'ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಿ'
ಸಿಂಧನೂರು; ದೇವರ ಹೆಸರಿನಲ್ಲಿ ಮಹಿಳೆಯರು ಮೂಢನಂಬಿಕೆಗಳಿಗೆ ಬಲಿಯಾಗುತ್ತಿದ್ದಾರೆ. ಅವರು ಶಿಕ್ಷಣ ಪಡೆಯುವ ಮೂಲಕ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂದು ಮುಕ್ತ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಪಿ.ವೀರಭದ್ರಪ್ಪ ಕುರುಕುಂದಿ ಹೇಳಿದರು.
ನಗರದ ಮೇದಾರ ಕೇತೇಶ್ವರ ಸಭಾಭವನದಲ್ಲಿ ಭಾನುವಾರ ಮೇದಾರ ಕೇತೇಶ್ವರರ ಜಯಂತ್ಯುತ್ಸವದಲ್ಲಿ ಮಾತನಾಡಿ, ಶ್ರಮವಹಿಸಿ ದುಡಿಯಬೇಕು. ಆ ಮೂಲಕ ಗಳಿಸಿದ ಹಣ ಶ್ರೇಷ್ಠವಾಗುತ್ತದೆ. ದುಶ್ಚಟಗಳಿಗೆ ಬಲಿಯಾಗಿ ಹಣವನ್ನು ಪೋಲು ಮಾಡಬಾರದು. ಮೇದಾರ ಬಂಧುಗಳ ಧರ್ಮ ಬಸವ ಧರ್ಮವಾಗಬೇಕಿದೆ ಎಂದರು.
ಲಿಂಗಾಯತ ಧರ್ಮ ಆಚರಣೆಗೆ ತನ್ನಿ: ಕಾಯಕದಲ್ಲಿ ಮೇದಾರರಾದರೂ, ಧರ್ಮದಿಂದ ಲಿಂಗಾಯತರಾಗಿದ್ದಾರೆ. ಈ ಜನಾಂಗ ಇನ್ನು ಶೈಕ್ಷಣಿಕವಾಗಿ ತೀರಾ ಹಿಂದುಳಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಕೇತಯ್ಯ ಶರಣರು ಮಲೆಯಮ್ಮನವರ ಬಗ್ಗೆ ತಮ್ಮ ವಚನಗಳಲ್ಲಿ ಎಲ್ಲೂ ಹೇಳಿಲ್ಲ. ಕಾಲ್ಪನಿಕ ದೇವತೆಗಳನ್ನು ಕೈಬಿಟ್ಟು, ಲಿಂಗಾಯತ ಧರ್ಮವನ್ನು ಸ್ವೀಕರಿಸಿ ಆಚರಣೆಗೆ ತರಬೇಕೆಂದು ಸಲಹೆ ನೀಡಿದರು.
ಗುರುಪೀಠಕ್ಕೆ 2.5 ಕೋಟಿ ಅನುದಾನ: ಮೇದಾರರು ಮೇಧಾವಿಗಳು, ಕಷ್ಟ ಜೀವಿಗಳಾಗಿದ್ದಾರೆ. ಮದ್ಯಪಾನ ಬಿಟ್ಟು, ಹಾಲಿನಲ್ಲಿ ಬದಾಮಿ ಹಾಕಿ ಕುಡಿದರೆ ಉತ್ತಮ ಆರೋಗ್ಯ ಕಂಡುಕೊಳ್ಳಬಹುದು. ಸರ್ಕಾರದಿಂದ ಮೇದಾರ ಕೇತೇಶ್ವರರ ಜಯಂತಿ ಆಚರಿಸುವಂತಾಗಬೇಕು. ರಾಜ್ಯ ಸರ್ಕಾರ ಗುರುಪೀಠಕ್ಕೆ 2.5 ಕೋಟಿ ಅನುದಾನ ನೀಡಿದೆ. ಸದ್ಯದಲ್ಲೇ ಗುರುಪೀಠ ಲೋಕಾರ್ಪಣೆಗೊಳ್ಳಲಿದೆ. ಶರಣ ಸಂಸ್ಕೃತಿಯಿಂದ ಮೇದಾರ ಪುಷ್ಪ ಅರಳಲು ಸಾಧ್ಯವೆಂದರು.