ್ಕಾರ ರೈತರಿಗೆ ಅನುಕೂಲವಾಗಿರುವಂತಹ ಷರತ್ತು ವಿದಿಸಬೇಕೇ ಹೊರತು ಕಿರಿಕಿರಿಯ ನಿಯಮಗಳಿಗೆ ಆಸ್ಪದ ನೀಡಬಾರದು ಎಂದರು.
ದಾಲ್ ಮಿಲ್ ಸಂಘದ ಶಿವಶರಣಪ್ಪ ನಿಗ್ಗುಡಗಿ, ಶಾಂತಕುಮಾರ, ಧಾನ್ಯ ವರ್ತಕರ ಪರವಾಗಿ ಶಿವಕುಮಾರ ಘಂಟಿ, ರವಿ ದಂಡೋತಿಕರ್, ಮಲ್ಲಿಕಾರ್ಜು ಶಾಬಾದಿ, ತೊಗರಿ ಬೆಳೆಗಾರರ ಸಂಘದ ಪರವಾಗಿ ಕರಿಸಿದ್ದಪ್ಪ ಪಾಟೀಲ್, ಕಿಸಾನ್ ಸಭಾದ ಪರವಾಗಿ ಭೀಮಾಶಂಕರ, ಎಚ್ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಹಾಗೂ ಇತರರು ಸಭೆ- ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.