ಕಲಿಕೆಗೆ ಕೈಗಳಿಲ್ಲದಿದ್ರೂ ಕಾಲಿವೆಯಲ್ಲ..
ಕನ್ನಡಪ್ರಭ ವಾರ್ತೆ ಆಳಂದ ಡಿ.29
ತಾಲೂಕಿನ ಸಾವಳೇಶ್ವರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ಓದುತ್ತಿರುವ ಲಕ್ಷ್ಮೀಪುತ್ರ ಅಮೃತ ಮಾಡಿಯಾಳೆ ಎಂಬ ವಿದ್ಯಾರ್ಥಿಗೆ ಕೈಗಳಿಲ್ಲದಿದ್ದರೂ ಕಾಲಿನಿಂದಲೇ ತನ್ನ ಸಹ ಪಾಠಿಗಳಂತೆ ಬರೆದು ಇತರರಿಗೆ ಆಶ್ಚರ್ಯ ಮೂಡಿಸುತ್ತಾನೆ.
ವಿದ್ಯಾರ್ಥಿ ಹುಟ್ಟಿನಿಂದಲೂ ಎರಡು ಕೈಗಳಿಲ್ಲದೇ ಜೀವನ ಸಾಗಿಸುವಂತಾಗಿದೆ. ಕೈಗಳು ಬೆಳೆಯದೇ ಮುಂಗೈಯಿ ಆಕಾರದಲ್ಲಿ ಬೆರಳುಗಳು ಕಾಣಿಸುತ್ತವೆ. ದೊಡ್ಡವನಾದ ಮೇಲೆ ಮಗು ಸರಿ ಹೊಂದಬಹುದು ಎಂಬ ತಂದೆ ತಾಯಿಗಳ ಆಸೆ ಹುಸಿಯಾಗಿದೆ. ಚಿಕಿತ್ಸೆ ನೀಡಿದರೂ ಕೈಗಳು ಮಾತ್ರ ಬೆಳದಿಲ್ಲ ಎನ್ನಲಾಗಿದೆ. ಕುಟುಂಬದಲ್ಲಿನ ಬಡತನದ ಬವಣೆಯಿಂದಾಗಿ ದೊಡ್ಡ ಚಿಕಿತ್ಸೆ ಸಾಧ್ಯವಾಗಿಲ್ಲ.
ತೀವ್ರ ಬಡ ಕುಟುಂಬ: ಗ್ರಾಮದಲ್ಲಿ ತಕ್ಕಮಟ್ಟಿನ ಕೆಲಸ ದೊರೆಯದ್ದಕ್ಕೆ ತಂದೆ ಪುಣೆಗೆ ವಲಸೆ ಹೋಗಿ ಕೂಲಿ ಕೆಲಸ ಮಾಡಿ ಉಳಿದ ಒಂದಿಷ್ಟು ಹಣವನ್ನು ಕುಟುಂಬ ನಿರ್ವಹಣೆಗೆ ಕಳುಹಿಸುತ್ತಿದ್ದಾರೆ. ತಾಯಿ ಗ್ರಾಮದಲ್ಲಿ ಮನೆ ಕೆಲಸದೊಂದಿಗೆ ಕೂಲಿಯೂ ಮಾಡಿ ಕುಟುಂಬ ನಿರ್ವಹಿಸುತ್ತಾರೆ.
ವಿದ್ಯಾರ್ಥಿ ಲಕ್ಷ್ಮೀಪುತ್ರನ ಜತೆಗೆ ಇನ್ನೂ ಇಬ್ಬರು ಹೆಣ್ಣು ಮಕ್ಕಳನ್ನು ಸಾಕುವಂಥ ಜವಾಬ್ದಾರಿ ತಾಯಿಯ ಹೆಗಲ ಮೇಲಿದೆ. 9 ವರ್ಷದ ಲಕ್ಷ್ಮೀಪುತ್ರನು ಸದ್ಯ 3ನೇ ತರಗತಿಯಲ್ಲಿ ಓದುತ್ತಿದ್ದಾನೆ. ಬರೆಯಲು ತೊಂದರೆ ಅನುಭವಿಸುತ್ತಿದ್ದರೂ, ಓದುವುದರಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಶಿಕ್ಷಕರು ಹೇಳಿಕೊಡುವ ಪಾಠಗಳನ್ನು ಕಂಠಪಾಠ ಮಾಡುವ ಪ್ರವೃತ್ತಿ ಇವನದ್ದಾಗಿದೆ.
