ಐತಿಹಾಸಿಕ ಚಿತ್ರಕಲಾ ಶಿಬಿರ ಯಶಸ್ವಿ
ಸಿಂಧನೂರು: ನಗರದ ನೂತನ ಲಲಿತಕಲಾ ಕಾಲೇಜು ವತಿಯಿಂದ ಜರುಗಿದ 2013- 14ನೇ ಶೈಕ್ಷಣಿಕ ಸಾಲಿನ ಮೊದಲನೇ ವರ್ಷದಿಂದ 5ನೇ ವರ್ಷದ ವಿದ್ಯಾರ್ಥಿಗಳ 12 ದಿನಗಳ ಚಿತ್ರಕಲಾ ಶಿಬಿರ ಐತಿಹಾಸಿಕ ಹಂಪಿ ಸ್ಮಾರಕಗಳ ಮಧ್ಯ ಯಶಸ್ವಿಯಾಗಿ ಜರುಗಿತು ಎಂದು ಕಾಲಾಜಿನ ಪ್ರಾಚಾರ್ಯ ರಮೆಶ ಸಜ್ಜನ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿದಿನ ವಿದ್ಯಾರ್ಥಿಗಳು ತಮ್ಮ ಕಲಾ ಪ್ರತಿಭೆಯನ್ನರಳಿಸಲು ಐತಿಹಾಸಿಕ ಸ್ಮಾರಕಗಳ ನಡುವೆ ಕುಳಿತು, ಆ ಸ್ಮಾರಕಗಳಿಗೆ ಜೀವ ತುಂಬುವ ಕೆಲಸ ಅವರ ಕುಂಚಗಳಿಂದ ನಡೆಯುತ್ತಿತ್ತು. ಚಿತ್ರಕಲಾವಿದರಿಗೆ ಬಹುಪ್ರಿಯ ಸಮಯಗಳಾದ ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಸಂದರ್ಭಗಳ ಚಿತ್ರಗಳನ್ನು ನಿತ್ಯವೂ ಕಾಯ್ದು ಕುಳಿತು ಸೆರೆ ಹಿಡಿಯುತ್ತಿದ್ದುದ್ದು ವಿಶೇಷವಾಗಿತ್ತು.
ವಿವಿಧ ಕಲಾಕೃತಿ ರಚನೆ: ಹಂಪಿಯ ಸ್ಮಾರಕಗಳಾದ ವಿರೂಪಾಕ್ಷ ದೇವಸ್ಥಾನದ ಗೋಪುರ, ರಥಬೀದಿ, ಪುಷ್ಕರಣಿ, ಕೃಷ್ಣ ದೇವಸ್ಥಾನ, ಮಹಾನವಮಿ ದಿಬ್ಬ, ಹಜಾರಾರಾಮ ದೇವಸ್ಥಾನ, ಕಲ್ಲಿನ ರಥ, ವಿಜಯವಿಠ್ಠಲ ದೇವಸ್ಥಾನ, ಪುರಂದರ ಮಂಟಪ, ಕಮಲ ಮಹಲ್, ರಾಣಿ ಮಹಲ್, ಕವಲು ಗೋಪುರ, ತುಲಾಭಾರ, ಸೂಳೆ ಬಜಾರ, ಆನೆ ಸಾಲು, ಆಂಜನೇಯ ದೇವಸ್ಥಾನ ಸೇರಿದಂತೆ ಅನೇಕ ಸ್ಥಳಗಳ ಕಲಾಕೃತಿಗಳನ್ನು ರಚಿಸಿದರು ಎಂದು ತಿಳಿಸಿದ್ದಾರೆ.
ಜಲವರ್ಣ, ಏಕ ಜಲವರ್ಣ, ಅಕ್ರಲಿಕ್ ಜಲವರ್ಣ, ಪೇಸ್ಟಲ್, ರೇಖಾಚಿತ್ರ, ಕಪ್ಪು ಪೆನ್ನು ರೇಖಾಚಿತ್ರ, ಏಕವರ್ಣ ಪೆನ್ಸಿಲ್, ಬಹುವರ್ಣ ಪೆನ್ಸಿಲ್, ಹೀಗೆ ಅನೇಕ ಮಾಧ್ಯಮಗಳಲ್ಲಿ ಐತಿಹಾಸಿಕ ಸ್ಮಾರಕಗಳು ಸ್ಥಳದಲ್ಲಿಯೇ ಮೂಡಿ ಬಂದವು. ಶಿಬಿರಾರ್ಥಿಗಳು ಬಿಡಿಸಿದ ಕಲಾಕೃತಿಗಳನ್ನು ದೇಶ-ವಿದೇಶಗಳ ಪ್ರವಾಸಿಗರು ಖರೀದಿಸಿ, ಪ್ರೋತ್ಸಾಹಿಸಿ ತಮ್ಮ ಕಲಾಪ್ರೇಮವನ್ನು ಮೆರೆದರು. ಇದರಲ್ಲಿ ರಷ್ಯಾದ ಫ್ರಿಂಜಿ, ಅಮೆರಿಕದ ಲೂಸಿಯಾ, ಚೀನಾದ ಮಾರಿಯಾ ಪ್ರಮುಖರು ಎಂದು ವಿವರಿಸಿದ್ದಾರೆ.