ವ್ಯಕ್ತಿತ್ವ ವಿಕಸನಕ್ಕೆ ನಾಟಕ ಸಹಕಾರಿಯಾಗಲಿ
ಗುಲ್ಬರ್ಗ: ಕನ್ನಡ ಉಳಿಬೇಕು.. ಬೆಳೀಬೇಕು.. ಎಂಬ ಹೇಳಿಕೆಗಳಿಂದ ಕನ್ನಡ ಬೆಳೆಯುವುದಿಲ್ಲ. ಕಲೆಗಳ ಮೂಲಕ ಕನ್ನಡ ಉಳಿಸಬೇಕು. ನಾಟಕಗಳ ಪ್ರದರ್ಶನಗಳ ಮೂಲಕ ಕನ್ನಡವನ್ನು ಬೆಳೆಸಬೇಕು. ಮಕ್ಕಳನ್ನು ಬಳಸಿಕೊಂಡು ರಂಗ ನಾಟಕಗಳ ಮೂಲಕ ಕನ್ನಡದ ನಿಜವಾದ ಬೆಳವಣಿಗೆ ಮಾಡುವ ಹಿನ್ನೆಲೆಯಲ್ಲಿ ಇಲ್ಲಿನ ಕನ್ನಡ ಭವನ ಅಂಗಳದಲ್ಲಿನ ಕಿರು ನಾಟಕಗಳ ರಚನಾ ಶಿಬಿರವು ವಿಶಿಷ್ಟ ಮತ್ತು ವಿನೂತನ ಪ್ರಯೋಗವಾಗಿ ಭಾನುವಾರ ನಡೆಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಈ ವಿನೂತನ ಪ್ರಯೋಗದಲ್ಲಿ, ಬೆಂಗಳೂರಿನ ಹಂಸಲೇಖ ದೇಸೀ ಕಾಲೇಜು ಸಹಯೋಗ ನೀಡಿತ್ತು.
ನಾಟಕ ಹೀಗಿರಲಿ: ಮಕ್ಕಳ ಮತ್ತು ವ್ಯಕ್ತಿ ವಿಕಸನಕ್ಕೆ ಪೂರಕವಾಗಬಲ್ಲ ಅಂಶಗಳು ನಾಟಕಗಳಲ್ಲಿ ಅಡಕ ಆಗಿರಬೇಕು ಮತ್ತು ಮಾತೇ ಮುಖ್ಯ ಆಗಿರಬೇಕೆಂಬ ಹಿನ್ನೆಲೆಯಲ್ಲಿ ನಾಟಕಗಳಲ್ಲಿ, ಮಾತುಗಾರಿಕೆ, ಭಾಷಾ ಸ್ಪಷ್ಟತೆ, ಆಂಗಿಕ ವಿಶ್ವಾಸ, ಸಭಾ ಸ್ಥೈರ್ಯ ಮತ್ತು ಸೃಜನಶೀಲತೆಯನ್ನು ಕಲಿಸುವಂತ ನಾಟಕಗಳು ರಚನೆಯಾಗಬೇಕೆಂದು ಹಂಸಲೇಖ ದೇಸೀ ಕಾಲೇಜಿನ ಸಂಸ್ಥಾಪಕಿ, ಗಾಯಕಿ ಲತಾ ಹಂಸಲೇಖ ತಿಳಿಸಿದರು. ಈ ಕಿರುನಾಟಕ ಶಿಬಿರವನ್ನು ಉದ್ಘಾಟಿಸಿದ ಹಿರಿಯ ಲೇಖಕ ಪ್ರೊ. ವಸಂತ ಕುಷ್ಟಗಿ ಮಾತನಾಡಿ, ಬೆಂಗಳೂರಿನಲ್ಲಿ ನಮ್ಮ ಭಾಗದ ನಾಟಕಗಳಿಗೆ ಆದ್ಯತೆ ನೀಡುವಲ್ಲಿ ಕಸಾಪದೊಂದಿಗೆ ಕೈಜೋಡಿಸಿದ ಹಂಸಲೇಖ ಅವರ ಕಾರ್ಯಕ್ಕೆ ಶ್ಲಾಘಿಸಿದರು.
ಪ್ರೊಜೆಕ್ಟರ್ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಮಾತನಾಡಿದ ಸಿಡಿಯನ್ನು ಪ್ರಸ್ತುತ ಪಡಿಸಲಾಯಿತು. ಹಂಸಲೇಖ ದೇಸೀ ಕಾಲೇಜಿನ ಡೈರೆಕ್ಟರ್ ಆಗಿರುವ ಮೋಹನ, ಸುನೀತಾ ವೇದಿಕೆಯಲ್ಲಿದ್ದರು. ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ಲೇಖಕರಾದ ಸುಬ್ರಾವ ಕುಲಕರ್ಣಿ, ಈಶ್ವರಪ್ಪ ಪರಹತಾಬಾದ್, ಶಂಕ್ರಯ್ಯ ಘಂಟಿ, ಲಕ್ಷ್ಮೀ ಶಂಕರ ಜೋಶಿ, ಚಾಮರಾಜ ದೊಡ್ಡಮನಿ, ಜಿ.ಎಸ್. ಮಾಲಿಪಾಟೀಲ, ರಾಜಶೇಖರ ಮಾಂಗ್, ಅಶೋಕ ತೋಟ್ನಳ್ಳಿ, ಪ್ರಭುಲಿಂಗ ಕಿಣಗಿ, ಕಿರಣ ಪಾಟೀಲ್, ಪ್ರಭುಲಿಂಗ ನೀಲೂರೆ, ಮಹಾಂತೇಶ ಮಡಿವಾಳ, ರಾಘವೇಂದ್ರ ಹಳಿಪೇಟ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಗಾಯಕರ ಧ್ವನಿಪರೀಕ್ಷೆ: ಮಧ್ಯಾಹ್ನ 4 ಗಂಟೆ ಸುಮಾರಿಗೆ ನಡೆದ ಧ್ವನಿ ಪರೀಕ್ಷೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಗಾಯಕರು ಭಾಗವಹಿಸಿದ್ದರು. ಜನಪದ ಮತ್ತು ಸಿನಿಮಾ ಹಾಡುಗಳನ್ನು ಹಾಡಿದ ಗಾಯಕರ ಧ್ವನಿಯನ್ನು ಹಂಸಲೇಖ ದೇಸೀ ಕಾಲೇಜಿನ ಲತಾ ಹಂಸಲೇಖ, ಸುನೀತಾ ಮತ್ತು ಮೋಹನ ಆಲಿಸಿದರು. ಕೆಲ ಸಲಹೆಗಳನ್ನು ನೀಡಿದರು. ಆಯ್ಕೆಯಾಗುವ ಗಾಯಕರನ್ನು ಬೆಂಗಳೂರಿಗೆ ಕರೆಸಿಕೊಳ್ಳಲಾಗುವುದು. ಹಂಸಲೇಖ ಸ್ಟುಡಿಯೋದಲ್ಲಿ ಮತ್ತೊಮ್ಮೆ ಹಾಡಿಸಲಾಗುವುದು. ಆಯ್ಕೆಯಾದ ಗಾಯಕರಿಗೆ ಸದವಕಾಶಗಳನ್ನು ಕಲ್ಪಿಸಲಾಗುವುದು ಎಂದು ಅವರು ಹೇಳಿದರು.