'ಸಂಗೀತದಲ್ಲಿ ಸರ್ವರೋಗ ನಿವಾರಕ ಶಕ್ತಿ'
ಆಳಂದ: ಸಂಗೀತಕ್ಕೆ ಮಾನಸಿಕ ನೆಮ್ಮದಿಯನ್ನುಂಟು ಮಾಡುವ ಶಕ್ತಿಯಿದೆ. ಸರ್ವ ರೋಗಗಳ ನಿವಾರಣೆ ಶಕ್ತಿ ಇದರಲ್ಲಿ ಅಡಗಿದೆ ಎಂದು ಆಕಾಶವಾಣಿ ಕಲಾವಿದ ಶಿವಶಂಕರ ಬಿರಾದಾರ ಹೇಳಿದರು.
ಸ್ಥಳೀಯ ಅಮರಜ್ಯೋತಿ ಪ್ರೌಢಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕಣತಿ ಇಲಾಖೆಯಿಂದ ಹಮ್ಮಿಕೊಂಡ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ರಮೇಶ ಮಾಡಿಯಾಳ ಮಾತನಾಡಿ, ಸಂಗೀತವು ದೈವದತ್ತ ಪ್ರತಿಭೆ ಎಂದು ತೀರ್ಮಾನಿಸದೇ, ಸಂಗೀತದ ಬಗೆಗೆ ಒಲವು ಮೂಡಿಸಿದರೆ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ಹೊಂದಲು ಸಾಧ್ಯವಾಗುತ್ತದೆ ಎಂದರು.
ಪುರಸಭೆ ಸದಸ್ಯೆ ಮಶಾಖಬೀ ಆರೀಪ್ ಅನ್ಸಾರಿ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವಜ್ಯೋತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಾಶಿನಾಥ ವಹಿಸಿ ಮಾತನಾಡಿದರು. ಎಚ್‌ಕೆಇ ಕನ್ನಡ ಪ್ರಾಧ್ಯಾಪಕ ಬಸವರಾಜ ಕಾಗೆ, ಬಾಲಕರ ಪಿಯು ಕಾಲೇಜು ಪ್ರಾಚಾರ್ಯ ಶಿವಶರಣಪ್ಪ ಮೂಳೆಗಾಂವ, ಕಸಾಪ ಮಾಜಿ ಅಧ್ಯಕ್ಷ ವಿಶ್ವನಾಥ ಭಕರೆ, ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್ ಬಿರಾದಾರ, ಮಹಾದೇವ ಪಂಚಾಳ, ಶಾಲೆಯ ಶಿಕ್ಷಕರು ಇದ್ದರು. ಶಿಕ್ಷಕ ವಿಕಾಸ ಕಾಂಬಳೆ ಕಾರ್ಯಕ್ರಮ ನಿರೂಪಿಸಿದರು. ಸಿದ್ದರಾಮ ಪಾಟೀಲ್ ವಂದಿಸಿದರು.
ಶಾಸಕರಿಂದ
ಕಾಮಗಾರಿ ವಿಳಂಬ: ಸುಭಾಷ್ ಗುತ್ತೇದಾರ್
ಗುಲ್ಬರ್ಗ: ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಆಳಂದ ತಾಲೂಕಿನ ಸಾವಳೇಶ್ವರ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಕಟ್ಟಡ ಮಂಜೂರಾಗಿದೆ. ಆದರೆ, ಈಗಿನ ಶಾಸಕ ಬಿ.ಆರ್. ಪಾಟೀಲ್ ಅವರು ಕಾಮಗಾರಿಗೆ ವಿಳಂಬ ಮಾಡಿದ್ದಾರೆಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಆರೋಪಿಸಿದ್ದಾರೆ.
ನನ್ನ ಅವಧಿಯಲ್ಲಿ 9 ಎಕರೆ 27 ಗುಂಟೆ ಜಮೀನು ಮಂಜೂರಾಗಿತ್ತು. ಕಟ್ಟಡ ಕಾಮಗಾರಿಗೆ ಸರ್ಕಾರ ಕೂಡ ಹಣ ಮಂಜೂರು ಮಾಡಿದೆ. ಗುತ್ತಿಗೆದಾರರು ಕೆಲಸ ಪ್ರಾರಂಭಿಸಲು ಉತ್ಸುಕರಾಗಿದ್ದಾರೆ. ಆದರೆ, ಶಾಸಕ ಬಿ.ಆರ್. ಪಾಟೀಲ್ ನಾನು ದಿನಾಂಕ ನೀಡುವವರೆಗೆ ಕಾಮಗಾರಿ ಪ್ರಾರಂಭಿಸುವಂತಿಲ್ಲ ಎಂದು ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಧಮಕಿ ಹಾಕಿದ್ದಾರೆ. ಇದರಿಂದ ತಾಲೂಕಿನ ಅಭಿವೃದ್ಧಿ ಬಗ್ಗೆ ಇವರಿಗಿರುವ ಕಾಳಜಿ ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.
