ಮಂದಗತಿಯಲ್ಲಿ ವಸತಿ ನಿಲಯದ ಕಾಮಗಾರಿ
ಶಹಾಪುರ: ತಾಲೂಕಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಸರ್ಕಾರಿ ಬಾಲಕರ ವಸತಿ ನಿಲಯದ ಕಾಮಗಾರಿ ಮಂದಗತಿಯಲ್ಲಿ ನಡೆದಿದ್ದು, ಸದ್ಯ ಪರಿಕ್ಷಾ ಸಮಯವಾದ್ದರಿಂದ ಧೂಳು ತುಂಬಿದ ವಸತಿ ನಿಲಯದಲ್ಲಿ ವಾಸ್ತವ್ಯ ಮಾಡಲು ವಿಪರೀತ ತೊಂದರೆಯಾಗಿದೆ. ಇದರಿಂದ ರಿಪೇರಿಕಾರ್ಯ ತಕ್ಷಣ ನಿಲ್ಲಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಶಿವಪುತ್ರಪ್ಪ ಜವಳಿ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಮಾಡಿದ್ದಾರೆ.
ನಿರ್ಮಿತಿ ಕೇಂದ್ರದವರು ವಸತಿ ನಿಲಯದ ರಿಪೇರಿ ಕಾರ್ಯದ ಜವಾಬ್ದಾರಿ ಹೊತ್ತುಕೊಂಡಿದ್ದು, ಕಾಮಗಾರಿ ಶೀಘ್ರ ಮುಗಿಸದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ದಿನನಿತ್ಯ ವಸತಿನಿಲಯದ ಬಾಲಕರು ಧೂಳು, ಸಿಮೆಂಟ್, ಉಸುಕಿನ ರಾಶಿಯಲ್ಲಿಯೇ ಓಡಾಡುತ್ತ ಕಾಲ ಕಳೆಯುವಂತಾಗಿದೆ. ಇನ್ನು ಪರೀಕ್ಷೆಗಳು ಬಂದಿರುವುದರಿಂದ ಓದುವುದು ಕೂಡಾ ಕಷ್ಟ. ಇಡೀ ವಸತಿ ನಿಲಯದ ವಾತಾವರಣ ಅಸ್ತವ್ಯಸ್ತವಾಗಿದೆ. ಸದ್ಯ ವಸತಿ ನಿಲಯದ ವಿದ್ಯಾರ್ಥಿಗಳನ್ನು ಬೇರೆ ವಸತಿನಿಲಯಕ್ಕೆ ಅವಕಾಶ ನೀಡಬೇಕು ಅಥವಾ ಕಾಮಗಾರಿ ಸಂಪೂರ್ಣ ನಿಲ್ಲಿಸಿ ಬೇಸಿಗೆ ರಜೆ ದಿನಗಳಲ್ಲಿ ಮುಂದುವರಿಸಬೇಕು. ಜವಳಿ ಸಗರದ ಬಾಲಕಿಯರ ವಸತಿ ನಿಲಯದಲ್ಲಿಯು ಇಂಥ ಅವ್ಯವಸ್ಥೆ ಮುಂದುವರೆದಿದೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತಕ್ಷಣ ಸಮಾಜ ಕಲ್ಯಾಣ ಇಲಾಖೆ ಕಾಳಜಿ ವಹಿಸದಿದ್ದರೆ ಸಮಾಜ ಕಲ್ಯಾಣ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ. ಈ ಕುರಿತು ಹೋರಾಟ ಮಾಡಲು ಹಿಂಜರಿಯುವುದಿಲ್ಲವೆಂದು ತಿಳಿಸಿದ್ದಾರೆ.