ಎಲ್ಲ ಹೋಬಳಿಗಳಲ್ಲಿ ವಸತಿ ಶಾಲೆಗಳು
ಗುಲ್ಬರ್ಗ: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅನುಕೂಲವಾಗುವಂತೆ ರಾಜ್ಯದ ಎಲ್ಲ ಹೋಬಳಿ ಮಟ್ಟದ ಗ್ರಾಮಗಳಲ್ಲಿ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಹಾಗೂ ಗುಲ್ಬರ್ಗ ಜಿಲ್ಲಾಡಳಿತ ಇವರ ಸಂಯುಕ್ತಾಶ್ರಯದಲ್ಲಿ ಆಳಂದ ತಾಲೂಕಿನ ಕೊರಳ್ಳಿ ತಾಂಡಾದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ (ಪರಿಶಿಷ್ಟ ಜಾತಿ) ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
8 ಕೋಟಿ ವೆಚ್ಚದಲ್ಲಿ: ಕೊರಳ್ಳಿ ತಾಂಡಾದಲ್ಲಿ ಪರಿಶಿಷ್ಟ ಜಾತಿಯ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ 8 ಕೋಟಿ ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ಪ್ರಾರಂಭಿಸಲಾಗುತ್ತಿದೆ. ಮಕ್ಕಳಿಗೆ ಓದಲು ಬೇಕಾದ ಎಲ್ಲ ಸೌಕರ್ಯ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹೆಣ್ಣು ಮಕ್ಕಳೊಂದಿಗೆ ವಸತಿ ನಿಲಯದಲ್ಲಿ ಒಬ್ಬ ನರ್ಸ್ ಹಾಗೂ ವಾರ್ಡನ್ ನೇಮಿಸಲಾಗುವುದು. ಅಲ್ಲದೆ ಬೋಧಕ ಸಿಬ್ಬಂದಿಗೂ ವಸತಿ ಕಲ್ಪಿಸಲಾಗುತ್ತದೆ ಎಂದರು.
100 ಎಕರೆ ಲ್ಯಾಂಡ್‌ಬ್ಯಾಂಕ್ ಮನವಿ: ಆಳಂದ ಶಾಸಕ ಬಿ.ಆರ್. ಪಾಟೀಲ್ ಮಾತನಾಡಿ, ಆಳಂದ ಪಟ್ಟಣದ ಸುತ್ತಮುತ್ತ ಸರ್ಕಾರಿ ನಿವೇಶನ ಇಲ್ಲದಿರುವುದರಿಂದ ಹಾಸ್ಟಲ್ ಮತ್ತು ಶಾಲಾ ಕಟ್ಟಡಗಳಿಗೆ ತೊಂದರೆಯಾಗುತ್ತಿದೆ.
ಸಚಿವರು ಪ್ರತಿ ತಾಲೂಕಿಗೆ ಸುಮಾರು 100 ಎಕರೆ ಲ್ಯಾಂಡ್‌ಬ್ಯಾಂಕ್‌ನ್ನು ಸ್ಥಾಪಿಸುವ ಕುರಿತಾಗಿ ಅಧಿವೇಶನದಲ್ಲಿ ಚರ್ಚಿಸಿ ಕ್ರಮ ಜರುಗಿಸಬೇಕೆಂದರು.
ಕಾರ್ಯಕ್ರಮದಲ್ಲಿ ಗುಲ್ಬರ್ಗ ಗ್ರಾಮೀಣ ಶಾಸಕ ಜಿ. ರಾಮಕೃಷ್ಣ, ಜಿಪಂ ಅಧ್ಯಕ್ಷ ರಮೇಶ ಎಸ್. ಮರಗೋಳ, ಜಿಪಂ ಸದಸ್ಯರಾದ ಮೀನಾಕ್ಷಿ ಗುರುಶರಣ ಪಾಟೀಲ್, ಸಿದ್ರಾಮ ಪ್ಯಾಟಿ, ಆಳಂದ ತಾಪಂ ಅಧ್ಯಕ್ಷೆ ಪ್ರಭಾವತಿ ಧಗೆ, ಮುಖಂಡರಾದ ಭೀಮಣ್ಣ ಬಿಲ್ಲವ, ಮಹಾಂತಪ್ಪ ಸಾಲಿಮನಿ, ವಿಠ್ಠಲರಾವ ಪಾಟೀಲ್, ಈರಣ್ಣ ಮಂಗಾಣೆ, ಕೊರಳ್ಳಿ ಗ್ರಾಪಂ ಅಧ್ಯಕ್ಷ ಬಾಬು ಪವಾರ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ವಿಜಯಲಕ್ಷ್ಮಿ ಕೋಬಾಳ ಇತರರು ಉಪಸ್ಥಿತರಿದ್ದರು.