ಇಂದು ಬಾರ್, ರೆಸ್ಟೋರೆಂಟ್
ತೆರವಿಗೆ ಒತ್ತಾಯ
ಗುಲ್ಬರ್ಗ: ನಗರದ ಜನನಿಬಿಡ ಸ್ಥಳಗಳಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಬಹುಜನ ಹೋರಾಟ ಸಮಿತಿ ಡಿ.30ರಂದು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರ ಮನೆಯ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದೆ.ಬಾರ್ ಮತ್ತು ರೆಸ್ಟೋರೆಂಟ್‌ಗಳು ಜನನಿಬಿಡ ಸ್ಥಳಗಳಲ್ಲಿರುವುದರಿಂದ ಸುತ್ತಮುತ್ತಲಿನ ಶಾಲೆಗಳು, ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ಬಾಲಕಿಯರ ವಸತಿ ನಿಲಯಗಳು ಇರುವುದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ಸತೀಶ ಮಾಲೆ, ರಾಜು ಕಾಂಬಳೆ, ರಾಜು ನಿಂಬಾಳಕರ್, ರಾಹುಲ್ ತೊಂಟೆ ತಿಳಿಸಿದ್ದಾರೆ.
ಜ.17ರಂದು ಹರಾಜು
ಗುಲ್ಪರ್ಬ: ಪೊಲೀಸ್ ಇಲಾಖೆಯಲ್ಲಿರುವ 47 ನಿರುಪಯುಕ್ತ ಸಾಮಗ್ರಿಗಳಿಗೆ ಜ.17ರಂದು ನಗರದ ಹಳೆಯ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಬಹಿರಂಗ ಹರಾಜು ಕರೆಯಲಾಗಿದೆ.ಹೆಚ್ಚಿನ ಮಾಹಿತಿಗೆ ಜಿಲ್ಲಾ ಪೊಲೀಸ್ ಕಚೇರಿ ದೂ- 08472-263606ನ್ನು ಸಂಪರ್ಕಿಸುವಂತೆ ಪೊಲೀಸ್ ಅಧೀಕ್ಷಕರು ಕೋರಿದ್ದಾರೆ.
ಅರ್ಜಿ ಆಹ್ವಾನ
ಗುಲ್ಪರ್ಬ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2013-14ನೇ ಸಾಲಿಗೆ ಅಲ್ಪಸಂಖ್ಯಾತರ ಸಮುದಾಯದ ನಿರುದ್ಯೋಗಿ ಅಭ್ಯರ್ಥಿಗಳಿಗೆ ಲಘು ಮೋಟಾರ್ ವಾಹನ ತರಬೇತಿ ನೀಡಲು ಜಿಲ್ಲೆಯ 8ನೇ ತರಗತಿ ಪಾಸಾದ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 18 ರಿಂದ 35 ವಯೋವುತಿಯ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿಗಳನ್ನು ಜಿಲ್ಲೆಯ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಗುಲ್ಬರ್ಗ ಕಚೇರಿಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯೊಂದಿಗೆ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಅಂಕಪಟ್ಟಿ, ಆಧಾರ ಕಾರ್ಡ್ ಸಂಖ್ಯೆ, ಆನ್‌ಲೈನ್ ನೋಂದಣಿ ಸಂಖ್ಯೆ ಹಾಗೂ ವರ್ಗಾವಣೆ ಪ್ರಮಾಣಪತ್ರದ ಝೆರಾಕ್ಸ್ ಪ್ರತಿಗಳನ್ನು ದೃಢೀಕರಣದೊಂದಿಗೆ ಲಗತ್ತಿಸಬೇಕು.
ಅರ್ಜಿಗಳನ್ನು ಜನವರಿ 6ರೊಳಗೆ ಮೇಲಿನ ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾ ವ್ಯವಸ್ಥಾಪಕರು ಕೋರಿದ್ದಾರೆ.
ನವೀಕರಣಕ್ಕೆ ಸೂಚನೆ
ಗುಲ್ಬರ್ಗ: ಸೇಡಂ ಉಪವಿಭಾಗದ ಸೇಡಂ, ಚಿತ್ತಾಪುರ ಮತ್ತು ಚಿಂಚೋಳಿಗಳಲ್ಲಿರುವ ಎಲ್ಲ ಹಣಕಾಸು ಸಂಸ್ಥೆಗಳು, ಲೇವಾದೇವಿಗಾರರು ಮತ್ತು ಗಿರವಿದಾರರು 2009ರಿಂದ 2014ರ ಅವಧಿಗೆ ನೋಂದಣಿಯಾದ ಹಾಗೂ ನವೀಕರಣಗೊಂಡ ಹಣಕಾಸು ಸಂಸ್ಥೆಗಳ ನವೀಕರಣ ಅವಧಿ 31. 3.2014ಕ್ಕೆ ಪೂರ್ಣಗೊಳ್ಳುತ್ತದೆ. ಸದರಿ ಹಣಕಾಸು ಸಂಸ್ಥೆಗಳು 2014 ರಿಂದ 19ರವರೆಗೆ ನವೀಕರಣಕ್ಕೆ ಕರ್ನಾಟಕ ಲೇವಾದೇವಿ ಕಾಯ್ದೆ 1965ರ ನಿಯಮ 5(2)ರನ್ವಯ ಜನವರಿ 31ರೊಳಗೆ ಲೈಸನ್ಸ್ ನವೀಕರಿಸಿಕೊಳ್ಳುವಂತೆ ಕೋರಲಾಗಿದೆ.