ಅಧಿಕಾರಿ ಆಗುವಾಸೆ: ಮನೆಯವರ ಸಹಕಾರ, ಶಿಕ್ಷಕರ ಮಾರ್ಗದರ್ಶನದಲ್ಲಿ ಸರಿಯಾಗಿ ಅಭ್ಯಾಸ ಮಾಡುತ್ತಿರುವ ಅಂಗವಿಕಲನಾದರೂ ಸಹಪಾಠಿಗಳು ನನ್ನೊಂದಿಗೆ ಹೊಂದಿಕೊಂಡು ಸಹಕಾರ ಮಾಡುತ್ತಿದ್ದಾರೆ. ನನ್ನಂಥ ಕಷ್ಟ ಬೇರೆ ಯಾರಿಗೂ ಬರಬಾರದು ಎನ್ನುವುದು ನನ್ನ ಆಸೆಯಾಗಿದೆ. ಉನ್ನತ ಪದವಿ ಪಡೆದು ಅಧಿಕಾರಿಯಾಗಬೇಕೆಂಬ ಮಹದಾಸೆ ನನ್ನದಾಗಿದೆ ಎಂದು ಬಾಲಕ ಹೇಳಿಕೊಳ್ಳುತ್ತಾನೆ.
ನನ್ನ ತಂದೆ- ತಾಯಿಗಳು ನನ್ನನ್ನೇ ನಂಬಿಕೊಂಡು ಆಸೆ ಇಟ್ಟುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸರಿಯಾಗಿ ಓದಿ ಅವರ ಆಸೆಯನ್ನು ಈಡೇರಿಸುವ ಛಲ ನನ್ನದಾಗಿದೆ. ಬರೆಯಲು, ಊಟ ಮಾಡಲು ಹಾಗೂ ಇನ್ನಿತರ ಚಟುವಟಿಕೆಗಳನ್ನು ಕಾಲಿನಿಂದಲೇ ಮಾಡುವೆ. ಕಿವಿ, ಕಣ್ಣು, ಮೂಗು, ಬಾಯಿ ಎಲ್ಲವೂ ಸದೃಢವಾಗಿದ್ದರೂ ಎರಡು ಕೈಗಳು ಮಾತ್ರ ಅರ್ಧಕ್ಕೆ ಬೆಳೆದು ಯಾವುದಕ್ಕೂ ಉಪಯೋಗ ಬಾರದಂತಾಗಿವೆ ಎಂದು ಹೇಳುತ್ತಿರುವಾಗ ಬಾಲಕನ ಕಣ್ಣಂಚಿನಲ್ಲಿ ನೀರು ಚಿಮ್ಮಿದವು.
ಎಲ್ಲವೂ ಶಿವನಿಚ್ಛೆ: 'ನಮ್ಮ ಮನೆಯಲ್ಲಿ ಎರಡು ಕೈಗಳಿಲ್ಲದೆ ಅಂಗವಿಕಲ ರೂಪದಲ್ಲಿ ಜನಿಸಿದ ನನ್ನ ಮಗ ನಿಜವಾಗಿಯೂ ಲಕ್ಷೀಪುತ್ರನಾಗಿದ್ದಾನೆ. ಕೈಯಿಲ್ಲದಿರುವುದಕ್ಕೆ ಸ್ವಲ್ಪ ತೊಂದರೆಯಾಗುತ್ತದೆ. ಎಲ್ಲವೂ ಈತನನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಆದರೆ, ಎಲ್ಲವೂ ಆ ಶಿವನ ಅಪ್ಪಣೆಯಂತೆ ನಡೆಯುತ್ತದೆ' ಎಂದು ಬಾಲಕನ ತಾಯಿ ಮಲ್ಲಮ್ಮ ಮಾಡ್ಯಾಳೆ ಹೇಳುತ್ತಾರೆ.
'ಲಕ್ಷ್ಮೀಪುತ್ರ ಮಾಡ್ಯಾಳೆ ಓದಿನಲ್ಲಿ ಮುಂದಿದ್ದಾನೆ. ಕೈಗಳಿಲ್ಲದಕ್ಕೆ ಬರೆಯಲು ಕಾಲುಗಳನ್ನೇ ಉಪಯೋಗ ಮಾಡುತ್ತಾನೆ. ಎಲ್ಲರೊಂದಿಗೆ ಹೊಂದಿಕೊಂಡಿರುವ ಈತ ಪ್ರಾಮಾಣಿಕ ವಿದ್ಯಾರ್ಥಿಯಾಗಿದ್ದು, ಇತರರಂತೆ ಶಾಲೆಗೆ ತಪ್ಪದೇ ಬರುತ್ತಾನೆ. ಶಾಲೆಯಲ್ಲಿಯೂ ಜಾಣನಾಗಿದ್ದಾನೆ'.
- ಸಿದ್ರಾಮಪ್ಪ ಮುನ್ನೋಳ್ಳಿ, ಶಿಕ್ಷಕ
-ಶರಣಬಸಪ್ಪ ಬಬಲಾದ